ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿ: ಡಿಸಿ

| Published : Aug 23 2024, 01:10 AM IST

ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಮಿಕ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಸಮಯದೊಳಗೆ ಪೂರ್ಣಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹನೂರಿನಲ್ಲಿ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ಕಾರ್ಮಿಕ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಸಮಯದೊಳಗೆ ಪೂರ್ಣಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿದರು.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬರುವಂತಹ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲು ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಆದರೆ ಕೆಲವೊಂದು ಕಾಮಗಾರಿಗಳ ನಿರ್ಮಾಣದ ಸಮಯ ಮುಗಿದಿದ್ದರೂ ಪೂರ್ಣಗೊಂಡಿಲ್ಲ. ಮುಖ್ಯಮಂತ್ರಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಬಂದಿದ್ದರೆ ಅವರಿಗೆ ಏನು ಉತ್ತರ ಹೇಳಬೇಕಿತ್ತು.? ಆದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಭಕ್ತರ ವಾಸ್ತವಕ್ಕಾಗಿ ನಿರ್ಮಾಣ ಮಾಡುತ್ತಿರುವ 386 ವಸತಿಗೃಹ ಕಾಮಗಾರಿಯನ್ನು ಇನ್ನು ಮೂರು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಇಲ್ಲದಿದ್ದರೆ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದರು. ಕ್ಷೇತ್ರದಲ್ಲಿ ಖಾಲಿ ನಿವೇಶನಗಳಲ್ಲಿ ತೋಟಗಾರಿಕೆ ಇಲಾಖೆ ಪಾರ್ಕ್ ಅಥವಾ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ಪುಣ್ಯ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿರುವ ಗುತ್ತಿಗೆದಾರರು ಕಾಮಗಾರಿಗಳನ್ನು ಸರ್ಕಾರಿ ಕೆಲಸವೆಂದು ಭಾವಿಸದೆ ತಮ್ಮ ಮನೆಯ ಕೆಲಸವೆಂದು ಪರಿಗಣಿಸಿ ಗುಣಮಟ್ಟದಿಂದ ಕಾಮಗಾರಿ ನಡೆಸಬೇಕು. ನೂತನ ವಸತಿಗೃಹದ ಕೆಲವು ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ, ಕೆಲವು ಸಾಮಾಗ್ರಿಗಳನ್ನು ಬದಲಾವಣೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು. ಅಧಿಕಾರಿಗಳು ಕಾಲ ಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ವರ್ಷವೆಲ್ಲ ನಡೆಯುವ ಜಾತ್ರೆ ಹುಣ್ಣಿಮೆ ಅಮಾವಾಸ್ಯೆ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಬಂದು ಹೋಗುವ ಧಾರ್ಮಿಕ ಕ್ಷೇತ್ರದಲ್ಲಿ ಭಕ್ತರಿಗೆ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಮಾತನಾಡಿ, ಮಹದೇಶ್ವರ ಬೆಟ್ಟದಲ್ಲಿನ ವಸತಿ ಗೃಹಗಳು ನಿರ್ಮಾಣ ಮಾಡಿ ಹಲವಾರು ವರ್ಷಗಳು ಕಳೆದಿರುವುದರಿಂದ ದುರಸ್ತಿ ಕಾರ್ಯವಾಗಬೇಕಿದೆ. ಗಿರಿ ದರ್ಶಿನಿ, ನಾಗಮಲೆ ಭವನ, ಜೇನುಮಲೆ ಭವನ ಮಹದೇಶ್ವರ ಭವನ ಸೇರಿದಂತೆ ಇನ್ನಿತರ ವಸತಿ ಗೃಹಗಳು ದುರಸ್ತಿಗೊಂಡಿರುವುದರಿಂದ ಬರುವಂತಹ ಭಕ್ತಾದಿಗಳಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ನಂತರ ಶಾಸಕರು ಮಾತನಾಡಿ, ಭಕ್ತರ ಅಗತ್ಯ ಸೌಲಭ್ಯಕ್ಕಾಗಿ ದುರಸ್ತಿ ಕಾರ್ಯ ಪ್ರಾರಂಭಿಸಿ ಭಕ್ತರಿಗೆ ಇನ್ನಷ್ಟು ಮೂಲಭೂತ ಸೌಲಭ್ಯ ಕಲ್ಪಿಸಿಕೊಡಿ ಎಂದು ಒಪ್ಪಿಗೆ ಸೂಚಿಸಿದರು.

ಸಾಲೂರು ಬೃಹನ್ ಮಠಾಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಉಪ ವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಗುರುಪ್ರಸಾದ್, ಲೋಕೋಪಯೋಗಿ ಇಲಾಖೆಯ ಎಇಇ ಚಿನ್ನಣ್ಣ, ಮಹೇಶ್, ಮಹದೇವಸ್ವಾಮಿ, ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕಾಧೀಕ್ಷಕ ನಾಗೇಶ್ ಹಾಜರಿದ್ದರು.