ಉಡಗಣಿ ಗುರು ರಾಘವೇಂದ್ರರ ಅದ್ಧೂರಿ ರಥೋತ್ಸವ

| Published : Aug 23 2024, 01:10 AM IST

ಸಾರಾಂಶ

ದ್ವಿತೀಯ ಮಂತ್ರಾಲಯವೆಂದು ಪ್ರಸಿದ್ಧಿ ಪಡೆದಿರುವ ಉಡಗಣಿ ರಾಘವೇಂದ್ರ ಮಠದ ರಾಯರ ರಥೋತ್ಸವದಲ್ಲಿ ವಿಜಯೇಂದ್ರ ಭಾಗವಹಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಶ್ರೀಗುರುರಾಯರ ೩೫೩ನೇ ವಷರ್ದ ಆರಾಧನಾ ಮಹೋತ್ಸವದಲ್ಲಿ ಗುರುವಾರ ರಾಯರ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

ದ್ವಿತೀಯ ಮೃತ್ತಿಕೆ ಮಂತ್ರಾಲಯವೆಂದು ಪ್ರಸಿದ್ಧಿ ಪಡೆದ ಉಡಗಣಿ ರಾಯರ ಮಠದಲ್ಲಿ ನಾಲ್ಕು ದಿನ ಆರಾಧನೆ ನಡೆಯುತ್ತಿದ್ದು, ಮೂರನೇ ದಿನವಾದ ಗುರುವಾರ ರಥೋತ್ಸವ ಅತ್ಯಂತ ಸಂಬ್ರಮದಿಂದ ನಡೆಯಿತು.

೧೨ಗಂಟೆಗೆ ಪ್ರಾರಂಭವಾದ ರಥೋತ್ಸವಕ್ಕೆ ತಾಲೂಕು ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪೂಜೆ ಸಲ್ಲಿಸಿ ಸಮಿತಿ ಅಧ್ಯಕ್ಷ ರಾಜೀವ ಅವರೊಂದಿಗೆ ರಥ ಎಳೆದು ಚಾಲನೆ ನೀಡಿದರು. ನಂತರ ಮಠಕ್ಕೆ ತೆರಳಿ ರಾಯರ ದಶರ್ನ ಪಡೆದರು. ಭಕ್ತರು ರಾಯರ ಕುರಿತು ಘೋಷಣೆ ಹಾಕುತ್ತಾ ವಿವಿಧ ಜನಪದ ವಾದ್ಯಗಳೊಂದಿಗೆ ನರ್ತಿಸುತ್ತಾ ರಥೋತ್ಸವದಲ್ಲಿ ಭಾಗಿಯಾಗಿದ್ದರು. ರಥೋತ್ಸವ ಮೆರವಣಿಗೆಯಲ್ಲಿ ಪುಟ್ಟ ಮಕ್ಕಳು ದೇವರ ಪೋಷಾಕು ಧರಿಸಿ ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ಮಹಿಳೆಯರು ಭಜನೆ ಮಾಡುತ್ತಾ ನತಿರ್ಸಿ ಭಕ್ತಿ ಪ್ರದರ್ಶಿಸಿದರು. ನಂತರ ವಿಜಯೇಂದ್ರ ಅವರು ಪ್ರಮುಖಕರಾದ ಗುರುಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೆನ್ನವೀರಪ್ಪ ಅವರೊಂದಿಗೆ ತೆರಳಿ ಸಾವರ್ಜನಿಕ ಅನ್ನಸಂತರ್ಪಣೆಯಲ್ಲಿ ಭಕ್ತರಿಗೆ ಬಡಿಸಿ ತಾವು ಊಟಮಾಡಿ ಸಂತಸ ಪಟ್ಟರು.

ಪ್ರತಿದಿನ ಅನ್ನ ಸಂತರ್ಪಣೆ ನಡೆಯುತ್ತಿದ್ದು, ರಥೋತ್ಸವದಂದು ಕನಿಷ್ಠ ೮ ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಶುಕ್ರವಾರ ಆರಾಧನೆ ಕೊನೆಯ ದಿನವಾಗಿದ್ದು, ಅಂದು ಪವಮಾನ ಹೋಮ, ವೇದವ್ಯಾಸರ ಪೂಜೆಯೊಂದಿಗೆ ಮುಕ್ತಾಯ ವಾಗಲಿದೆ.