ಕೃಷಿಕರಿಗೆ ನೀರು, ಗೊಬ್ಬರ ಒದಗಿಸಿದರೆ ಈ ನಾಡು ನೆಮ್ಮದಿ

| Published : Nov 06 2024, 11:56 PM IST

ಕೃಷಿಕರಿಗೆ ನೀರು, ಗೊಬ್ಬರ ಒದಗಿಸಿದರೆ ಈ ನಾಡು ನೆಮ್ಮದಿ
Share this Article
  • FB
  • TW
  • Linkdin
  • Email

ಸಾರಾಂಶ

If water and fertilizer are provided to the farmers, this country will be peaceful

-ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಅಭಿಮತ । ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಸಾಧಕ ರೈತರಿಗೆ ಸನ್ಮಾನ

---

ಕನ್ನಡಪ್ರಭವಾರ್ತೆ ಹೊಸದುರ್ಗ

ಕೃಷಿಕರಿಗೆ ಬೇಕಾದ ನೀರು, ಗೊಬ್ಬರ ಇತ್ಯಾದಿಗಳನ್ನು ಒದಗಿಸಿದರೆ ಈ ನಾಡು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ 3ನೇ ದಿನದ ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಕೃಷಿಯ ಮೂಲಕ ತಮ್ಮ ಬದುಕನ್ನು ಆನಂದಮಯ ಮಾಡಿಕೊಳ್ಳಬಹುದು. ಮನುಷ್ಯನಿಗೆ ಬೇಕಾಗಿರುವುದು ಹಣ ಆಧಿಕಾರ ಆಸ್ತಿಯಲ್ಲ ನೆಮ್ಮದಿ. ನೀರಾವರಿ ಅವಲಂಭಿತ ಕೃಷಿಕ ಸಂಕಷ್ಠದಲ್ಲಿದ್ದರೆ ಮಳೆಯಾಶ್ರಿತ ರೈತ ಖುಷಿಯಲ್ಲಿದ್ದಾನೆ. ರೈತ ಮಿಶ್ರ ಬೆಳೆ ಪದ್ಧತಿಯನ್ನು ಅನುಸರಿಸಿದರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.

ಚಿತ್ರದುರ್ಗ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ ಬಸವಕುಮಾರಸ್ವಾಮೀಜಿ ಮಾತನಾಡಿ, ಸಾಂಸ್ಕೃತಿಕ ಲೋಕವನ್ನು ಸೃಷ್ಟಿ ಮಾಡುವುದು ಮಠ ಪರಂಪರೆಯ ಸಂಪತ್ತು. ಇದನ್ನು ಸೃಷ್ಟಿ ಮಾಡುವುದು ಸಾಹಸದ ಕೆಲಸ, ರಂಗಭೂಮಿ ಕೇವಲ ಕಲಾವಿದರಿಂದ ಕೂಡಿರುವುದಿಲ್ಲ ಮಹಾಂತರಿಂದಲೂ ಕೂಡಿದೆ. ಇದೊಂದು ತಪೋಭೂಮಿಯನ್ನಾಗಿ ಮಾಡಿದ್ದಾರೆ ಎಂದರು

ಸಾವಯವ ಕೃಷಿ ಕುರಿತು ಬೆಂಗಳೂರಿನ ಸಂಪಾದಕಿ ವಿ ಗಾಯತ್ರಿ ಮಾತನಾಡಿ, ಹಸಿರು ಕ್ರಾಂತಿಯ ಮೂಲಕ ಈ ದೇಶ ಪ್ರವೇಶಿಸಿದ ವಿದೇಶಿ ಪ್ಯಾಕೆಜ್‌ ವ್ಯವಸ್ಥೆ ಅತಿಯಾದ ರಾಸಾಯಿನಿಕ , ಹೈಬ್ರಿಡ್‌ ತಳಿ, ಅತಿಯಾದ ವಿಷ ವನ್ನು ಈ ಭೂಮಿಗೆ ಉಣಿಸುವ ಮೂಲಕ ಈ ದೇಶದ ಸುಸ್ಥಿರ ಸಾವಯವ ವ್ಯವಸಾಯವನ್ನು ಆಕ್ರಮಿಸಿ ಈ ರೈತರ ಜೀವನ ಸಂಕಷ್ಠಕ್ಕೆ ಈಡಾಗಲು ಕಾರಣವಾಗಿದೆ ಎಂದರು.

ನಮ್ಮ ಸಾಂಪ್ರದಾಯಿಕ ಸಾವಯವ ಬೇಸಾಯ ವ್ಯವಸ್ಥೆಯಲ್ಲಿ ಅತ್ಯಂತ ಅಮೂಲ್ಯವಾದ ಗುಣಧರ್ಮದ ಕಾಳುಗಳನ್ನು ಬೆಳೆಯಬಹುದಾಗಿದ್ದು ಅದರ ಜೊತೆಯಲ್ಲಿ ಮಿಶ್ರ ಬೆಳೆ ವ್ಯವಸ್ಥೆಯನ್ನು ಆಳವಡಿಸಿಕೊಂಡರೆ ವರ್ಷವಿಡೀ ರೈತ ಲಾಭದಾಯಕವಾದ ಪರಿಸ್ಥಿತಿಯನ್ನು ಕಾಣಬಹುದಾಗಿದೆ. ಸಾವಯವ ರೈತರನ್ನು ಸಂಘಟಿಸುವುದು ಸವಾಲು ಜೊತೆಗೆ ಸಾವಯವ ಕೃಷಿಯಲ್ಲಿ ದೇಶಕ್ಕೆ ಉಣಬಡಿಸಬಹುದು ಎಂಬುದನ್ನು ಸಾಬೀತುಪಡಿಸಬೇಕಿದೆ ಎಂದರು.

ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್‌ ಮಾತನಾಡಿ, ರಂಗ ಶಿಬಿರಗಳ ಮೂಲಕ ಧಾರ್ಮಿಕ ಪ್ರಜ್ಞೆ ಹಾಗೂ ಅರಿವು ಮೂಡಿಸುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದ ರಂಗ ಜಂಗಮ ಎನಿಸಿಕೊಂಡಿದ್ದಾರೆ. 12 ನೇ ಶತಮಾನದಲ್ಲಿ ಶರಣರು ವಚನಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣರಾದರೆ 21 ಶತಮಾನದಲ್ಲಿ ಪಂಡಿತಾರಾಧ್ಯ ಶ್ರೀಗಳ ವಚನ ಸಾಹಿತ್ಯದ ನಾಟಕಗಳ ಮೂಲಕ ಸಮಾಜದ ಪರಿವರ್ತನೆಗೆ ಮುಂದಾಗಿದ್ದಾರೆ ಎಂದರು.

ಪಾಂಡೋಮಟ್ಟಿಯ ಗುರು ಬಸವಸ್ವಾಮೀಜಿ ಮಾತನಾಡಿ, ರೈತರು ದೇಶದ ಬೆನ್ನೆಲುಬು ಎಂದು ಮಾತನಾಡುತ್ತೇವೆ. ಆದರೆ, ರೈತರ ಬೆನ್ನೆಲುಬು ಮುರಿದವರು ರಾಜಕಾರಣಿಗಳು. ಏಕೆಂದರೆ ಕಾಯಕ ಮಾಡುವುದನ್ನು ಕಲಿಸದೆ ಸೋಮಾರಿತನ ಕಲಿಸಿದರು.ಕಾಯಕದ ನಾಯಕ ಬಸವಣ್ಣನವರ ಆಶಯದಂತೆ ಕಾಯಕನಿಷ್ಠ ಸಮಾಜ ಬೇಕು. ರೈತರಿಗೆ ನೀರು, ಬೆಳೆ, ಬೆಲೆ ಮತ್ತು ವಿದ್ಯುತ್ ಬೇಕು. ಇವಿಷ್ಟನ್ನು ಕೊಟ್ಟರೆ ರೈತರು ಕೈ ಎತ್ತಿ ಕೊಡುತ್ತಾರೆ ಎಂದರು.

ವಿಶ್ವೇಶ್ವರ ಸಜ್ಜನ ಮಾತನಾಡಿ, ಬಯಲು ಸೀಮೆಯನ್ನು ಮಲೆನಾಡು ಸೀಮೆ ಮಾಡುವ ಶಕ್ತಿ ರೈತ ಸಮುದಾಯಕ್ಕೆ ಮಾತ್ರ ಇದೆ ಎಂದರು.

ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹೊಳಲ್ಕೆರೆ ಶಾಸಕ ಚಂದ್ರಪ್ಪ, ಪರಿಷತ್ ಸದಸ್ಯ ಕೆ ಎಸ್ ನವೀನ್, ಶಾಸಕ ಹೆಚ್ ಡಿ ತಮ್ಮಯ್ಯ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಕೆ. ಕೃಷ್ಣಪ್ಪ, ಸಾಧಕ ರೈತರಾದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ತಲ್ಲೂರು ಗ್ರಾಮದ ಈ.ಸಿ.ಸಿದ್ಧಲಿಂಗೇಶ್ವರ, ದಾವಣಗೆರೆ ಜಿಲ್ಲೆಯ ಕುಂಬಳೂರು ಗ್ರಾಮದ ಆಂಜನೇಯ, ಚಿಕ್ಕಮಗಳೂರು ಜಿಲ್ಲೆಯ ಬೀರೂರಿನ ಎಂ. ಲೋಕೇಶಪ್ಪ, ತಿಪಟೂರು ತಾಲೂಕು ಎಂ ಎಸ್‌.ಪಾಳ್ಯ ಗ್ರಾಮದ ಸಿದ್ಧಲಿಂಗಸ್ವಾಮಿ ಹಾಗೂ ವಿಜಯನಗರ ಜಿಲ್ಲೆಯ ಹುಲಿಕೆರೆ ಗ್ರಾಮದ ಎಚ್.ವಿಶ್ವೇಶ್ವರ ಸಜ್ಜನ ಅವರುಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಪ್ರಾರಂಭದಲ್ಲಿ ಹೊಸದುರ್ಗದ ಅಕ್ಕನಬಳಗದ ಕಲಾವಿದರು ವಚನಗೀತೆ ಹಾಡಿದರು. ಗುರುಪಾದೇಶ್ವರ ಪ್ರೌಡಶಾಲೆ ಹಾಗೂ ಶಿವಕುಮಾರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ನೃತ್ಯ ರೂಪಕ ನಡೆಸಿಕೊಟ್ಟರು. ಕೊನೆಯಲ್ಲಿ ಟಿಕೆ ರಾಮ್‌ರಾವ್‌ ಕಾದಂಬರಿ ಆಧಾರಿತ ವೈಡಿ ಬದಾಮಿ ನಿರ್ದೆಶನದ ಬಂಗಾರದ ಮನುಷ್ಯ ನಾಟಕವನ್ನು ಶಿವಸಂಚಾರದ ಕಲಾವಿದರು ಅಭಿನಯಿಸಿದರು.------

ಪೋಟೋ, 6ಎಚ್‌ಎಸ್‌ಡಿ3 ಸಾಣೇಹಳ್ಳಿಯ ರಾಷ್ಟ್ರೀಯ ನಾಟಕೋತ್ಸವದಲ್ಲಿ ಸಾಧಕ ರೈತರುಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಪೋಟೋ, 6ಎಚ್‌ಎಸ್‌ಡಿ4: ಸಾಣೇಹಳ್ಳಿಯ ರಾಷ್ಟ್ರೀಯ ನಾಟಕೋತ್ಸವದಲ್ಲಿ ಹೊಸದುರ್ಗದ ನಿಜಲಿಂಗಪ್ಪ ಶಾಲೆಯ ಮಕ್ಕಳು ನೃತ್ಯ ರೂಪಕ ನಡೆಸಿಕೊಟ್ಟರು.