ಸಾರಾಂಶ
ವಿಶ್ವ ಜಲದಿನದ ಅಂಗವಾಗಿ ಭದ್ರಾನದಿಗೆ ವಿಶೇಷ ಪೂಜೆ ಸಲ್ಲಿಕೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ನೈಸರ್ಗಿಕ ಜಲಮೂಲಗಳನ್ನು ಸಂರಕ್ಷಿಸದಿದ್ದರೆ ಭವಿಷ್ಯದಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ ಎಂದು ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಹೇಳಿದರು.ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಹಾಗೂ ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟದಿಂದ ವಿಶ್ವ ಜಲದಿನದ ಅಂಗವಾಗಿ ಭದ್ರಾನದಿಗೆ ಶನಿವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು. ನೀರು ಪ್ರತಿಯೊಂದು ಜೀವಿಗೂ ಅವಶ್ಯಕ ಮೂಲಭೂತ ಸೌಕರ್ಯ. ಇಂದು ನಗರಿಕರಣದ ವೇಗ ಹಾಗೂ ಜಲಮೂಲಗಳ ವಿಪರೀತ ನಾಶದ ಪರಿ ಣಾಮವಾಗಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಶತಮಾನಗಳ ಹಿಂದೆ ಕೆರೆಗಳಿಂದ ಅಲಂಕೃತಗೊಂಡ ನಗರಗಳಲ್ಲಿ ಇಂದು ಕೆರೆಗಳು ಮಾಯವಾಗಿ ಕಟ್ಟಡಗಳು ಉದ್ಭವಿಸಿವೆ ಎಂದರು.ಹಿಂದಿನ ಕೆಲವು ವರ್ಷಗಳಲ್ಲಿ ಕೆರೆಗಳಿಂದ ನೀರಿನ ಸ್ವಾವಲಂಬನೆ ಸಾಧಿಸಿದ್ದ ನಗರಗಳು ಇಂದು ಕೆರೆಗಳ ಅವಸಾನ ದಿಂದ ನದಿಮೂಲ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಕೈಗಾರಿಕೆಗಳು, ಪರಿಸರ ಮಾಲಿನ್ಯ ಮುಂತಾದ ಕಾರಣ ಗಳಿಂದ ನೀರಿನ ಮೂಲಗಳು ಇಂದು ಅಶುದ್ಧವಾಗುತ್ತಿರುವುದು ಆತಂಕಕಾರಿ. ವಿಪರೀತ ಅಂತರ್ಜಲದ ಬಳಕೆಯಿಂದಲೂ ಇಂದು ಶುದ್ಧ ನೀರು ಲಭಿಸುವುದು ಮರೀಚಿಕೆಯಾಗುತ್ತಿದೆ ಎಂದು ಹೇಳಿದರು.ಈ ಹಿನ್ನೆಲೆಯಲ್ಲಿ ನೀರಿನ ಅವಶ್ಯ ಹಾಗೂ ಅಗತ್ಯತೆಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ. ನೀರಿನ ಸಂರಕ್ಷಣೆ ಕುರಿತು ಸಂಘ ಸಂಸ್ಥೆಗಳು, ಯುವ ಜನರಿಂದ ಜಾಗೃತಿ ಕೆಲಸಗಳು ಆಗಬೇಕಿದೆ. ಪ್ರಮುಖವಾಗಿ ನೈಸರ್ಗಿಕ ನೀರಿನ ಮೂಲಗಳಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜೇಸಿ ಸಂಸ್ಥೆ ವಿಶ್ವ ಜಲದಿನದ ಕಾರ್ಯಕ್ರಮವನ್ನು ವಿಶೇಷ ಆಚರಣೆ ಮೂಲಕ ಆಚರಿಸಿ ನೀರಿನ ಮಹತ್ವ ಸಾರುತ್ತಿದೆ ಎಂದರು.ಮಲೆನಾಡು ಒಳ್ಳೆಯ ಮನಸ್ಸು ಒಕ್ಕೂಟದ ಸಂಯೋಜಕ ಚೈತನ್ಯ ವೆಂಕಿ ಮಾತನಾಡಿ, ಪ್ರಕೃತಿ, ದೇವದತ್ತವಾಗಿ ದೊರೆ ತಿರುವ ನೀರನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೂ ಉತ್ತಮ ನೀರು ಕೊಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ. ಶುದ್ಧ ಹಾಗೂ ಉತ್ತಮ ಪ್ರಮಾಣದ ನೀರು ಇದ್ದರೆ ಮಾತ್ರ ಆರೋಗ್ಯ, ಪ್ರಕೃತಿ, ಜೀವ ಸಂಕುಲ ಉಳಿದುಕೊಳ್ಳಲು ಸಾಧ್ಯ ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ.ನೀರಿನ ಸಂರಕ್ಷಣೆಗೆ ವೈಜ್ಞಾನಿಕ ಕ್ರಮಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ. ಪ್ರಮುಖವಾಗಿ ಮಳೆ ನೀರು ಸಂಗ್ರಹವನ್ನು ಪ್ರತಿಯೊಂದು ಮನೆಗಳಲ್ಲೂ ಮಾಡಬೇಕಿದೆ. ಗ್ರಾಮೀಣ ಭಾಗದ ಕೃಷಿಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿ ಕೊಳ್ಳಬೇಕು. ಹಳ್ಳ, ಕೊಳ್ಳಗಳಿಗೆ ಚೆಕ್ ಡ್ಯಾಮ್‌ಗಳ ನಿರ್ಮಾಣವಾಗಬೇಕಿದೆ. ಕೈಗಾರಿಕೆಗಳು ನೀರಿನ ಮರುಬಳಕೆ ಮಾಡಿ ಕೊಳ್ಳುವ ಕ್ರಮ ಅನುಸರಿಸಬೇಕು. ಮಳೆ ನೀರು ಪೋಲಾಗದಂತೆ ಕ್ರಮವಹಿಸಬೇಕು. ಹೀಗಾದಾಗ ಮಾತ್ರ ನೀರಿನ ಸಂರಕ್ಷಣೆ ಸಾಧ್ಯವಿದೆ. ಇಲ್ಲದಿದ್ದರೆ ಮುಂದೊಂದು ದಿನ ನೀರಿಗಾಗಿ ಯುದ್ಧ ನಡೆದರೂ ಅಚ್ಚರಿಯಿಲ್ಲ ಎಂದರು.ವಿಶ್ವ ಜಲದಿನದ ಅಂಗವಾಗಿ ಅರ್ಚಕ ನಾಗರಾಜಭಟ್ ನೇತೃತ್ವದಲ್ಲಿ ಭದ್ರಾನದಿಗೆ ಗಂಗಾಪೂಜೆ ನೆರವೇರಿಸಿ ಪಂಚಾ ಮೃತಾಭಿಷೇಕ, ಪುಷ್ಪಾರ್ಚನೆ, ಬಾಗಿನ ಅರ್ಪಣೆ, ಮಹಾ ಆರತಿ ನೆರವೇರಿಸಲಾಯಿತು.ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಪಿಡಿಒ ಎಚ್.ಎಂ.ಕಾಶಪ್ಪ, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್, ಜೇಸಿ ಕಾರ್ಯದರ್ಶಿ ವಿ.ಅಶೋಕ, ಪ್ರಮುಖರಾದ ಸುಧಾಕರ್, ಬಿ.ಎಚ್.ಮನುಕುಮಾರ್, ಕೆ.ಎಂ.ರಾಘವೇಂದ್ರ, ಚೇತನ್‌ಕುಮಾರ್, ಸನತ್ ಶೆಟ್ಟಿ, ಸೋಮೇಶ್‌ಗೌಡ, ಎಚ್.ಎನ್.ವಿಶ್ವನಾಥ್, ಪೂಜಾ ಅಶೋಕ್, ಅನ್ವಯ್, ಅವನಿ ತೇಜಸ್ವಿನಿ, ಸತೀಶ್ ಕಾಮತ್ ಮತ್ತಿತರರು ಹಾಜರಿದ್ದರು.೨೨ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಜೇಸಿಐ ಹಾಗೂ ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟದ ವತಿಯಿಂದ ವಿಶ್ವ ಜಲದಿನದ ಅಂಗವಾಗಿ ಭದ್ರಾನದಿಗೆ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ಇಬ್ರಾಹಿಂ ಶಾಫಿ, ಚೈತನ್ಯ ವೆಂಕಿ, ರವಿಚಂದ್ರ, ಕಾಶಪ್ಪ, ಸ್ಟೀಫನ್, ಅಶೋಕ, ಸುಧಾಕರ್ ಇದ್ದರು.