ಸಾರಾಂಶ
ಕಾರ್ಕಳ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಕಾಲೇಜಿನ ಐಕ್ಯುಐಸಿ, ಮಾನವಿಕ ಸಂಘ, ರಾಜ್ಯಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಮತ್ತು ಮಾಹಿತಿ ಹಕ್ಕು ಕಾಯಿದೆಯ ಕುರಿತು ಉಪನ್ಯಾಸ ಕಾರ್ಯಕ್ರಮ ನೆರವೇರಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಇಂದು ಪರಿಸರ, ಜೀವವೈವಿಧ್ಯ ಉಳಿಸದೇ ಹೋದರೆ ಭವಿಷ್ಯದಲ್ಲಿ ಘೋರ ದಿನಗಳನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಮರಗಳನ್ನು, ನದಿ, ಕೆರೆಗಳನ್ನು ಹಾನಿ ಮಾಡಿ ಅಂತಹ ದಿನಗಳನ್ನು ಮೈಮೇಲೆಳೆದುಕೊಂಡಿದ್ದೇವೆ. ಇನ್ನಾದರೂ ಎಚ್ಚರಗೊಂಡು ನಮ್ಮ ಮನೆಯಿಂದಲೇ ಪರಿಸರ ಉಳಿಸುವ ಕೆಲಸ ಮಾಡದಿದ್ದರೆ ಮುಂದಿನ ಪೀಳಿಗೆಗೆ ಅನ್ಯಾಯ ಮಾಡುತ್ತೇವೆ ಎಂದು ಪರಿಸರ ಪರ ಹೋರಾಟಗಾರ್ತಿ ಆರತಿ ಅಶೋಕ್ ಹೇಳಿದ್ದಾರೆ.ಇಲ್ಲಿನ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಕಾಲೇಜಿನ ಐಕ್ಯುಐಸಿ, ಮಾನವಿಕ ಸಂಘ, ರಾಜ್ಯಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಮತ್ತು ಮಾಹಿತಿ ಹಕ್ಕು ಕಾಯಿದೆಯ ಕುರಿತು ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಮನೆಯಿಂದಲೇ ಹೆತ್ತವರು ಪರಿಸರ ಪಾಠ ಹೇಳಿಕೊಡಬೇಕು, ಪ್ಲಾಸ್ಟಿಕ್ ಗಳನ್ನು ಆದಷ್ಟು ಕಡಿಮೆ ಬಳಸಲು ಪ್ರೇರೇಪಿಸಿ, ಬಳಸಿದ ಪ್ಲಾಸ್ಟಿಕ್ ಗಳನ್ನು ವ್ಯವಸ್ಥಿತವಾಗಿ ಕಸ ವಿಲೇವಾರಿ ಘಟಕಗಳಿಗೆ ನೀಡುವ ಸಂಪ್ರದಾಯ ಜಾಸ್ತಿಯಾಗಬೇಕು ಎಂದರು. ಮಾಹಿತಿ ಹಕ್ಕು ಕಾಯಿದೆಯನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕಿದೆ. ತಮ್ಮ ಊರಿನ ಸಾರ್ವಜನಿಕ ಸಮಸ್ಯೆಗಳನ್ನು ಮುಖ್ಯವಾಗಿ ಪರಿಸರ ಸಂಬಂಧಿತ ಯೋಜನೆಗಳನ್ನು ನಿಲ್ಲಿಸಲು ಈ ಕಾಯಿದೆ ಸಹಕಾರಿಯಾಗುತ್ತದೆ. ಇದರಿಂದ ಪರಿಸರಕ್ಕೂ ಕೊಂಚ ಮಟ್ಟಿಗೆ ನೆಮ್ಮದಿ ಸಿಗುತ್ತದೆ ಎಂದರು.ಪ್ರಾಂಶುಪಾಲ ಡಾ. ಸುರೇಶ್ ರೈ ಅಧ್ಯಕ್ಷತೆ ವಹಿಸಿದ್ದರು. ಐಕ್ಯುಐಸಿ ಸಂಚಾಲಕ ಸುಷ್ಮಾ ರಾವ್, ಪತ್ರಿಕೋದ್ಯಮದ ವಿಭಾಗದ ಉಪನ್ಯಾಸಕ ಪ್ರಸಾದ್ ಶೆಣೈ, ಸವಿತಾ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಭಾಗ್ಯಲಕ್ಷ್ಮೀ ನಿರೂಪಿಸಿ, ವಂದಿಸಿದರು.