ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಅಣ್ಬ ಬಸವಣ್ಣನವರ ಚಿಂತನೆಗಳು ಇಂದು ಹೆಚ್ಚು ಪ್ರಸ್ತುತವಾಗಿವೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಅವರು, ಅಂಬೇಡ್ಕರ್ ಮತ್ತು ಬಸವಣ್ಣನರು ಅಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತರಾಗಿದ್ದಾರೆ. ಮಹನೀಯರ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಎಲ್ಲರೂ ಭವ್ಯ ಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು. ಬಸವಣ್ಣ ಮತ್ತು ಬಸವಾದಿ ಶರಣರು ಜಗತ್ತಿನ ಪ್ರಥಮ ಸಂಸತ್ತು ಅನುಭವ ಮಂಟಪ ಸ್ಥಾಪಿಸಿ ಮಾನವೀಯತೆ ಮತ್ತು ಸಮಾನತೆ ಸಾರಿದರು. ಅಲ್ಲದೇ, ಅಸ್ಪೃಶ್ಯತೆ, ಮೂಢನಂಬಿಕೆ, ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಶ್ರಮಿಸಿದರು. ಅಂದು ತಮ್ಮ ಚಿಂತನೆಗಳನ್ನು ಕನ್ನಡ ಭಾಷೆಯಲ್ಲಿ ವಚನಗಳ ಮೂಲಕ ಜನರಿಗೆ ಮನದಟ್ಟು ಮಾಡಿ ಸಮಾಜದಲ್ಲಿ ಸುಧಾರಣೆಗೆ ನಾಂದಿ ಹಾಡಿದ್ದಾರೆ ಎಂದು ಹೇಳಿದರು.
ಅಂಬೇಡ್ಕರ್ ರಚಿತ ಸಂವಿಧಾನ ವಿಶ್ವಶ್ರೇಷ್ಠವಾಗಿದೆ. ಬಸವಾದಿ ಶರಣರ ವಚನಗಳ ಆಶಯಗಳು ಸಂವಿಧಾನದಲ್ಲಿವೆ. ಅಂಬೇಡ್ಕರ್ ಬೇರೆಯಲ್ಲ, ಬಸವಣ್ಣನವರು ಬೇರೆಯಲ್ಲ. ಇವರೆಲ್ಲರ ಚಿಂತನೆಗಳು ಒಂದೇಯಾಗಿವೆ. ರಾಷ್ಟ್ರ ನಾಯಕರಾದ ಅಂಬೇಡ್ಕರ್, ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಅಕ್ಕಮಹಾದೇವಿ, ಸಂಗೊಳ್ಳಿ ರಾಯಣ್ಣ ಮುಂತಾದ ಮಹನೀಯರು ಸಮಾಜದ ಸ್ವತ್ತು. ರಾಷ್ಟ್ರ ನಾಯಕರನ್ನು ಆಯಾ ಸಮುದಾಯಕ್ಕೆ ಸೀಮಿತ ಮಾಡುವುದು ಸರಿಯಲ್ಲ. ಬಸವಣ್ಣ ಮತ್ತು ಅಂಬೇಡ್ಕರ್ ಮಾರ್ಗ ಮತ್ತು ವಿಚಾರಧಾರೆಯಲ್ಲಿ ನಡೆದರೆ ಮಾತ್ರ ದೇಶ ಹಾಗೂ ಸಮಾಜ ಅಭಿವೃದ್ಧಿಯಾಗಲಿದೆ ಎಂದರು.ಅಂಬೇಡ್ಕರ್ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಿದ್ದು, ಜಾತ್ಯತೀತತೆ ಮತ್ತು ಮಾನವೀಯತೆ ಮೌಲ್ಯಗಳ ಮೇಲೆ ಸಾಕಷ್ಟು ಪರಿಣಾಮ ಬೀರಿ ಬದುಕಲು ದಾರಿ ತೋರಿಸಿವೆ. ಅವರ ವಿಚಾರಗಳಾದ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಲ್ಲರಿಗೂ ದಾರಿದೀಪವಾಗಿವೆ. ಅಂಬೇಡ್ಕರ್ ಮಹಾ ಮಾನವತಾವಾದಿಯಾಗಿ ಸರ್ವರ ಏಳ್ಗಿಗೆಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಹೇಳಿದರು.
ಈ ವೇಳೆ ಅಂದಾನಯ್ಯ ಹಿರೇಮಠ, ಗುರುಬಸಯ್ಯ ಕಟಗೇರಿಮಠ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಜಿಪಂ ಮಾಜಿ ಸದಸ್ಯ ಕಲ್ಲಪ್ಪ ಕೊಡಬಾಗಿ, ಅಭಿಷೇಕ ಚಕ್ರವರ್ತಿ, ಡಾ.ಕೆ. ಎಚ್.ಮುಂಬಾರೆಡ್ಡಿ, ಡಿ.ಎಂ.ಚಲವಾದಿ, ಡಾ.ಕೌಸರ ಅತ್ತಾರ, ವಿ.ಎಚ್.ಬಿದರಿ, ಮಲ್ಲು ದಳವಾಯಿ, ಶಂಕರ ಹಾದಿಮನಿ, ರಮೇಶ ಬಸೆಟ್ಟಿ, ಶ್ರೀಕಾಂತ ಪತ್ತಾರ, ಸಿದ್ದಗೊಂಡ ನ್ಯಾಮಗೌಡ, ಕಲ್ಲಪ್ಪ ಕೊಡಬಾಗಿ, ರಮೇಶ ಹಾದಿಮನಿ, ಬಸವರಾಜ ಜೈನಾಪುರ, ದೇವೇಂದ್ರ ಹಾದಿಮನಿ, ಹಣಮಂತ ದೊಡಮನಿ, ಮಳೆಪ್ಪ ಬಸೆಟ್ಟಿ ಮುಂತಾದವರು ಉಪಸ್ಥಿತರಿದ್ದರು.