ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಜಾತಿ ಜಾತಿ ಎಂದು ಹೊಡೆದಾಡದೇ, ಬೇಧಭಾವ ಮಾಡದೇ ಎಲ್ಲರೂ ಕೂಡಿ ಬಾಳಿದರೇ ಭೂಮಿಯೇ ಸ್ವರ್ಗವಾಗಲಿದೆ ಎಂದು ಶಿರಹಟ್ಟಿ ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನಮಠ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಜಾತಿ ಜಾತಿ ಎಂದು ಹೊಡೆದಾಡದೇ, ಬೇಧಭಾವ ಮಾಡದೇ ಎಲ್ಲರೂ ಕೂಡಿ ಬಾಳಿದರೇ ಭೂಮಿಯೇ ಸ್ವರ್ಗವಾಗಲಿದೆ ಎಂದು ಶಿರಹಟ್ಟಿ ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನಮಠ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದಲ್ಲಿ ನಡೆದ ಹಜರತ್ ಬಾಬಾ ಪಾನಿಸಾಹೇಬ ಉರೂಸ್ ಹಾಗೂ ಸರ್ವ ಧರ್ಮ ಭಾವೈಕ್ಯತೆಯ ಮಹೋತ್ಸವದಲ್ಲಿ ಅವರು ಮಾತನಾಡಿದರು. ದೇವರು ಮನುಷ್ಯರನ್ನು ಸೃಷ್ಟಿ ಮಾಡಿದ, ಮನುಷ್ಯ ಜಾತಿಯನ್ನು ಸೃಷ್ಠಿ ಮಾಡಿದನು. ಗಂಡು ಮತ್ತು ಹೆಣ್ಣು ಎರಡೇ ಜಾತಿ. ಎಲ್ಲರ ದೇಹದಲ್ಲಿ ಹರಿಯುವ ರಕ್ತ ಒಂದೇಯಾಗಿದೆ. ಭೂಮಿಯ ಮೇಲೆ ಯಾರೂ ಹೆಚ್ಚಿನ ಜಾತಿಯವರಲ್ಲ ಯಾರೂ ಕಡಿಮೆ ಜಾತಿಯವರಲ್ಲ. ಮನುಷ್ಯ ಜಾತಿ ಅಂತ ಮಾತ್ರ ನಮ್ಮಲಿರಬೇಕು. ಮಕ್ಕಳ ತಲೆಯಲ್ಲಿ ಜಾತಿ ಎಂಬ ವಿಷ ಬೀಜ ತುಂಬದೇ ನೀತಿ, ಪ್ರೀತಿ, ಕರುಣೆ, ಮಮಕಾರ ತುಂಬಬೇಕು. ಎಲ್ಲರೂ ದ್ವೇಷ ಬಿಟ್ಟು ಪ್ರೀತಿ ಮಾಡಬೇಕು, ಪ್ರೀತಿಗಿಂತ ಮತ್ತೊಂದು ವಸ್ತು ಈ ಜಗತ್ತಿನಲ್ಲಿ ಇಲ್ಲ ಎಂಬುದನ್ನು ತಿಳಿಸಿದರು.
ಹೂವಿನಹಿಪ್ಪರಗಿಯ ಗುರುಲಿಂಗಾನಂದ ಮಹಾರಾಜ ಪತ್ರಿವನ ಮಠದ ಮಾತೋಶ್ರೀ ದ್ರಾಕ್ಷಾಯಣಿ ಅಮ್ಮ ಮಾತನಾಡಿ, ಭಾವದೊಳಗೆ ದೇವನಿರುವನು. ಲಕ್ಷ ಲಕ್ಷ ಜಾತಿಗಳನ್ನು ಮಾಡಿಕೊಂಡವರು ನಾವೇ. ನಮ್ಮೊಳಗೆ ನಾವು ಪರಮಾತ್ಮನನ್ನು ಕಂಡುಕೊಳ್ಳಬೇಕಾಗಿದೆ. ನಮ್ಮಲ್ಲಿ ಒಂದೇ ಅತ್ಮ ಇರುವುದು. ಮನುಷ್ಯತ್ವ ಎಂಬುದು ಜಗತ್ತಿನಲ್ಲಿ ಎಲ್ಲರಿಗೂ ಒಂದೇ. ಸಾಧನೆಗೆ ಮಹತ್ವ ಕೊಡಬೇಕು, ಅಲ್ಲಿ ಜಾತಿಗಲ್ಲ. ದೇವನೊಬ್ಬ ಇದ್ದಾನೆ, ಎಲ್ಲರಲ್ಲೂ ತುಂಬಿದ್ದಾನೆ, ಎಲ್ಲರ ಹೃದಯದ ಅಂತರಾಳದಲ್ಲಿದ್ದಾನೆ. ಗುಣದಿಂದ ಭಾವದಿಂದ ದೊಡ್ಡವರಾಗಬೇಕು ಎಂದರು.ಮಕ್ತುಮಸಾಬ್ ಮಂಟೂರ ಮಾತನಾಡಿದರು. ಭರತನಾಟ್ಯ ನೃತ್ಯ ಮಾಡಿದ ದಾನೇಶ್ವರಿ ನಾವಿ, ವೈಭವಿ ಮಾನೆ ವಿದ್ಯಾರ್ಥಿಗಳಿಗೆ ದಿಂಗಾಲೇಶ್ವರ ಶ್ರೀಗಳು ಆಶೀರ್ವದಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರಿಂದ ಕುಂಭಮೇಳ ಮೆರವಣಿಗೆ ನೆರವೇರಿತು.
ಖಾಜಾ ಸೈಯ್ಯದ ಶಹಾ ಹುಜುರ್ ಅಹ್ಮದ್ ಹುಸೇನ್ ಚಿಸ್ತಿ, ರಾಚಯ್ಯ ಸಕ್ಕರಿಮಠ, ಕಮೀಟಿ ಮುಖ್ಯಸ್ಥ ನೂರುದ್ಧೀನ್ ಮುಲ್ಲಾ, ಅಬ್ದುಲ್‌ಕರೀಮ್ ಮುಲ್ಲಾ, ಆರ್.ಎಸ್.ಪಾಟೀಲ, ಐ.ಎಸ್.ರುದ್ರಗೌಡರ, ಅಣ್ಣಾಸಾಬ ಬಿರಾದಾರ, ಕಮೀಟಿ ಸದಸ್ಯರು, ಮಹಿಳೆಯರು, ಗ್ರಾಮಸ್ಥರು ಇದ್ದರು. ಶಿವಾನಂದ ಬಿರಾದಾರ ಸ್ವಾಗತಿಸಿದರು. ಎಂ.ಐ.ಜಿಡ್ಡಿ, ಎಸ್.ಆರ್.ಕೋಳಿ ನಿರೂಪಿಸಿದರು. ಸಿದಗೊಂಡ ರುದ್ರಗೌಡರ ವಂದಿಸಿದರು.