ಸಾರಾಂಶ
ಕೊರಟಗೆರೆ: ದಾಸಲುಕುಂಟೆ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ನೀಡದೇ ಬೇರೆಡೆ ಸಾಗಿಸಿ ಇಲ್ಲಿನ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ನ್ಯಾಯಬೆಲೆ ಅಂಗಡಿ ಎದುರು ಸಾರ್ವಜನಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ದಾಸಲುಕುಂಟೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಸುಮಾರು ತಿಂಗಳಿಂದ ಇಲ್ಲಿನ ಪಡಿತರ ಗ್ರಾಹಕರಿಗೆ ಅಕ್ಕಿ ಸೇರಿದಂತೆ ಯಾವುದೇ ಪಡಿತರವನ್ನು ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ. ವಿತರಣೆ ಮಾಡುವವರು ಇಲ್ಲಿನ ಸಾರ್ವಜನಿಕರ ಕೈಗೆ ಸಿಗೋದಿಲ್ಲ. ದಾಸಲುಕುಂಟೆ ಹಾಗೂ ಕುರಿಹಳ್ಳಿ ಸೇರಿದಂತೆ ಇನ್ನೂ ಇಲ್ಲಿನ ೧೦೦ಕ್ಕೂ ಹೆಚ್ಚು ಜನರಿಗೆ ಅಕ್ಕಿ ವಿತರಣೆ ಮಾಡಬೇಕಿತ್ತು, ಅದರೆ ಅಂಗಡಿಯಲ್ಲಿ ಅಕ್ಕಿನೂ ಇಲ್ಲ, ವಿತರಣೆ ಮಾಡುವವರು ಇಲ್ಲ ಎಂದು ಸಾರ್ವಜನಿಕರು ದೂರಿದರು. ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ತಹಸೀಲ್ದಾರ್ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದರು. ನಂತರ ಮಾತನಾಡಿದ ತಹಸೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ದಾಸಲುಕುಂಟೆ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಬರುವ ೪೭೩ ಕಾರ್ಡ್‌ಗಳಿಗೆ ಪ್ರತಿ ತಿಂಗಳು ಪಡಿತರ ನೀಡಲಾಗುತ್ತಿದ್ದು, ಸಾರ್ವಜನಿಕರಿಗೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ ಎಂದು ದೂರು ಬಂದಿದೆ. ಇಲ್ಲಿನ ಲೋಪದೋಷದ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳು ತನಿಖೆ ಮಾಡಿ ವರದಿ ನೀಡುವಂತೆ ಸೂಚನೆ ನೀಡಲಾಗಿದ್ದು, ನಿರ್ವಹಣೆ ಮಾಡುತ್ತಿರುವವರು ಸರಿಯಾಗಿ ಸ್ಪಂದನೆ ಮಾಡಲಿಲ್ಲ ಎಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಗ್ರಾಮಸ್ಥ ರಂಗರಾಜು ಮಾತನಾಡಿ, ನಮ್ಮ ಗ್ರಾಮದ ನ್ಯಾಯಬೆಲೆ ಅಂಗಡಿಯ ಮಾಲೀಕ ಮುನಿಕುಮಾರ್ ಅವರು ಮೇಲೆ ಎಂಟು ತಿಂಗಳಿಂದ ಪಡಿತರ ಗ್ರಾಹಕರಿಗೆ ಸರಿಯಾಗಿ ಅಕ್ಕಿ ವಿತರಣೆ ಮಾಡುತ್ತಿಲ್ಲ ಎಂದು ಅನೇಕ ಬಾರಿ ತಾಲೂಕು ದಂಡಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ತಹಸೀಲ್ದಾರ್ ಸ್ಥಳಕ್ಕೆ ಬಂದರೂ ಆ ವ್ಯಕ್ತಿ ಬಂದಿಲ್ಲ, ಯಾರಾದರೂ ಅವರನ್ನು ಪ್ರಶ್ನೆ ಮಾಡಿದರೆ ಅವರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸುತ್ತೇವೆಂದು ಬೆದರಿಕೆ ಹಾಕುತ್ತಾರೆ. ಇನ್ನೂ ೧೦೦ಕ್ಕೂ ಹೆಚ್ಚು ಕಾರ್ಡ್‌ಗಳಿಗೆ ಅಕ್ಕಿ ವಿತರಣೆ ಮಾಡಿಲ್ಲ, ಕಟ್ಟಡದಲ್ಲಿ ಅಕ್ಕಿನೂ ಇಲ್ಲ. ಇದನ್ನ ಸೂಕ್ತ ತನಿಖೆ ಮಾಡಿ, ಬೇರೆಯವರಿಗೆ ಅಕ್ಕಿ ವಿತರಣೆ ಮಾಡಲು ನಿಯೋಜನೆ ಮಾಡಬೇಕು ಇಲ್ಲದಿದ್ದರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.ಇದೆ ಸಂದರ್ಭದಲ್ಲಿ ಆರ್.ಐ.ಪ್ರತಾಪ್, ಗ್ರಾಮ ಆಡಳಿತಾಧಿಕಾರಿ ಪರುಷುರಾಮ್, ಆನಂದ್ ಮಠ, ರಮೇಶ್, ಸುದೀಶ್, ಗ್ರಾಮಸ್ಥರಾದ ಉದಯಕುಮಾರ್, ಸುಬ್ಬಣ್ಣ, ತಿಮ್ಮಕ್ಕ, ಮಂಗಳಮ್ಮ, ಗುರುಶಾಂತಪ್ಪ, ರಂಗರಾಜು, ಗಿರೀಶ್, ಮಹೇಶ್, ಉಮೇಶ್, ರವಿ, ಮಧು, ಶಿವಕುಮಾರ್, ಶಂಕರಪ್ಪ, ಸಿದ್ದರಾಜು, ಓಬಳೇಶ್, ನರಸಿಂಹರಾಜು, ಪ್ರಕಾಶ್, ತೇಜ ಸೇರಿದಂತೆ ಇತರರು ಇದ್ದರು.
ದಾಸಲುಕುಂಟೆ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಸುಮಾರು ೪೭೩ ರೇಷನ್ ಕಾರ್ಡ್‌ಗಳಿಗೆ ಪಡಿತರ ಧಾನ್ಯ ವಿತರಣೆ ಮಾಡಲಾಗುತ್ತದೆ. ಸಾರ್ವಜನಿಕರಿಗೆ ಸರಿಯಾಗಿ ಅಕ್ಕಿ ನೀಡುತ್ತಿಲ್ಲ ಎಂದು ದೂರು ಬಂದಿದ ಇನ್ನಲೇ ಸ್ಥಳಕ್ಕೆ ತಹಸೀಲ್ದಾರ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಲಾಗಿದ್ದು, ಇನ್ನೂ ೧೦೧ ಜನರಿಗೆ ಅಕ್ಕಿ ವಿತರಣೆ ಮಾಡಬೇಕಿದೆ. ಅಂಗಡಿಯಲ್ಲಿ ಅಕ್ಕಿ ಇಲ್ಲ. ತಕ್ಷಣ ಮೇಲಾಧಿಕಾರಿಗಳಿಗೆ ವರದಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.ಕೊರಟಗೆರೆ:- ಮಂಜುನಾಥ್. ಆಹಾರ ನಿರೀಕ್ಷಕರು ಕೊರಟಗೆರೆ.