ಆತ್ಮ, ಪರಮಾತ್ಮನ ಮೇಲೆ ನಂಬಿ ಬದುಕಿದರೆ ನೆಮ್ಮದಿ: ಸಂಸದ ಡಾ.ಸಿ.ಎನ್.ಮಂಜುನಾಥ್

| Published : Feb 09 2025, 01:16 AM IST

ಸಾರಾಂಶ

ನಮ್ಮ ಪೂರ್ವಜರು ಹಾಕಿಕೊಟ್ಟ ಸಂಪ್ರದಾಯದಂತೆ ಅನೆಗೊಳದಮ್ಮ ದೇವಿಯನ್ನು ಅತಿ ಹೆಚ್ಚು ಬೈಯ್ದಾಡುವ ದೇವಿ ಆಗಿದೆ. ದೇವಿಗೆ ಬೈಯ್ದರೆ ಮಾತ್ರ ಮೆರವಣಿಗೆ ಸಾಗುವುದು ಎನ್ನುವ ಪದ್ಧತಿ ಮೌಢ್ಯವಾಗಬಾರದು. ದೇವರನ್ನು ಪೂಜಿಸುವ ಆನೆಗೊಳಮ್ಮನವರನ್ನು ಅತಿ ಹೆಚ್ಚು ಜಾತ್ರೆಯಲ್ಲಿ ಬೈಯಿಸಿಕೊಂಡಿರುವ ದೇವರಾಗಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಆತ್ಮ, ಪರಮಾತ್ಮ ಎರಡು ನಂಬುಗೆಯ ಶಕ್ತಿ. ಶುದ್ಧ ಮನಸ್ಸಿನಿಂದ ಪರಮಾತ್ಮನ ಪೂಜಿಸಿದರೆ ಮಾತ್ರ ನೆಮ್ಮದಿ ಕಾಣಬಹುದು ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಹೃದಯತಜ್ಞ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ಬೋಳಮಾರನಹಳ್ಳಿಯಲ್ಲಿ ಶನಿವಾರ ನೂತನವಾಗಿ ಲೋಕಾರ್ಪಣೆಗೊಂಡ ಲಕ್ಷ್ಮೀದೇವಿ ದೇಗುಲವನ್ನು ಉದ್ಘಾಟಿಸಿ ಮಾತನಾಡಿ, ತನ್ನ ಬಾಲ್ಯವನ್ನು ಹೆಚ್ಚು ಕಳೆದ ಗ್ರಾಮ ಇದು. ಈ ಹಿಂದೆ ನಮ್ಮ ಕುಟುಂಬ ಕೆಲಸ ಹಂಚಿಕೊಂಡು ಮಾಡಿಕೊಳ್ಳುತ್ತಿದ್ದರು. ಇದರಿಂದ ನೆಮ್ಮದಿ, ಶಾಂತಿ, ಆರೋಗ್ಯ, ನೆಮ್ಮದಿ ತನ್ನಿಂದ ತಾನೇ ಲಭಿಸುತಿತ್ತು ಎಂದರು.

ಇಂದು ಗಂಡ ಹೆಂಡತಿ ಜೊತೆ ಇರುವುದೇ ಅವಿಭಾಜ್ಯ ಕುಟುಂಬವಾಗಿದೆ. ಸಂಬಂಧಗಳಲ್ಲಿ ಹೊಂದಾಗಣಿಕೆ ದೂರವಾಗಿದೆ. ಎಲ್ಲ ಅಯೋಮಯವಾಗಿ ನೆಮ್ಮದಿ ದೂರವಾಗಿದೆ ಎಂದು ವಿಷಾದಿಸಿದರು.

ಬಡತನ ಹೃದಯಕ್ಕೆ ಇರಬಾರದು. ದೇಶದ ಎಲ್ಲ ಜನರ ಕೈಯಲಿ ಮೊಬೈಲ್ ಬಂದು ಒಂಟಿತನ ಕಾಡುವಂತಾಗಿದೆ. ಬಹುತೇಕ ಕೆಟ್ಟ, ಅನಿಷ್ಟ ಕಾರ್ಯಗಳಿಗೆ ಸುಶಿಕ್ಷಿತರೇ ಆಗುವಂತಾಗಿದೆ. ದೇಶದ ಮೊದಲ ಶತ್ರು ಸೋಮಾರಿತನ ಎಂಬುದನ್ನು ಮರೆಯಬಾರದು ಎಂದರು.

ನಮ್ಮ ಪೂರ್ವಜರು ಹಾಕಿಕೊಟ್ಟ ಸಂಪ್ರದಾಯದಂತೆ ಅನೆಗೊಳದಮ್ಮ ದೇವಿಯನ್ನು ಅತಿ ಹೆಚ್ಚು ಬೈಯ್ದಾಡುವ ದೇವಿ ಆಗಿದೆ. ದೇವಿಗೆ ಬೈಯ್ದರೆ ಮಾತ್ರ ಮೆರವಣಿಗೆ ಸಾಗುವುದು ಎನ್ನುವ ಪದ್ಧತಿ ಮೌಢ್ಯವಾಗಬಾರದು. ದೇವರನ್ನು ಪೂಜಿಸುವ ಆನೆಗೊಳಮ್ಮನವರನ್ನು ಅತಿ ಹೆಚ್ಚು ಜಾತ್ರೆಯಲ್ಲಿ ಬೈಯಿಸಿಕೊಂಡಿರುವ ದೇವರಾಗಿದೆ ಎಂದರು.

ದೇಗುಲ ಸರ್ವರನ್ನುಒಂದೆಡೆ ಸೇರಿಸಿ ಸಾಮರಸ್ಯ ಬೆಸೆಯುವ ಶ್ರದ್ಧಾ ಕೇಂದ್ರವಾಗಬೇಕಿದೆ. ನಮ್ಮ ಸಂಪ್ರದಾಯ, ಪೂಜೆ, ಆರಾಧನೆ ಮಕ್ಕಳಿಗೆ ಕಲಿಸಬೇಕಿದೆ. ಬಡವರ ಕಣ್ಣೀರು ಒರೆಸುವ, ಸಹಾಯ ಮಾಡುವ ಕೆಲಸ ಮಾಡಿದರೆ ದೇವರುಗುಡಿಯಲ್ಲಿ ಇರದೆ ಎಲ್ಲರ ಮನೆಗಳಲ್ಲಿಯೇ ಇರುವಂತಾಗಲಿದೆ ಎಂದರು.

ಮಾಲೀಕರಿಗಿಂತ ಕಾರ್ಮಿಕ ಆರೋಗ್ಯ ಉತ್ತಮವಾಗಿದೆ. ನಮ್ಮ ಹಿರಿಯರಿಗೆ ಬೈಸಿಕಲ್ ರಥವಾಗಿ ಆರೋಗ್ಯವಿತ್ತು. ಇಂದು ಮೊಬೈಲ್, ಬೈಕ್ ಸಾಧನವಾಗಿದೆ. ಮಕ್ಕಳನ್ನು ಪೋಷಕರೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಸ್ಥಿತಿ ಎದುರಾಗಿದೆ. ದೇಶದಲ್ಲಿ ಪ್ರತಿವರ್ಷ 30 ಲಕ್ಷ ಹೃದಯಾಘಾತದಲ್ಲಿ ದುರ್ಮರಣಕ್ಕೀಡಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಶ್ರಮವಿಲ್ಲದ ಕಾರಣ ಮಾಲೀಕರು ರೋಗಿಗಳಾಗುತ್ತಿದ್ದಾರೆ. ಕಾರ್ಮಿಕರ ಆರೋಗ್ಯ ಉತ್ತಮವಾಗಿದೆ. ಪ್ರಸ್ತುತ ಶ್ರಮಿಕ ವರ್ಗ ಮರೆಯಾಗಿದೆ. ವ್ಯಾಯಾಮ, ಕೆಲಸ ಮರೆತು ಅನಾರೋಗ್ಯ ಮನೆಬಾಗಿಲು ತಟ್ಟುತ್ತಿದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಕ್ಷೀರಕ್ರಾಂತಿ, ರಸ್ತೆ, ಶಾಲೆ ಅಭಿವೃದ್ಧಿ ಕಂಡಿರುವುದು ಮಾಜಿ ಸಚಿವ ಎಚ್.ಡಿ.ರೇವಣ್ಣರಿಂದ ಎಂಬುದನ್ನು ಮರೆಯಬಾರದು. ಅನುದಾನ ತರುವುದಕ್ಕಿಂತ ಅನುಷ್ಟಾನ ಮುಖ್ಯ. ಗುಣ ಮಟ್ಟದ ರಸ್ತೆ, ಚರಂಡಿ ವ್ಯವಸ್ಥೆ ಬೇಕಿದೆ ಎಂದರು.

ಶಾಸಕ ಎಚ್.ಡಿ.ರೇವಣ್ಣ ತಮ್ಮ ಇಡೀ ಕುಟುಂಬ ಗ್ರಾಮದೊಂದಿಗೆ ಅವಿಭಾಜ್ಯ ಸಂಬಂಧವಿದೆ. ಇಲ್ಲಿ ಹರಿಯುವ ಶ್ರೀರಾಮದೇವರ ನಾಲೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕೊಡುಗೆಯಾಗಿದೆ. ಗ್ರಾಮದ ಅಭಿವೃದ್ಧಿಗೆ ತಮ್ಮ ಕುಟುಂಬದ ಕೊಡುಗೆ ಸದಾ ಇರಲಿದೆ ಎಂದರು.

ಇದಕ್ಕೂ ಮುನ್ನ ವಿವಿಧ ಪೂಜೆ, ಹೋಮ ಹವನಾದಿಗಳು ನಡೆದವು. ತೀರ್ಥ ಪ್ರಸಾದ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಆದಿಚುಂಚನಗಿರಿ ಕ್ಷೇತ್ರದ ಹಾಸನ ಶಾಖೆ ಶಂಭುನಾಥ ಸ್ವಾಮೀಜಿ, ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮನಾಥ ಸ್ವಾಮೀಜಿ, ಎಂಎಲ್‌ಸಿ ಸೂರಜ್‌ ರೇವಣ್ಣ, ಶಾಸಕ ಎಚ್.ಡಿ.ರೇವಣ್ಣ, ಶ್ರವಣಬೆಳಗೊಳ ಕ್ಷೇತ್ರದ ಸಿ.ಎನ್. ಬಾಲಕೃಷ್ಣ, ಆರ್‌ಟಿಒ ಮಲ್ಲಿಕಾರ್ಜುನ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಕೆಪಿಸಿಸಿ ಸದಸ್ಯ ಸುರೇಶ್, ಸಚಿನ್‌ ಚಲುವರಾಯಸ್ವಾಮಿ, ಜಿಪಂ ಮಾಜಿ ಅಧ್ಯಕ್ಷೆ ಕುಸುಮಾ ಬಾಲಕೃಷ್ಣ, ಸುಬ್ರಹ್ಮಣ್ಯ ಸೇವಾ ಟ್ರಸ್ಟ್‌ಅಧ್ಯಕ್ಷ ಬಿ.ಎಂ.ಕಿರಣ್, ಮುಖಂಡರಾದ ಬಿ.ಎಸ್. ಮಂಜುನಾಥ್, ಜಯದೇವ ಶಿವಲಿಂಗೇಗೌಡ, ಶ್ರೀನಿವಾಸ್, ಶೇಖರ್, ಗುರುಲಿಂಗಣ್ಣ, ಪದ್ಮನಾಭೇಗೌಡ ಮತ್ತಿತರರಿದ್ದರು.