ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಹೊಲ, ಮನೆ, ನಿವೇಶನ ಅಡವಿಟ್ಟು ಮೀಟರ್ ಬಡ್ಡಿಯಂತೆ ಸಾಲ ಪಡೆದರೆ ಮುಗಿತು. ಬಡ್ಡಿ ಮೀಟರ್ ಓಡುತ್ತಿದ್ದರೆ ಅಸಲಿನ ಮೀಟರ್ ಮುಳ್ಳು ತಿರುಗುವುದೇ ಇಲ್ಲ. ಕೊನೆಗೆ ನೀವು ಅಡವಿಟ್ಟ ಆಸ್ತಿ ಕಳೆದುಕೊಳ್ಳುವುದು ಖಚಿತ!
ಇದು ಮೀಟರ್ ಬಡ್ಡಿ ಮಾಫಿಯಾ ಸಾಲ ಪಡೆದವರಿಗೆ ನೀಡಿರುವ; ನೀಡುತ್ತಿರುವ ಗ್ಯಾರಂಟಿ. ದಶಕಗಳಿಂದಲೂ ಇದೇ ರೀತಿ ಆಸ್ತಿ ಲಪಟಾಯಿಸುವುದರಲ್ಲಿ ಮೀಟರ್ ಬಡ್ಡಿ ದಂಧೆಕೋರರು ನಿರತರಾಗಿದ್ದಾರೆ. ಒಂದು ವೇಳೆ ಬೇರೆಯವರ ನೆರವಿನಿಂದ ಸಾಲ ತೀರಿಸಲು ಮುಂದಾದರೂ ಇವರು ಅದಕ್ಕೆ ಅವಕಾಶವನ್ನೇ ನೀಡುವುದಿಲ್ಲ. ಅಂತಹ ದೊಡ್ಡ ಕಬಳಕೋರರು ಇವರು.ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ಸಾಲ ದಶಕಗಳಿಂದಲೇ ನಡೆಯುತ್ತಿದೆ. ಅಂದಿನಿಂದ ಬಡ್ಡಿಗೆ ಸಾಲ ನೀಡುವವರ ಆಸ್ತಿಯ ಮೀಟರ್ ಹೆಚ್ಚಾಗುತ್ತಲೇ ಇದೆ. ಒಬ್ಬೊಬ್ಬರು 100ರಿಂದ 200 ಎಕರೆ ಜಮೀನು, ಹತ್ತಾರು ಅಂಗಡಿ, ನಿವೇಶನಗಳನ್ನು ಇದೇ ಬಡ್ಡಿಯಲ್ಲೇ ಮುಳುಗಿಸಿದ್ದುಂಟು. ಕೋಟಿಗಟ್ಟಲೇ ಬೆಲೆ ಬಾಳುವ ಆಸ್ತಿಯನ್ನು ಕಳೆದುಕೊಂಡು ಸಾಲ ಪಡೆದವರು ಕಂಗಾಲಾಗಿರುವ ಉದಾಹರಣೆ ವಾಣಿಜ್ಯನಗರಿಯಲ್ಲಿ ಸಾಕಷ್ಟು.
ಹೇಗೆ ಆಸ್ತಿ ಸಾಲ?ರೈತ, ಮಧ್ಯಮ ವರ್ಗ, ಸಿರಿವಂತರಿಗೆ ಲಕ್ಷಗಟ್ಟಲೇ ಸಾಲ ಬೇಕಾದಾಗ ಬಡ್ಡಿ ದಂಧೆಕೋರರ ಬಳಿ ಸಾಲ ತೆಗೆದುಕೊಂಡರೆ ಮೂರ್ನಾಲ್ಕು ತಿಂಗಳು ಆಸ್ತಿ ಇಲ್ಲದೇ ಬರಿಗೈ ದಾಸರಂತೆ ಆಗುವುದು ಗ್ಯಾರಂಟಿ. ಹಾಗೆ ನೋಡಿದರೆ ಸಣ್ಣ-ಪುಟ್ಟ ಸಾಲದಿಂದ ಹಿಡಿದು ಕೋಟಿಗಟ್ಟಲೇ ಫೈನಾನ್ಸ್ ಮಾಡುವವರು ಇಲ್ಲಿದ್ದಾರೆ. ಆದರೆ ಏನಾದರೂ ಆಸ್ತಿ ಅಡವಿಡಲೇಬೇಕು. 100ಕ್ಕೆ ಶೇ.10ರಂತೆ ಇಲ್ಲಿ ಬಡ್ಡಿ.
ಉದಾಹರಣೆಗೆ ಒಬ್ಬ ರೈತನಿಗೆ ₹ 10 ಲಕ್ಷ ಸಾಲ ಬೇಕಿತ್ತು ಎಂದರೆ ಆತ ತನ್ನ ಬಳಿ ಇರುವ ಹೊಲದಲ್ಲಿ ಒಂದೆರಡು ಎಕರೆ ಅಡವಿಡಬೇಕು. ಸಾಲಗಾರರು ಇಷ್ಟೇ ತಿಂಗಳಲ್ಲಿ ಸಾಲ ಮರಳಿಸಬೇಕು ಎಂದು ಕಡ್ಡಾಯವಾಗಿ ತಿಳಿಸಿರುತ್ತಾರೆ. ಅನಧಿಕೃತ ಒಪ್ಪಂದ ಪತ್ರದಲ್ಲಿ ಇದು ನಮೂದು ಕೂಡ ಆಗಿರುತ್ತದೆ.₹ 10 ಲಕ್ಷಕ್ಕೆ ಮೂರು ತಿಂಗಳ ವಾಯದೆ ಮೇಲೆ ಸಾಲ ಪಡೆದರೆ ಪ್ರತಿತಿಂಗಳು ಬಡ್ಡಿ ಹಣ ₹ 1 ಲಕ್ಷ ಮರು ಮಾತಿಲ್ಲದೇ ಪಾವತಿಸಬೇಕು. 3ನೇ ತಿಂಗಳು ಅಸಲು ಹಾಗೂ ಬಡ್ಡಿ ಎರಡನ್ನು ಏಕಕಾಲಕ್ಕೆ ಪಾವತಿಸಬೇಕು. ಆ ಸಾಲ ಪಡೆದವ ತಾನೇ ಸಾಲ ಮರಳಿಸಲು ಬಂದರೆ ಪಡೆದು ಆತನ ದಾಖಲೆ ನೀಡಿ ಕಳುಹಿಸುತ್ತಾರೆ.
ಒಂದು ವೇಳೆ ಆತನಿಗೆ ದುಡ್ಡು ಕಟ್ಟಲು ಆಗದಿದ್ದರೆ ಬೇರೆಯವರ ಬಳಿ ತೆರಳಿ ನನ್ನ ಆಸ್ತಿ ಇಂಥಲ್ಲಿ ಸಿಲುಕಿದೆ. ಅದನ್ನು ಮರಳಿ ಪಡೆಯಬೇಕಿದೆ. ಹೀಗಾಗಿ ಇಂತಿಷ್ಟು ದುಡ್ಡು ಕೊಡು ಎಂದು ಕೇಳಿದರೆ, ಈ ವಿಷಯ ಸಾಲ ಕೊಟ್ಟವನಿಗೆ ಗೊತ್ತಾದರೆ, ಯಾರು ನೆರವು ನೀಡಲು ಮುಂದೆ ಬಂದಿರುತ್ತಾರೋ ಅವರಿಗೆ ಧಮ್ಕಿ ಬರುತ್ತದೆ. ಯಾವುದೇ ಕಾರಣಕ್ಕೂ ನೀನು ಅವನಿಗೆ ದುಡ್ಡಿನ ವಿಷಯದಲ್ಲಿ ನೆರವು ನೀಡುವಂತಿಲ್ಲ. ನೀಡಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬೆದರಿಕೆ ಹಾಕುವುದುಂಟು. ಇವರ ದರ್ಪ, ಬೆದರಿಕೆಗೆ ಹೆದರಿ ನೆರವು ನೀಡಲು ಮುಂದೆ ಬಂದವರು ಹಿಂದೆ ಸರಿಯುತ್ತಾರೆ.ಬಳಿಕ ಇವರು ಸಾಲ ಕೊಟ್ಟವನಿಂದ ಹೊಲ, ಮನೆ, ನಿವೇಶನ ಏನಿರುತ್ತದೆಯೋ ಅದನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡು ಚೂರುಪಾರು ಚಿಲ್ಲರೆ ಕಾಸಿನಂತೆ ಮತ್ತಷ್ಟು ದುಡ್ಡು ಕೊಟ್ಟು ಕಳುಹಿಸುವುದುಂಟು. ಹೀಗೆಯೇ ಕೋಟಿಗಟ್ಟಲೇ ಬೆಲೆ ಬಾಳುವ ಆಸ್ತಿಯನ್ನು ಲಕ್ಷಗಳಲ್ಲೇ ಲಪಟಾಯಿಸಿದ್ದಾರೆ.
ಒಟ್ಟಿನಲ್ಲಿ ಬಡ್ಡಿ ಮಾಫಿಯಾ ಕೋಟ್ಯಾಧಿಪತಿಗಳನ್ನು ಲಕ್ಷಾಧಿಪತಿಗಳನ್ನಾಗಿ, ಲಕ್ಷಾಧಿಪತಿಗಳನ್ನು ಮನೆ ಹೊಲ ಕಳೆದುಕೊಳ್ಳುವಂತೆ ಮಾಡಿರುವುದಂತೂ ಸತ್ಯ ಎಂಬುದು ಬಡ್ಡಿ ವ್ಯವಹಾರದ ವಿರುದ್ಧ ಹೋರಾಡುವವರ ಮಾತು.