ಸಾರಾಂಶ
ಚನ್ನಮ್ಮನ ಕಿತ್ತೂರು ತಾಲೂಕಿನ ಎಲ್ಲ ಕೆರೆಗಳನ್ನು ಕೂಡಲೇ ಸರ್ವೆ ಮಾಡಬೇಕು, ಐತಿಹಾಸಿಕ ರಣಗಟ್ಟಿ ಕೆರೆಯನ್ನು ಸಹ ಸರ್ವೆ ಮಾಡುವ ಮೂಲಕ ಈ ಕೆರೆಗೆ ಹೊಸ ರೂಪ ನೀಡಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ತಾಲೂಕಿನ ಎಲ್ಲ ಕೆರೆಗಳನ್ನು ಕೂಡಲೇ ಸರ್ವೆ ಮಾಡಬೇಕು, ಐತಿಹಾಸಿಕ ರಣಗಟ್ಟಿ ಕೆರೆಯನ್ನು ಸಹ ಸರ್ವೆ ಮಾಡುವ ಮೂಲಕ ಈ ಕೆರೆಗೆ ಹೊಸ ರೂಪ ನೀಡಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಎಲ್ಲ ಯೋಜನೆಗಳು ಜನರಿಗೆ ಮುಟ್ಟಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು. ಅಂಗವಿಕಲರು ಸೇರಿದಂತೆ ಅವಶ್ಯವಿರುವ ಎಲ್ಲ ಫಲಾನುಭವಿಗಳಿಗೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯ ಹಾಗೂ ಪರಿಕರಗಳನ್ನು ಉಚಿತವಾಗಿ ನೀಡುವ ಕಾರ್ಯ ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕೆಂದು ಸೂಚಿಸಿದರು.
ಮೀನುಗಾರಿಕೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಪಾಟೀಲ, ಈ ಇಲಾಖೆಯಿಂದ ದೊರೆಯುವ ಯೋಜನೆಗಳು ಸಂಬಂಧಪಟ್ಟ ಜನತೆಗೆ ದೊರೆಯುತ್ತಿಲ್ಲ. ನಿಜವಾಗಿ ಮೀನುಗಾರಿಕೆ ಮಾಡುತ್ತಿರುವ ಜನರು ಇದರ ಸದುಪಯೋಗ ಪಡಿಸಿಕೊಳ್ಳಲಿ, ಅಧಿಕಾರಿಗಳು ಕೇವಲ ಅಧಿಕಾರ ಇದೆ ಎಂದು ಕಚೇರಿಯಲ್ಲಿ ಕುಳಿತುಕೊಳ್ಳದೆ ನಿಜವಾದ ಜನರಿಗೆ ಯೋಜನೆಗಳು ದೊರೆಯುತ್ತಿವೆಯೋ ಇಲ್ಲವೋ ಎಂದು ಪರಿಶೀಲಿಸಿ. ಜನಸಾಮಾನ್ಯರಿಗೆ ಆಗುವ ತೊಂದರೆ ನನ್ನ ಗಮನಕ್ಕೆ ಬಂದಲ್ಲಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಸಭೆಯಲ್ಲಿ ತಹಸೀಲ್ದಾರ್ ರವೀಂದ್ರ ಹಾದಿಮನಿ, ಬೆಳಗಾವಿ ಪಶು ಇಲಾಖೆ ಡಾ.ರಾಜು ಕೊಲೇರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.