ಸಮಾಜಕ್ಕೆ ಒಳಿತು ಮಾಡಿದರೆ ಬದುಕು ಸಾರ್ಥಕ: ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು

| Published : Feb 21 2025, 12:48 AM IST

ಸಮಾಜಕ್ಕೆ ಒಳಿತು ಮಾಡಿದರೆ ಬದುಕು ಸಾರ್ಥಕ: ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳು ಅವತಾರ ಪುರುಷರು. ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಸತ್ಯದ ನೆಲೆಯಲ್ಲಿ ಸಮಾಜಕ್ಕೆ ಮುಟ್ಟಿಸಿದ್ದು ಮಾತ್ರವಲ್ಲ, ಅದರಂತೆ ನುಡಿದು ನಡೆದು ಸಮಾಜ ಸಮಾಜ ಎಂದೇ ಬದುಕನ್ನು ಶ್ರೀಗಂಧದಂತೆ ಸವೆಸಿದರು.

ಹಾನಗಲ್ಲ: ಅಶಾಶ್ವತವನ್ನು ನಂಬಿ ಕೆಡದಿರಿ, ದೇಹವೇ ದೇವರ ನಿವಾಸ ಸ್ಥಾನ. ಕಾವಿ ಧರಿಸಿದವರೆಲ್ಲ ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳಾಗಲು ಸಾಧ್ಯವಿಲ್ಲ. ಸತ್ಕಾರ್ಯಗಳ ಮೂಲಕ ಸಮಾಜಕ್ಕೆ ಒಳಿತು ಮಾಡಿ ಬದುಕು ಸಾರ್ಥಕಗೊಳಿಸಿಕೊಳ್ಳಿ ಎಂದು ಶಿವಮೊಗ್ಗ ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ತಿಳಿಸಿದರು.ಹಾನಗಲ್ಲಿನಲ್ಲಿ ಲಿಂ. ಕುಮಾರ ಶಿವಯೋಗಿಗಳ 95ನೇ ಪುಣ್ಯಸ್ಮರಣೋತ್ಸವದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, 12ನೇ ಶತಮಾನದ ಶರಣರ ಚಿಂತನೆಗಳು ಎಲ್ಲ ಕಾಲಕ್ಕೂ ಸಲ್ಲುವ ಅಮೃತ ನುಡಿಗಳು. ನಮ್ಮ ಬದುಕನ್ನು ಸಮಚಿತ್ತದಲ್ಲಿ ಕೊಂಡೊಯ್ಯುವ ಅಮೃತ ಗಂಗೆ. ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳವರು ಅವತಾರ ಪುರುಷರು. ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಸತ್ಯದ ನೆಲೆಯಲ್ಲಿ ಸಮಾಜಕ್ಕೆ ಮುಟ್ಟಿಸಿದ್ದು ಮಾತ್ರವಲ್ಲ, ಅದರಂತೆ ನುಡಿದು ನಡೆದು ಸಮಾಜ ಸಮಾಜ ಎಂದೇ ಬದುಕನ್ನು ಶ್ರೀಗಂಧದಂತೆ ಸವೆಸಿದರು ಎಂದರು.

ರಾಯನಾಳದ ಅಭಿನವ ರೇವಣಸಿದ್ಧೇಶ್ವರ ಸ್ವಾಮಿಗಳು ಸಮ್ಮುಖ ವಹಿಸಿ ಮಾತನಾಡಿ, ಭಾರತ ದೈವ ಭೂಮಿ. ಇದು ಶಿವಯೋಗಿಗಳ ತಪಸ್ಸಿನಿಂದ ಸಾಧ್ಯವಾಗಿರುವಂತಹದ್ದು. ಇಲ್ಲಿನ ಗುರು ಪರಂಪರೆ ಜಗತ್ತಿನಲ್ಲೇ ಶ್ರೇಷ್ಠವಾದುದು. ಸಮಾಜ ಕಟ್ಟುವ ಕೆಲಸ ನಮ್ಮಿಂದಾಗಬೇಕು. ಗುರುವನ್ನು ಅರಿತರೆ ನಮ್ಮ ಅರಿವಿಗೆ ಬರುತ್ತಾನೆ. ಗುರುವನ್ನು ಅಳೆಯುವುದಲ್ಲ, ಅರಿತು ನಡೆಯವುವುದೇ ನಿಜವಾದ ಕರ್ತವ್ಯ. ಎಲ್ಲ ಕಾಲಕ್ಕೂ ಸಲ್ಲುವ ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳ ಜೀವನ ಸಿದ್ಧಾಂತಗಳು ನಮ್ಮ ಬದುಕಿನ ಭಾಗಗಳಾಗಬೇಕು. ಹಾನಗಲ್ಲ ಪುಣ್ಯ ನೆಲ. ಇಲ್ಲಿ ಶ್ರೀಗಳ ಶಕ್ತಿ ಇದೆ ಎಂದರು.

ನರಗುಂದ ಪತ್ರಿವನ ಮಠದ ಸಿದ್ಧವೀರ ಶಿವಾಚಾರ್ಯರು ಮಾತನಾಡಿ, ದುಃಖ ದುಮ್ಮಾನ ದೂರ ಮಾಡುವವನೆ ನಿಜವಾದ ಸ್ವಾಮಿ. ಅದಕ್ಕೆ ಅನುರೂಪವಾದ ಕಾರ್ಯ ಮಾಡಿದವರು ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳವರಾಗಿದ್ದರು. ಸ್ವಾಮಿತ್ವ ಕುಲಕ್ಕೆ ಗೌರವ ಬರುವಂತೆ ಮಾಡಿದವರು ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳು. ಮಾಂಸಮಯ ಶರೀರವನ್ನು ಮಂತ್ರಮಯ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು, ಬಿಜಕಲ್ ವಿರಕ್ತಮಠದ ಶಿವಲಿಂಗ ಸ್ವಾಮಿಗಳು, ಗುತ್ತಲದ ಪ್ರಭು ಸ್ವಾಮಿಗಳು, ಅಳಂದದ ವೃಷಭೇಂದ್ರ ಸ್ವಾಮಿಗಳು ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಹಾನಗಲ್ಲ ತಾಲೂಕಿನ ನಿವೃತ್ತ ಉಪನ್ಯಾಸಕರು, ಶಿಕ್ಷಕರನ್ನು ಶ್ರೀಮಠದಿಂದ ಗೌರವಿಸಲಾಯಿತು. ಸತೀಶ ಭಜಂತ್ರಿ ಅವರ ಶಹನಾಯಿ ವಾದನ ಗಮನ ಸೆಳೆಯಿತು. ಅಮೃತಾ ಹಾಗೂ ಪ್ರಿಯಾಂಕ ಭರತನಾಟ್ಯ ಮಾಡಿದರು. ಅನನ್ಯ ಹೆಬ್ಬಾರ ಶಿವಸ್ತುತಿ ಪಠಿಸಿದರು. ಪ್ರಿಯಾಂಕ ವಚನ ನೃತ್ಯ ಮಾಡಿದರು. ವಚನಶ್ರೀ, ಅಮೃತ, ವೇದಾ ವಚನ ನೃತ್ಯ ಮಾಡಿದರು. ಶಿವಬಸಯ್ಯ ಗಡ್ಡದಮಠ ವಚನ ಪ್ರಾರ್ಥನೆ ಹಾಡಿದರು. ಗೋಪಾಲ ಹುನಗನಹಳ್ಳಿ ಸ್ವಾಗತಿಸಿದರು. ಶಿವಮೂರ್ತಿ ಹಿರೇಮಠ ನಿರೂಪಿಸಿ, ವಂದಿಸಿದರು.