ದಾನ, ಧರ್ಮ ಮಾಡದಿದ್ದರೆ ಗಳಿಸಿದ್ದು ಹಳಸಿದ ಅಡುಗೆ

| Published : Sep 14 2025, 01:06 AM IST

ದಾನ, ಧರ್ಮ ಮಾಡದಿದ್ದರೆ ಗಳಿಸಿದ್ದು ಹಳಸಿದ ಅಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಖಾಸ್ಗತೇಶ್ವರ ಮಠದಲ್ಲಿ ನಡೆಯುವ ಜಾತ್ರೋತ್ಸವ ಮತ್ತು ಶ್ರೀಗಳ ಪುಣ್ಯಸ್ಮರಣೋತ್ಸವದಲ್ಲಿ ಕಲ್ಯಾಣದ ಹಾಗೂ ಕೈಲಾಸದ ವರ್ಣನೆಗಳು ಇವೆರಡೂ ಸಿಗುತ್ತವೆ ಎಂದು ಕಣ್ಣೂರ ಗುರುಮಠದ ಸೋಮನಾಥ ಶಿವಾಚಾರ್ಯರು ನುಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಖಾಸ್ಗತೇಶ್ವರ ಮಠದಲ್ಲಿ ನಡೆಯುವ ಜಾತ್ರೋತ್ಸವ ಮತ್ತು ಶ್ರೀಗಳ ಪುಣ್ಯಸ್ಮರಣೋತ್ಸವದಲ್ಲಿ ಕಲ್ಯಾಣದ ಹಾಗೂ ಕೈಲಾಸದ ವರ್ಣನೆಗಳು ಇವೆರಡೂ ಸಿಗುತ್ತವೆ ಎಂದು ಕಣ್ಣೂರ ಗುರುಮಠದ ಸೋಮನಾಥ ಶಿವಾಚಾರ್ಯರು ನುಡಿದರು.

ಶ್ರೀ ಖಾಸ್ಗತ ಮಹಾಶಿವಯೋಗಿಗಳವರ ೧೨೯ನೇ ಹಾಗೂ ವಿರಕ್ತ ಮಹಾಸ್ವಾಮಿಗಳವರ ೧೧ ನೇ ಪುಣ್ಯಸ್ಮರಣೋತ್ಸವ ಪ್ರಯುಕ್ತ ಶ್ರೀ ಗುರು ಭಿಕ್ಷೇಶ್ವರ ಸಭಾ ಮಂಟಪದಲ್ಲಿ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಶ್ರೀಗಳು, ಧರ್ಮ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾದರೆ ಪುಣ್ಯಮಾಡಿ ಬರಬೇಕಾಗುತ್ತದೆ. ಜೀವನದಲ್ಲಿ ಮನುಷ್ಯ ಓದುಬರಹ ಕಲಿಯುತ್ತಾನೆ, ಆದರೆ ಸತ್ಪುರುಷರ ಮಾರ್ಗ ಅನುಸರಿಸುತ್ತಿಲ್ಲ, ಹಾಗಾಗಬಾರದೆಂದರು. ಮನಸ್ಸಿನಲ್ಲಿ ಆಧ್ಯಾತ್ಮ ಕಾರ್ಯ ಮಾಡಬೇಕು. ಈ ಹಿಂದೆ ಶ್ರೀ ಖಾಸ್ಗತರು ಹಾಗೂ ವಿರಕ್ತಮಹಾಸ್ವಾಮಿಗಳು ರೈತರ ಹೋರಾಟದಲ್ಲಿ ರೈತರ ನಾಯಕತ್ವದಲ್ಲಿಯೂ ಭಾಗವಹಿಸಿ ಹೆಸರು ಪಡೆದಿದ್ದಾರೆ. ಜೀವನದಲ್ಲಿ ಗಳಿಸಿದ್ದನ್ನು ಇಲ್ಲಯೇ ಬಿಟ್ಟು ಹೋಗಬೇಕಾಗುತ್ತದೆ. ದಾನಧರ್ಮ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಗಳಿಕೆಯ ಊಟ ಬಿಸಿ ಊಟವಾಗಿ ಪರಿಣಮಿಸುತ್ತದೆ, ಲಂಚ ಸ್ವೀಕರಿಸಿದ ಹಣದ ಊಟ ಜೀವನವನ್ನು ನಾಶ ಮಾಡುತ್ತದೆ. ಶಿಕ್ಷಣ ಕಲಿತು ದಾನಧರ್ಮ ಮಾಡದಿದ್ದರೆ ಹಳಸಿದ ಅಡುಗೆಯಾಗಿ ಪರಿಣಮಿಸುತ್ತದೆ ಎಂದರು. ಶ್ರೀ ಸಿದ್ದಲಿಂಗದೇವರು ಚಿಕ್ಕಂದಿನಿಂದಲೇ ಜ್ಞಾನ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಭಕ್ತರೇ ಶ್ರೀಮಠದ ಆಸ್ತಿ ಎಂದು ನುಡಿದಿದ್ದಾರೆ. ಹಣದ ಅಪೇಕ್ಷೆ ಮಾಡಲಾರದೇ ಸಿದ್ದಲಿಂಗದೇವರ ಅನೇಕ ಕನಸುಗಳಿವೆ. ಅವು ಶೀಘ್ರದಲ್ಲಿಯೇ ನನಸಾಗಲಿದೆ ಎಂದು ಭವಿಷ್ಯ ನುಡಿದರು. ಕೊಡೇಕಲ್ಲ ದುರುದುಂಡೇಶ್ವರ ಮಠದ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ, ಈ ನಾಡಿನ ದೇವರು ವಿರಕ್ತ ಅಜ್ಜನವರು. ವಿರಕ್ತಶ್ರೀ ಎಂಬುದು ಖಾಸ್ಗತ ಮಠಕ್ಕೆ ಅಧ್ಭುತ ಕಳಶವಾಗಿತ್ತು. ಈ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು. ಈಗಲೂ ಮಠದಲ್ಲಿ ಯಾವಾಗಲೂ ತಾಯಿ ನೀಡುವ ಪ್ರೀತಿ ದೊರೆಯುತ್ತದೆ. ಯಾವಾಗಲೂ ಎಲ್ಲರ ಮನೆ ಮನಸ್ಸುಗಳನ್ನು ಶ್ರೀಗಳು ಬೆಳಗುತ್ತಲಿದ್ದಾರೆಂದರು. ಚಿಕ್ಕತೊಟ್ಟಿಲಕೇರಿಯ ಶಿವಲಿಂಗ ಮಹಾಸ್ವಾಮಿಗಳು ಮಾತನಾಡಿ, ಕ್ಷೇತ್ರವನ್ನು ಪುಣ್ಯ ಕ್ಷೇತ್ರವನ್ನಾಗಿ ಮಾಡಿದ ಶ್ರೀಗಳನ್ನು ಸೂರ್ಯಚಂದ್ರ ಇರುವವರೆಗೂ ಅಜರಾಮರವಾಗಿ ನೆನಪಿಸಲಾಗುತ್ತದೆ. ಸ್ವಾಮಿಗಳೇ ದೇವರು ಅವರ ಆತ್ಮವೇ ದೇವರಾಗಿ ಪರಿಣಮಿಸುತ್ತದೆ. ಆ ಶಕ್ತಿ ನೆನೆದವರಿಗೆ ಬೇಕು ಬೇಡಿಕೆಯನ್ನು ಈಡೇರಿಸುತ್ತದೆ ಎಂದು ಹೇಳಿದ ಶ್ರೀಗಳು ಮಾನವ ಮೋಕ್ಷ ಪಡೆದು ದೇವರಾಗಬೇಕಾಗಿದೆ ಎಂದರು.ತಹಸೀಲ್ದಾರ್‌ ಡಾ.ವಿನಯಾ ಹೂಗಾರ, ಪಿಎಸ್‌ಐ ಜ್ಯೋತಿ ಖೋತ್ ಮಾತನಾಡಿ, ಶ್ರೀ ಖಾಸ್ಗತ ಮಠದ ಕಾರ್ಯಕ್ರಮಗಳು ಭಕ್ತಿ ಮಾರ್ಗದತ್ತ ಕೊಂಡ್ಯೋಯ್ಯುತ್ತಿವೆ. ಇಂತಹ ಕಾರ್ಯಕ್ರಮದಲ್ಲಿ ಆಹ್ವಾನಿಸಿರುವುದು ಸಂತಸ ತಂದಿದೆ. ಶ್ರೀಮಠದ ವರ್ಚಸ್ಸು ಘನತೆ ಗೌರವ ಕುರಿತು ಈ ಹಿಂದಿನಿಂದಲೂ ಕೇಳುತ್ತಿದ್ದೇವೆ. ಹಿಂದೆ ಜರುಗಿದ ಖಾಸ್ಗತರ ಜಾತ್ರೋತ್ಸವದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದರು. ಪ್ರವಚನಕಾರ ಅಂಬಳನೂರಿನ ಸಂಗಮನಾಥ ದೇವರು ಪ್ರಾಸ್ತಾವಿಕ ಮಾತನಾಡಿದರು. ಮಠದ ಉಸ್ತುವಾರಿ ವೇ.ಮುರುಗೇಶ ವಿರಕ್ತಮಠ, ರವೀಂದ್ರ ಮಹಾರಾಜರು ಉಪಸ್ತಿತರಿದ್ದರು. ಈ ಸಮಯದಲ್ಲಿ ಶ್ರೀಗಳಿಗೆ ಹಾಗೂ ಅತಿಥಿಗಳಿಗೆ ಸನ್ಮಾನಿಸಲಾಯಿತು. ಡಾ.ಎ.ಬಿ.ಇರಾಜ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.