ನಿವೇಶನ ಕೊಡದಿದ್ರೆ ವಿಷ ಕುಡಿತೀವಿ; ಎಚ್ಚರಿಕೆ

| Published : Feb 12 2024, 01:31 AM IST

ಸಾರಾಂಶ

ಇನಾಂ ಜಮೀನಿಗೆ ಹೊಂದಿದ ಮಹಿಳೆಯೊಬ್ಬರಿಗೆ ಸೇರಿದ 2.16 ಎಕರೆ ಭೂಮಿ ಇದೆ. ಅದನ್ನು ನಾವ್ಯಾರೂ ಕೇಳುತ್ತಿಲ್ಲ. ಪಕ್ಕದ ಸರ್ಕಾರಿ ಜಮೀನಿನಲ್ಲಿ ನಿವೇಶನ ಕೇಳುತ್ತಿದ್ದಾರೆ. ಈ ಮಹಿಳೆ ಹಾಗೂ ದಲಿತ ಸಂಘಟನೆ ರಾಜ್ಯಾಧ್ಯಕ್ಷ ಎಂಬ ವ್ಯಕ್ತಿ ಸೇರಿ ದಲಿತ ಬಡ ಕುಟುಂಬಗಳ ನ್ಯಾಯಸಮ್ಮತ, ಪ್ರಜಾಸತ್ತಾತ್ಮಕ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಇನಾಂ ಜಮೀನಿನಲ್ಲಿ ಮಾದಿಗ, ಹಿಂದುಳಿದ ಸಮುದಾಯದ ಕೂಲಿ ಕಾರ್ಮಿಕರಿಗೆ ವಸತಿ ಕಲ್ಪಿಸುವ ಬಗ್ಗೆ ಫೆ.12ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರರೇ ತಮ್ಮ ಸಾವಿಗೆ ಹೊಣೆ ಮಾಡಿ, ವಿಷ ಕುಡಿದು ಸಾಯುತ್ತೇವೆ ಎಂದು ಹರಿಹರ ತಾಲೂಕು ಭಾನುವಳ್ಳಿ ಗ್ರಾಮದ ದಲಿತ ಕುಟುಂಬಗಳು ಎಚ್ಚರಿಕೆ ನೀಡಿವೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾನುವಳ್ಳಿ ಗ್ರಾಮದ ಸಿ.ಚೌಡಪ್ಪ, ಲಕ್ಷ್ಮಪ್ಪ ಭಾನುವಳ್ಳಿ ಇತರರು, ಭಾನುವಳ್ಳಿ ರಿ.ಸ.ನಂ. ವ್ಯಾಪ್ತಿಯ ಇನಾಂ ಜಮೀನಿನಲ್ಲಿ ಸುಮಾರು 200 ದಲಿತ, ಹಿಂದುಳಿತ, ಬಡ ಕುಟುಂಬಗಳಿಗೆ ನಿವೇಶನ ನೀಡುವಂತೆ ಕಳೆದ 3 ವರ್ಷದಿಂದ ನಿರಂತರ ಮನವಿ ಮಾಡಿ, ಕಳೆದ 48 ದಿನದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ನಿವೇಶನ ಕೊಡದ ಆಡಳಿತ ಯಂತ್ರದ ಅಧಿಕಾರಿಗಳನ್ನೇ ಹೊಣೆ ಮಾಡಿ, ವಿಷ ಕುಡಿದು ಸಾಯುತ್ತೇವೆ ಎಂದರು.

ಅನೇಕ ದಶಕದಿಂದ ಚಿಕ್ಕ ಗುಡಿಸಲಲ್ಲಿ ವಾಸಿಸುತ್ತಿದ್ದರೂ ಸರ್ಕಾರ, ಗ್ರಾಮ ಪಂಚಾಯಿತಿ ಆಗಲಿ ವಸತಿ ಯೋಜನೆಯಡಿ ಸೂರು, ನಿವೇಶನ ಕಲ್ಪಿಸಿಲ್ಲ. ಈಗ ಗ್ರಾಮದ ಇನಾಂ ಜಮೀನಿನಲ್ಲಿ ನಿವೇಶನ ಕೋರಿ ಹೋರಾಟ ನಡೆಸಿದರೆ, ದಲಿತ ಸಂಘಟನೆ ರಾಜ್ಯಾಧ್ಯಕ್ಷ ಎಂಬ ವ್ಯಕ್ತಿಯೂ ಅದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇನಾಂ ಜಮೀನಿಗೆ ಹೊಂದಿದ ಮಹಿಳೆಯೊಬ್ಬರಿಗೆ ಸೇರಿದ 2.16 ಎಕರೆ ಭೂಮಿ ಇದೆ. ಅದನ್ನು ನಾವ್ಯಾರೂ ಕೇಳುತ್ತಿಲ್ಲ. ಪಕ್ಕದ ಸರ್ಕಾರಿ ಜಮೀನಿನಲ್ಲಿ ನಿವೇಶನ ಕೇಳುತ್ತಿದ್ದಾರೆ. ಈ ಮಹಿಳೆ ಹಾಗೂ ದಲಿತ ಸಂಘಟನೆ ರಾಜ್ಯಾಧ್ಯಕ್ಷ ಎಂಬ ವ್ಯಕ್ತಿ ಸೇರಿ ದಲಿತ ಬಡ ಕುಟುಂಬಗಳ ನ್ಯಾಯಸಮ್ಮತ, ಪ್ರಜಾಸತ್ತಾತ್ಮಕ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ದಲಿತ ಸಂಘಟನೆ ಹೆಸರಿನಲ್ಲಿ ದಲಿತರಿಗೆ ಅನ್ಯಾಯ ಮಾಡುತ್ತಿದ್ದು, ದಲಿತ ಸಂಘರ್ಷ ಸಮಿತಿ ಹೆಸರಿನ ದುರ್ಬಳಕೆಯಾಗುತ್ತಿದೆ. ಈ ಬಗ್ಗೆ ಡಿಎಸ್ಸೆಸ್ ಪದಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಇಂದಿನ ಸಭೆಯಲ್ಲಿ ಜಿಲ್ಲಾಧಿಕಾರಿ, ಎಸಿ, ಹರಿಹರ ತಹಸೀಲ್ದಾರ್‌ ಒಳಗೊಂಡಂತೆ ಅಧಿಕಾರಿಗಳು ಭಾಗವಹಿಸಲಿದ್ದಾರೆ. ದಲಿತರ ನ್ಯಾಯಯುತ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿರುವ ದಲಿತ ಸಂಘಟನೆ ಮುಖಂಡನಿಗೆ ಮಹಿಳೆಯ ಜಮೀನು ಯಾವುದು, ದಲಿತ ಕುಟುಂಬಗಳು ನಿವೇಶನಕ್ಕಾಗಿ ಕೇಳುತ್ತಿರುವ ಇನಾಂ ಜಮೀನು ಯಾವುದೆಂಬುದೇ ಸ್ಪಷ್ಟವಾಗಿ ತಿಳಿದಿಲ್ಲ. ವಾಸ್ತವದಲ್ಲಿ ಹರಿಹರ ತಹಸೀಲ್ದಾರ್‌ ನಮಗೆ ನಿವೇಶನಕ್ಕಾಗಿ ಕಳಿಸಿರುವ ವರದಿ, ಪ್ರಸ್ತಾವನೆಯಲ್ಲಾಗಲೀ ಆ ಮಹಿಳೆಯ ಜಮೀನಿನ ರಿ.ಸ.ನಂ. ಇಲ್ಲ. ಭಾನುವಳ್ಳಿ ರಿ.ಸ.ನಂ.239ರಲ್ಲಿ ಲಭ್ಯವಿರುವ ಎ.ಕೆ.ಸರ್ವೀಸ್‌ ಇನಾಂ ಜಮೀನಿನಲ್ಲೇ ನಿವೇಶನ ನೀಡಬೇಕೆಂಬುದಷ್ಟೇ ನಮ್ಮ ಬೇಡಿಕೆ. ಆ ಮಹಿಳೆಯ ಜಮೀನಿನ ವಿಚಾರಕ್ಕೂ ನಮ್ಮ ಬೇಡಿಕೆಗೂ ಯಾವುದೇ ಸಂಬಂಧ ಇಲ್ಲ. ಒಂದು ವೇಳೆ ಆ ಮಹಿಳೆ ನ್ಯಾಯಾಲಯದಲ್ಲಿ ಕೇಸ್ ಹಾಕಿಸಿದ್ದರೆ ಅಲ್ಲಿ ಕಾನೂನು ಹೋರಾಟ ಮಾಡಲಿ. ನಾವು ಕೇಳಿದ ಇನಾಂ ಜಮೀನಿಗೂ, ಆ ಮಹಿಳೆಯ ಜಮೀನಿಗೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಗ್ರಾಮದ ದಲಿತ ಕುಟುಂಬಗಳ ಹನುಮಂತಪ್ಪ, ಹನುಮಕ್ಕ ದುರ್ಗಪ್ಪ ಮಾಗೋಡು, ಸುಶೀಲಮ್ಮ ತೆಲಗಿ, ಪುಷ್ಪಾ ಚೌಡಪ್ಪ ಇತರರಿದ್ದರು.