ಹಳಗನ್ನಡ ಕಾವ್ಯಗಳನ್ನು ಓದದಿದ್ದರೆ ಅರ್ಥೈಸುವಿಕೆಯೇ ತಪ್ಪಾಗುವದು: ಡಾ.ಶಾಂತರಾಜು ಎಚ್ಚರಿಕೆ

| Published : Nov 11 2024, 11:49 PM IST

ಹಳಗನ್ನಡ ಕಾವ್ಯಗಳನ್ನು ಓದದಿದ್ದರೆ ಅರ್ಥೈಸುವಿಕೆಯೇ ತಪ್ಪಾಗುವದು: ಡಾ.ಶಾಂತರಾಜು ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಜೈನ ಕಾವ್ಯಗಳಲ್ಲಿ ದೇವರನ್ನು ಮೀರಿ ಮನುಷ್ಯ ಬೆಳೆದ ಬಗ್ಗೆ ಕೃತಿ ರಚನೆಯಾಗಿವೆ. ವೀರಶೈವ ಕೃತಿಗಳಲ್ಲಿ ವೀರಶೈವ ಪ್ರತಿಪಾದನೆ ಜೊತೆಗೆ ಶಿವನ ಆರಾಧನೆಗೆ ಒತ್ತು ನೀಡಲಾಗಿದೆ. ಎಲ್ಲಾ ಕಾಲಘಟ್ಟಗಳಲ್ಲಿಯೂ ಕಾವ್ಯಗಳ ಮೇಲೆ‌ ಧರ್ಮ ಪ್ರಭಾವ ಬೀರಿರುವುದನ್ನು ಕಾಣುತ್ತೇವೆ.

ಕನ್ನಡಪ್ರಭ ವಾರ್ತೆ ಹಲಗೂರು

ಹಳಗನ್ನಡ ಕಾವ್ಯಗಳನ್ನು ಓದುವ ಕ್ರಮವನ್ನು ಕಲಿಯದಿದ್ದರೆ ಅರ್ಥೈಸುವಿಕೆಯೇ ತಪ್ಪಾಗಿ ಕಾವ್ಯದ ಮೂಲ ಉದ್ದೇಶವೇ ದಾರಿ ತಪ್ಪುತ್ತದೆ ಎಂದು ಬಿಎಂಶ್ರೀ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಶಾಂತರಾಜು ಎಚ್ಚರಿಸಿದರು.

ಸಮೀಪದ ಡಿ.ಹಲಸಹಳ್ಳಿ ಷಡಕ್ಷರಿ ಗವಿಮಠದಲ್ಲಿ ಷಡಕ್ಷರ ಪೀಠ ಧನಗೂರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಳವಳ್ಳಿ ಹಾಗೂ ಸಂಸ ಥಿಯೇಟರ್ ಬೆಂಗಳೂರು ಸಹಯೋಗದಲ್ಲಿ ಭಾನುವಾರ ನಡೆದ ಹಳಗನ್ನಡ ಕಾವ್ಯ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಹಳಗನ್ನಡ ಕಾವ್ಯ ಓದಲು ಪದ ವಿಭಾಗ, ಅನ್ವಯಿಸುವಿಕೆ ಹಾಗೂ ವ್ಯಾಖ್ಯಾನಿಸುವುದು ಪ್ರಮುಖವಾದ ಮೂರು ಹಂತಗಳಾಗಿವೆ. ಜೊತೆಗೆ ಕಾವ್ಯ ಕಟ್ಟಿಕೊಡುವ ವರ್ಣನೆಯನ್ನು ವಿಶ್ಲೇಷಿಸುವುದು ಮುಖ್ಯ. ಈ ಕ್ರಮಗಳನ್ನು ಅನುಸರಿಸಿದಾಗ ಹಳಗನ್ನಡ ಕಾವ್ಯಗಳನ್ನು ಸುಲಭವಾಗಿ ಅರ್ಥೈಸಬಹುದು ಎಂದು ಸಲಹೆ ನೀಡಿದರು.

ಜೈನ ಕಾವ್ಯಗಳಲ್ಲಿ ದೇವರನ್ನು ಮೀರಿ ಮನುಷ್ಯ ಬೆಳೆದ ಬಗ್ಗೆ ಕೃತಿ ರಚನೆಯಾಗಿವೆ. ವೀರಶೈವ ಕೃತಿಗಳಲ್ಲಿ ವೀರಶೈವ ಪ್ರತಿಪಾದನೆ ಜೊತೆಗೆ ಶಿವನ ಆರಾಧನೆಗೆ ಒತ್ತು ನೀಡಲಾಗಿದೆ. ಎಲ್ಲಾ ಕಾಲಘಟ್ಟಗಳಲ್ಲಿಯೂ ಕಾವ್ಯಗಳ ಮೇಲೆ‌ ಧರ್ಮ ಪ್ರಭಾವ ಬೀರಿರುವುದನ್ನು ಕಾಣುತ್ತೇವೆ ಎಂದರು.

ಷಡಕ್ಷರ ಕವಿ ಕಾವ್ಯಗಳಲ್ಲಿಯೂ ವೀರಶೈವ ಧರ್ಮ ಉತ್ಥಾನ ಆಗಿರುವುದನ್ನು ಕಾಣುತ್ತೇವೆ. ಶೃಂಗಾರ ಮೆರೆಸಿದ ಕವಿ ಕರುಣೆ ಉಕ್ಕಿ ಹರಿಯುವಂತೆ ರಾಜಶೇಖರ ವಿಳಾಸಂ ಬರೆದಿದ್ದಾರೆ. ಶಬರ ಶಂಕರ ವಿಳಾಸಂ ಕೃತಿಯಲ್ಲಿ ಅರ್ಜುನನ್ನು ಸೋಲಿಸುವುದಕ್ಕಿಂದ ಒಲಿಸುವ ದೃಷ್ಟಿ ಕಂಡು ಬಂದು ಧಾರ್ಮಿಕ ನಿಷ್ಠೆ ಬಿಂಬಿತವಾಗಿದೆ. ಬಸವಣ್ಣನ ಕೇಂದ್ರೀಕರಿಸಿ ವೃಷಭೇಂದ್ರ ವಿಜಯ ಬರೆದಿದ್ದಾರೆ. ಕಾವ್ಯಗಳನ್ನು ಅರಿಯಲು ಕವಿಯ ಕಾಲ, ಸಾಮಾಜಿಕ ವಾತಾವರಣ, ಕಾಲಘಟ್ಟದ ತಿಳುವಳಿಕೆಯೂ ಮಹತ್ವವಾದುದು ಎಂದರು.

ಡಿ.ಹಲಸಹಳ್ಳಿ ಷಡಕ್ಷರಿ ಗವಿ ಮಠದ ಪೀಠಾಧಿಪತಿ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಷಡಕ್ಷರ ಕವಿ ಕಾವ್ಯಗಳನ್ನು ಜನರಿಗೆ ತಲುಪಿಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಷಡಕ್ಷರ ಪೀಠದ ಕಾರ್ಯ ನಿರಂತರವಾಗಿರಲಿ. ಧಾರ್ಮಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವ ಕಾರ್ಯವನ್ನು ಮಠದ ವತಿಯಿಂದ ಮಾಡಲಾಗುವುದು. ಪೀಠದ ಕಾರ್ಯಕ್ರಮಗಳಿಗೆ ಎರಡು ಮಠಗಳು ಬೆನ್ನಲುಬಾಗಿ ನಿಲ್ಲಲಿವೆ ಎಂದರು.

ಇದೇ ಸಂದರ್ಭದಲ್ಲಿ ರಸಪ್ರಶ್ನೆ, ಟಿಪ್ಪಣಿ ಬರಹ ವಿಜೇತರಿಗೆ ಬಹುಮಾನ ನೀಡಲಾಯಿತು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಷಡಕ್ಷರ ಪೀಠದ ಎಲ್ಲಾ ಪದಾಧಿಕಾರಿಗಳಿಗೆ ಷಡಕ್ಷರ ಮಠದ ವತಿಯಿಂದ ಗೌರವಿಸಲಾಯಿತು.

ಸಮಾರಂಭದಲ್ಲಿ ಡಿ.ಹಲಸಹಳ್ಳಿ ಷಡಕ್ಷರ ಗವಿಮಠದ ಷಡಕ್ಷರಿ ಸ್ವಾಮೀಜಿ ಹಾಗೂ ಧನಗೂರು ಷಡಕ್ಷರ ಮಠದ ಮುಮ್ಮಡಿ ಷಡಕ್ಷರಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಡಾ.ಕೂಡ್ಲೂರು ವೆಂಕಟಪ್ಪ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯಶಿಕ್ಷಕ ಡಿ.ರಾಮು, ಸಾಹಿತಿ ಮ.ರಾಮಕೃಷ್ಣ, ಷಡಕ್ಷರ ಪೀಠದ ಉಪಾಧ್ಯಕ್ಷ ಕೆ.ಕೆಂಡಗಯ್ಯ, ಪತ್ರಕರ್ತ ಪರಶಿವ ಧನಗೂರು, ಸಂಸ ಸುರೇಶ್, ಉಮೇಶ್ ದಡಮಹಳ್ಳಿ, ಚ.ನಾ.ಉಮೇಶ್, ಡಿ.ಸಿ.ಪುರ ರಾಜು, ಕೆಎಸ್ಆರ್ ಟಿಸಿ ಪುಟ್ಟಸ್ವಾಮಿ ಇದ್ದರು.