ಸಾರಾಂಶ
ಚಳ್ಳಕೆರೆ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಸ್ತುತ 2023ರಚುನಾವಣೆಯಲ್ಲಿ ಗೆಲುವು ಸಾಧಿಸಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಒಪಿಎಸ್ ಜಾರಿಮಾಡುವ ಭರವಸೆ ನೀಡಿ ಈಗ ಭರವಸೆಯನ್ನು ಮರೆತು ಸರ್ಕಾರಿ ನೌಕರರ ಭವಿಷ್ಯವನ್ನು ಕತ್ತಲಲ್ಲಿಟ್ಟಿದ್ದಾರೆಂದು ತಾಲೂಕು ಸರ್ಕಾರಿ ನೌಕರರ ಎನ್‌ಪಿಎಸ್ ಸಂಘದ ಅಧ್ಯಕ್ಷ ಎಚ್.ಒ.ರಾಜಣ್ಣ ಆರೋಪಿಸಿದರು.
ಭಾನುವಾರ ಅಂಬೇಡ್ಕರ್ ವೃತ್ತದಲ್ಲಿ ರಾಜ್ಯ ಸಂಘದ ಕರೆಯ ಮೇರೆಗೆ ಸರ್ಕಾರದ ವಿರುದ್ಧ ಪ್ರತಿಭಟಿಸಿ, ಒಪಿಎಸ್ ಜಾರಿಮಾಡುವಂತೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಒತ್ತಾಯಪಡಿಸಿದರು.ಪ್ರಸ್ತುತ ಕಳೆದ ಏಳು ತಿಂಗಳಿನಿದ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಪಕ್ಷದ ಆಡಳಿತ ಸರ್ಕಾರ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ನಿರ್ಲಕ್ಷ್ಯವಹಿಸಿದೆ. ಹಲವಾರು ಬಾರಿ ಮನವಿ ಮಾಡಿಕೊಂಡರೂ ಸಹ ಸರ್ಕಾರಿ ನೌಕರರ ಯಾವುದೇ ಬೇಡಿಕೆ ಇದುವರೆಗೂ ಪರಿಗಣಿಸಿಲ್ಲ. ಆದ್ದರಿಂದ ಮುಂಬರುವ ದಿನಗಳಲ್ಲಿ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಟಿ.ವೀರೇಶ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಸರ್ಕಾರ ಮರೆತಂತೆ ಕಾಣುತ್ತಿದೆ. ಹಲವಾರು ಬಾರಿ ಸರ್ಕಾರಿ ನೌಕರರ ಸಂಘ ಮನವಿ ಮಾಡಿದರೂ ಯಾವುದೇ ಸೂಕ್ತ ಉತ್ತರ ಸರ್ಕಾರದಿಂದ ದೊರಕಿಲ್ಲ. ಸರ್ಕಾರಿ ನೌಕರರ ಸೌಲಭ್ಯಗಳಿಗೆ ಸರ್ಕಾರ ಕತ್ತರಿ ಹಾಕುವಲ್ಲಿ ಯಶಸ್ವಿಯಾಗಿದೆ. ನೌಕರರ ಹೋರಾಟ ಹಾಗೂ ಮನವಿ ಲಘುವಾಗಿ ಪರಿಗಣಿಸಲಾಗಿದೆ. ಆದರೆ, ನಮಗೆ ಬೇಕಾದ ಬೇಡಿಕೆ ಈಡೇರಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ನಿಲುವುಗಳನ್ನು ಖಂಡಿಸಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.ಅನುದಾನ ಶಾಲಾ-ಕಾಲೇಜುಗಳ ನೌಕರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಿ.ಟಿ.ವೀರಭದ್ರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಚುನಾವಣಾ ಸಂದರ್ಭದಲ್ಲಿ ಮತಗಳನ್ನು ಪಡೆಯಲು ಸುಳ್ಳು ಭರವಸೆ ನೀಡಿರುವುದು ಈ ರುಜುವಾತಾಗಿದೆ. ಆದರೆ, ಸರ್ಕಾರಿ ನೌಕರರು ಮಾತ್ರ ಸರ್ಕಾರ ವಿರುದ್ದ ವ್ಯಾಪಕ ಅಸಮದಾನ ಹೊಂದಿದ್ದು, ಈ ಬಗ್ಗೆ ಸರ್ಕಾರ ಕೂಡಲೇ ಸೂಕ್ತ ನಿರ್ಧಾರವನ್ನು ಕೈಗೊಂಡು ಸರ್ಕಾರಿ ನೌಕರರ ಕಲ್ಯಾಣಕ್ಕೆ ಶ್ರಮಿಸಬೇಕು ಎಂದರು.
ತಾಲ್ಲೂಕು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಮಹಂತಣ್ಣ, ಅನುದಾನಿತ ಪ್ರೌಢಶಾಲೆಗಳ ನೌಕರರ ಸಂಘದ ಅಧ್ಯಕ್ಷ ಪಿ.ನಾಗರಾಜು, ಕಾರ್ಯದರ್ಶಿ ಡಿ.ವೀರಣ್ಣ, ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ತಳಕುಸುರೇಶ್, ಬೆಸ್ಕಾಂ ನಾಗರಾಜು, ರಮೇಶ್, ಗಣೇಶ್, ನಾಗರಾಜು, ಪಾಲಯ್ಯ ಮುಂತಾದವರು ಉಪಸ್ಥಿತರಿದ್ದರು.