ಸೋಮಾರಿತನ ಬಿಟ್ಟರೆ ಸಾಧನೆ ಕೈ ಸೇರುತ್ತದೆ

| Published : Nov 06 2025, 01:45 AM IST

ಸಾರಾಂಶ

ಸೋಮಾರಿತನ ಇದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ. ನಾವು ಎಷ್ಟೇ ಓದಿರಲಿ, ಏನೇ ಸಾಧನೆ ಮಾಡಿರಲಿ, ನಮ್ಮಲ್ಲಿ ಸೋಮಾರಿತನ ಜೊತೆಗೂಡಿದಾಗ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಜಗದ್ಗುರು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಶಿವಮೊಗ್ಗ: ಸೋಮಾರಿತನ ಇದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ. ನಾವು ಎಷ್ಟೇ ಓದಿರಲಿ, ಏನೇ ಸಾಧನೆ ಮಾಡಿರಲಿ, ನಮ್ಮಲ್ಲಿ ಸೋಮಾರಿತನ ಜೊತೆಗೂಡಿದಾಗ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಜಗದ್ಗುರು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಆದಿಚುಂಚನಗಿರಿ ಶಾಖಾಮಠದ ಸಮುದಾಯಭವನದಲ್ಲಿ ಬುಧವಾರ ಆಯೋಜಿಸಿದ್ದ 35ನೇ ವಾರ್ಷಿಕೋತ್ಸವದ ಎರಡನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾಧನೆ ಸಿಗಬೇಕೆಂದರೆ ಸೋಮಾರಿತನ ಕೈ ಬಿಟ್ಟಂತೆ, ಬದ್ಧತೆ ಹಾಗೂ ಛಲವನ್ನು ಬೆಳೆಸಿಕೊಳ್ಳಬೇಕು. ಅದಕ್ಕೆ ನಮ್ಮ ನಡುವೆ ಸಾಕಷ್ಟು ನಿದರ್ಶನಗಳು ಕಾಣಿಸುತ್ತವೆ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಆರಂಭಗೊಂಡು ಐವತ್ತು ವರ್ಷ ಆಗಿದ್ದು, ಕೇವಲ ಮಠದ, ಸಮಾಜದ ಕಾರ್ಯಕ್ಕೆ ಸೀಮಿತವಾಗದೆ, ನಮ್ಮ ಮಕ್ಕಳಿಗೆ ಅತ್ಯುತ್ತಮವಾದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಆರಂಭಗೊಂಡ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಿಜವಾಗಿಯೂ ಈಗ ರಾಜ್ಯಾದ್ಯಂತ ಲಕ್ಷಾಂತರ ಸಾಧಕರನ್ನು ಹೊರತಂದಿದೆ. ಲಕ್ಷಾಂತರ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ ಎಂದರು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮೊಟ್ಟ ಮೊದಲ ಬಾರಿಗೆ ಖಾಸಗಿ ರೂಪದಲ್ಲಿ ಕೃಷಿ ವಿಜ್ಞಾನ ಕಾಲೇಜನ್ನು ಆರಂಭಿಸಿದ್ದು, ಅದರ ಮೂಲಕ ನಿತ್ಯ ನಿರಂತರ ಕೃಷಿ ಸಂಶೋಧನೆಗಳು ಹೆಚ್ಚುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದೆ ಎಂದರು.

45 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಬಡ ಭಾರತದ ಬಗ್ಗೆ ಅತ್ಯಂತ ವಿವರಣಾತ್ಮಕವಾಗಿ ಹೊಗಳಿದ್ದರು. ಅದು ಈಗ ಸಾಧನೆಯಾಗಿದೆ. ಬಡಭಾರತವಾಗಿದ್ದ ನಮ್ಮ ದೇಶ ಇಂದು ವಿಶ್ವದಲ್ಲೇ ನಾಲ್ಕನೇ ಪ್ರಮುಖ ರಾಷ್ಟ್ರವಾಗಿರುವುದು ನಮ್ಮೆಲ್ಲರ ಹಿರಿಮೆಯ ಸಂಗತಿ. ತಾಯಿ ಹಾಗೂ ಹೆಣ್ಣು ಮಕ್ಕಳಿಗೆ ಗೌರವ ಕೊಡುವ ಭಾರತ ಇಡೀ ವಿಶ್ವದಲ್ಲೇ ಎಲ್ಲ ದೇಶಗಳಿಗೂ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತಿ ವಹಿಸಿದ್ದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಸಾಯಿ ಮಠದ ಮಂಜುನಾಥ ಸ್ವಾಮೀಜಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ಹೆಗಡೆ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮತ್ತಿತರರು ಇದ್ದರು.

ಪ್ರಸನ್ನನಾಥ ಸ್ವಾಮೀಜಿ ಪ್ರಶಂಸಿಸಿದ

ಡಾ.ನಿರ್ಮಲಾನಂದನಾಥ ಶ್ರೀ

ಕಳೆದ 35 ವರ್ಷಗಳ ಹಿಂದೆ ಶಿವಮೊಗ್ಗಕ್ಕೆ ಬಂದಿದ್ದಂತಹ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಅವರು ಚಿಕ್ಕ ಬಾಡಿಗೆ ಮನೆಯೊಂದರಲ್ಲಿ ಮಠವನ್ನು ಆರಂಭಿಸಿದ್ದು, ಈಗ ಮಠದ ಅಭಿವೃದ್ಧಿಯ ಜೊತೆಗೆ ಒಂದೇ ಸಮಾಜಕ್ಕೆ ಮೀಸಲಾಗದೇ, 15000ಕ್ಕೂ ಹೆಚ್ಚು ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡುವಂತಹ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದಕ್ಕೆ ಕಾರಣ ಪ್ರಸನ್ನನಾಥ ಸ್ವಾಮೀಜಿ ಅವರ ಛಲ ಹಾಗೂ ಕರ್ತವ್ಯದ ಬದ್ಧತೆ ಎಂದರೆ ತಪ್ಪಾಗಲಿಕ್ಕಿಲ್ಲ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಇಲ್ಲಿನ ಶ್ರೀಗಳ ಶ್ಲಾಘನೀಯ ಕಾರ್ಯವನ್ನು ನಾವು ಗೌರವಿಸಬೇಕು ಎಂದು ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಿಂದ ಗುಂಡಪ್ಪ ಗೌಡ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಿಂದ ಪ್ರೊ.ಕೆ.ಪುಟ್ಟ ರಂಗಪ್ಪ, ವಕೀಲ ಅಶೋಕ್ ಜಿ.ಭಟ್, ಉದ್ಯಮಿ ಎಂ.ಜಿ.ಬಾಲಕೃಷ್ಣ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿಶೇಷ ಅಧಿಕಾರಿ ಡಿ.ರವಿಕುಮಾರ್, ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ, ಡಾ.ಎಸ್.ವಿ.ಸುರೇಶ್, ಎಂ.ನಾಗರಾಜ್ ಅವರ ಸಾಧನೆಯನ್ನು ಪರಿಗಣಿಸಿ ಬುಧವಾರ ಪರಮ ಪೂಜ್ಯರಿಂದ ಗೌರವಿಸಲಾಯಿತು. ಇದೇ ವೇಳೆ ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಗೆ ಪೂಜ್ಯರಿಂದ ಸನ್ಮಾನಿಸುವ ಕಾರ್ಯಕ್ರಮವೂ ನಡೆಯಿತು.