ನಾವು ಈ ಬಾರಿಯ ಪರ್ಯಾಯವನ್ನು ವಿಶ್ವಗೀತಾ ಪರ್ಯಾಯ ಎಂದು ನಡೆಸಿ, ಗೀತೆಗೆ ಸಂಬಂಧಿಸಿ ಹಲವು ಚಟುವಟಿಕೆಗಳನ್ನು ನಡೆಸಿದ್ದೇವೆ ಎಂದು ಪುತ್ತಿಗೆ ಪರ್ಯಾಯ ಶ್ರೀ ಸುಗುಣೇಂದ್ರ ಶ್ರೀಪಾದರು ಹೇಳಿದರು.

ಉಡುಪಿ: ಕೃಷ್ಣದರ್ಶನ ಪೂರ್ಣವಾಗಬೇಕಾದರೆ ಗೀತಾ ದರ್ಶನ ಕೂಡ ಆಗಬೇಕು. ಹಾಗಾಗಿಯೇ ನಾವು ಈ ಬಾರಿಯ ಪರ್ಯಾಯವನ್ನು ವಿಶ್ವಗೀತಾ ಪರ್ಯಾಯ ಎಂದು ನಡೆಸಿ, ಗೀತೆಗೆ ಸಂಬಂಧಿಸಿ ಹಲವು ಚಟುವಟಿಕೆಗಳನ್ನು ನಡೆಸಿದ್ದೇವೆ ಎಂದು ಪುತ್ತಿಗೆ ಪರ್ಯಾಯ ಶ್ರೀ ಸುಗುಣೇಂದ್ರ ಶ್ರೀಪಾದರು ಹೇಳಿದರು.

ಬೃಹತ್ ಗೀತೋತ್ಸವದ ಅಂಗವಾಗಿ ನಡೆಯುತ್ತಿರುವ ಸಂತ ಸಂದೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಜಗತ್ತಿನಲ್ಲಿ ಅನೇಕ ತಲ್ಲಣಗಳಾಗುತ್ತಿವೆ. ಇಂದು ಎಲ್ಲರ ಮನಸ್ಸು ಉದ್ವಿಘ್ನವಾಗಿದೆ. ನಾವು ನೆಮ್ಮದಿಯಿಂದ ಬದುಕಲು ಮೊಬೈಲ್ ಬಿಡುತ್ತಿಲ್ಲ. ಈ ಅಶಾಂತಿ ಹೋಗಲಾಡಿಸಲು ಇರುವ ಏಕೈಕ ಮಾರ್ಗವೆಂದರೆ ಭಗವದ್ಗೀತೆ ಎಂದರು.

ಕುಟುಂಬ ಕುಟುಂಬಗಳ‌ನಡುವೆ ಗಲಾಟೆ ಹೆಚ್ಚಾಗುತ್ತಿದೆ. ಮತೀಯ ದ್ವೇಶ, ಜಾತಿ ನಡುವೆ ಕಂದಕ ನಿರ್ಮಾಣವಾಗುತ್ತಿದೆ. ಕೋರ್ಟ್ ಗಳಲ್ಲಿ ಕೇಸ್ ಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಭಗವದ್ಗೀತೆ ಮಾತ್ರ ಪರಿಹಾರ ಎಂದರು.

ಸಿದ್ದಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಶ್ರೀಗಳು ಸಂತ ಸಂದೇಶ ನೀಡುತ್ತಾ, ಭಗವದ್ಗೀತೆ ಕೇವಲ ಸಂಭಾಷಣೆ- ಪುಸ್ತಕ ಮಾತ್ರವಲ್ಲ. ಡಿವಿಜಿ ಹೇಳುವಂತೆ ಭಗವದ್ಗೀತೆ ಒಂದು ಜೀವನ ದಿಗ್ದರ್ಶನ ಎಂದಿದ್ದಾರೆ. ವೇದ, ಉಪನೀಷತ್ ಗಳಂತೆ ಭಗವದ್ಗೀತೆ ಕೂಡ ಅದೇ ಸಾಲಿಗೆ ಸೇರುತ್ತದೆ ಎಂದರು.ಪುತ್ತಿಗೆ ಮಠದ ಕಿರಿಯ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿದ್ದರು, ಪುತ್ತಿಗೆ ಮಠದ ದಿವಾಣರಾದ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು.