ತಾಕತ್ತಿದ್ದರೆ ತಾಪಂ, ಜಿಪಂ ಚುನಾವಣೆ ನಡೆಸಿ

| Published : Apr 22 2025, 01:48 AM IST

ಸಾರಾಂಶ

ನಿಮ್ಮ ಸರ್ಕಾರಕ್ಕೆ ತಾಕತ್ತಿದ್ದರೆ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ನಡೆಸಿ. ಆಗ ನಿಮ್ಮ ಯೋಗ್ಯತೆ ಏನೆಂದು ಗೊತ್ತಾಗುತ್ತದೆ ಎಂದು ರಾಜ್ಯ ಯುವ ಜೆಡಿಎಸ್ ನ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ನಿಮ್ಮ ಸರ್ಕಾರಕ್ಕೆ ತಾಕತ್ತಿದ್ದರೆ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ನಡೆಸಿ. ಆಗ ನಿಮ್ಮ ಯೋಗ್ಯತೆ ಏನೆಂದು ಗೊತ್ತಾಗುತ್ತದೆ ಎಂದು ರಾಜ್ಯ ಯುವ ಜೆಡಿಎಸ್ ನ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದರು. ತಾಲೂಕು ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದಲ್ಲಿ ಬೆಲೆ ಏರಿಕೆ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಎರಡು ವರ್ಷ ಮಾತ್ರ ಆಗಿದೆ. ಈ ಹೊತ್ತಿಗಾಗಲೇ ಈ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ವ್ಯಕ್ತವಾಗಿದೆ. ಈ ಸರ್ಕಾರಕ್ಕೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಜನ ಕಾಯುತ್ತಿದ್ದಾರೆ. ಈ ಸರ್ಕಾರದ ಸಾಧನೆ ಶೂನ್ಯ ಅಂತ ಗೊತ್ತಾಗಿದೆ. ಜನರು ನಮ್ಮ ವಿರುದ್ಧ ತಿರುಗಿ ಬೀಳ್ತಾರೆ ಎಂದು ಗೊತ್ತಿದ್ದೇ ಕಾಂಗ್ರೆಸ್ ಸರ್ಕಾರ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ನಡೆಸುತ್ತಿಲ್ಲ. ಈ ಚುನಾವಣೆ ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಅಂತ ಗೊತ್ತು. ಹಾಗಾಗಿ ಕುಂಟು ನೆಪ ಹೇಳಿ ಚುನಾವಣೆಯನ್ನು ಮುಂದೂಡುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು. ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ನನ್ನನ್ನು ಸೋಲಿಸಲು ರಾಜ್ಯದ ಜನರ ತೆರಿಗೆ ಹಣವನ್ನು ಬಳಸಿಕೊಂಡರು. ಉಪ ಚುನಾವಣೆ ವೇಳೆ ಬೇಕೆಂದೇ ಮಹಿಳೆಯರಿಗೆ ಕೊಡಬೇಕಿದ್ದ ಗೃಹಲಕ್ಷ್ಕಿ ಯೋಜನೆಯ ಹಣವನ್ನು ಪೆಂಡಿಂಗ್ ಇರಿಸಿದ್ದರು. ಇನ್ನೇನು ಚುನಾವಣೆ ಘೋಷಣೆಯಾಯಿತು ಅನ್ನುವಷ್ಟರಲ್ಲಿ ಮೂರ್ನಾಲ್ಕು ತಿಂಗಳ ಬಾಕಿ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಿದರು. ಇದು ಮಹಿಳೆಯರಿಗೆ ಖುಷಿ ಕೊಟ್ಟಿತು. ಹಾಗಾಗಿ ಮಹಿಳೆಯರು ಕಾಂಗ್ರೆಸ್ ಪರ ಮತ ನೀಡಿದರೇ ವಿನಃ ನೈತಿಕವಾಗಿ ಕಾಂಗ್ರೆಸ್ ಗೆದ್ದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ದೂರಿದರು. ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ಶಾಸಕರಿಗೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿಯ ಬಗ್ಗೆ ನಂಬಿಕೆ ಇಲ್ಲದಾಗಿದೆ. ಒಂದು ಕೈಲಿ ಕೊಟ್ಟು ಮತ್ತೊಂದು ಕೈಲಿ ಕಿತ್ತುಕೊಂಡಿರುವುದನ್ನು ಜನಸಾಮಾನ್ಯರು ಗಮನಿಸಿದ್ದಾರೆ. ಹಾಗಾಗಿ ನಮಗೆ ತಕ್ಕ ಬುದ್ಧಿ ಕಲಿಸಲಿದ್ದಾರೆಂದು ಹೆದರಿದ್ದಾರೆ. ಈಗಾಗಲೇ ಈ ಕೆಟ್ಟ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡಿ ಆರ್ಥಿಕ ಪರಿಸ್ಥಿತಿಯನ್ನು ಹಾಳುಗೆಡವಿದೆ. ಪ್ರತಿಯೊಬ್ಬ ಪ್ರಜೆಯ ಮೇಲೆ ಸುಮಾರು 15 ಸಾವಿರ ರು. ಸಾಲವಿದೆ. ಇನ್ನೂ ಮೂರು ವರ್ಷ ಈ ಭಂಡ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದರೆ ರಾಜ್ಯದಲ್ಲಿ ಆರ್ಥಿಕ ಸುನಾಮಿ ಏಳುವುದು ಗ್ಯಾರಂಟಿ. ಖಾಲಿ ಸಿಲಿಂಡರ್ ಎತ್ತಿಕೊಂಡು ಹೋರಾಡುವ ಬೂಟಾಟಿಕೆ ಬೇಡ. ಗ್ಯಾರಂಟಿ ಹೆಸರಿನಲ್ಲಿ ದುಡ್ಡು ಲೂಟಿ ಮಾಡಿ ಬಡಿದು ಬಾಯಿಗೆ ಹಾಕಿಕೊಂಡರೆ, ಮುಂಬರುವ ಸರ್ಕಾರಗಳು ಹೇಗೆ ಅಧಿಕಾರ ಮಾಡಬೇಕೆಂಬುದನ್ನು ಒಮ್ಮೆ ಯೋಚಿಸಿ ಎಂದು ಸಿದ್ದರಾಮಯ್ಯನವರಿಗೆ ಕಿವಿಮಾತು ಹೇಳಿದರು.

ಕಾಂಗ್ರೆಸ್ ನ ಅಧಿನಾಯಕ ಜೋಡೋ ಯಾತ್ರೆ ಮಾಡಿ ದೇಶ ಒಂದು ಮಾಡ್ತೇನೆ ಅಂತ ಹೇಳಿದರು. ಆದರೆ ಸಿದ್ದರಾಮಯ್ಯ ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆದು ಖುಷಿಪಡುತ್ತಿದ್ದಾರೆ. ಸಿದ್ದರಾಮಯ್ಯನವರೇ ಜಾತಿ ಹೆಸರಿನಲ್ಲಿ ಸಮಾಜದಲ್ಲಿ ವಿಷಬೀಜ ಬಿತ್ತಬೇಡಿ. ಸಹೋದರರ ರೀತಿ ಇರುವವರನ್ನು ಹೊಡೆದಾಡಲು ಹಚ್ಚಬೇಡಿ. ಜಾತಿ ಗಣತಿ ನಡೆಸುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ಆದರೆ ನೀವು ಜಾತಿ ಸಮೀಕ್ಷೆ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದ್ದೀರಿ ಎಂದು ದೂರಿದರು. ಮನೆಮನೆಗೆ ತೆರಳದೇ ಕೂತಲ್ಲೇ ಸಮೀಕ್ಷೆ ಮಾಡಲಾಗಿದೆ. ನಾವೆಲ್ಲರೂ ಕಾವೇರಿ ತಾಯಿಯ ಮಕ್ಕಳು, ಕನ್ನಡ ತಾಯಿಯ ಮಕ್ಕಳು. ನಾವೆಲ್ಲರೂ ಒಂದೇ. ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಕೊಡಿಸಲು ಸಮೀಕ್ಷೆ ಮಾಡಿ. ಆದರೆ ಅದು ನಿಮ್ಮ ಅಧಿಕಾರ ಉಳಿಸಿಕೊಳ್ಳಲು, ನಿಮ್ಮ ಮುಖ್ಯಮಂತ್ರಿ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ಮಾಡುತ್ತಿರುವ ತಂತ್ರ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. ರಾಜ್ಯದಲ್ಲಿ ಟ್ರ್ಯಾಪ್ ಗಳದ್ದೇ ಸದ್ದಾಗಿದೆ. ರಾಜ್ಯದಲ್ಲಿ ಹನಿ ಟ್ರ್ಯಾಪ್, ಕೇಂದ್ರದವರಿಗೆ ಮನಿ ಟ್ರ್ಯಾಪ್, ಕಂಟ್ರ್ಯಾಕ್ಟರ್ ಗಳಿಗೆ ಕಮೀಷನ್ ಟ್ರ್ಯಾಪ್, ಒಟ್ಟಿನಲ್ಲಿ ಈ ಸರ್ಕಾರ ರಾಜ್ಯದ ಜನರನ್ನು ಒಂದಲ್ಲಾ ಒಂದು ಟ್ರ್ಯಾಪ್ ನಲ್ಲಿ ಸಿಕ್ಕಿ ಹಾಕಿಸಿದೆ. ಇಂತಹ ಕೆಟ್ಟ ಸರ್ಕಾರವನ್ನು ಕಿತ್ತಗೆಯುವ ಕಾಲ ಸನ್ನಿಹಿತವಾಗಿದೆ. ಜಾಗೃತರಾಗಬೇಕು. ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟ ಮಾಡುತ್ತೇವೆ ನಿಖಿಲ್ ಕುಮಾರಸ್ವಾಮಿ ಹೇಳಿದರು. ಇದು ನಿರಂತರವಾಗಿ ಇರಬೇಕು ಎಂದು ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು. ಬಿಜೆಪಿ ಸರ್ಕಾರವಿದ್ದಾಗ ಬಿಜೆಪಿಗೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ನವರು ವಿನಾಕಾರಣ 40 % ಸರ್ಕಾರ ಅಂತ ದೂಷಿಸಿದ್ದರು. ಆದರೆ ಈ ಸರ್ಕಾರ 60 % ಸರ್ಕಾರವಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ದೂರಿದರು. ಅತ್ಯಂತ ಭ್ರಷ್ಟ ಸರ್ಕಾರ. ಎಲ್ಲಾ ಇಲಾಖೆಗಳಲ್ಲಿ ಕಮೀಷನ್ ನೀಡಬೇಕಿದೆ. ರೈತರಿಗೆ ಸಿದ್ದರಾಮಯ್ಯನವರ ಕೊಡುಗೆ ಏನೇನೂ ಇಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರಿಗೆ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ರೈತರ ಹಿತ ಕಾಪಾಡುವ ವ್ಯಕ್ತಿ ಎಂದರೆ ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಮಾತ್ರ ಎಂದರು. ಬಿಜೆಪಿಯ ಮಾಜಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ ಈ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಜಾಗೃತಿಗೊಳಿಸಲು ಲಕ್ಷಾಂತರ ಜನರನ್ನು ಸೇರಿಸಿ ವಿಧಾನಸೌಧ ಚಲೋ ನಡೆಸಬೇಕು. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಈ ಸರ್ಕಾರಕ್ಕೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಹೇಳಿದರು. ಮಾಜಿ ಶಾಸಕ ಎಂ.ಟಿ.ಲಕ್ಷ್ಮೀನಾರಾಯಣ್ ಮಾತನಾಡಿ ಗ್ಯಾರಂಟಿ ಹೆಸರಿನಲ್ಲಿ ರಾಜ್ಯವನ್ನು ಕಾಂಗ್ರೆಸ್ ದಿವಾಳಿ ಮಾಡಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ದಿನೇ ದಿನೇ ಕೆಳಮಟ್ಟಕ್ಕೆ ಕುಸಿಯುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಜಿಲ್ಲಾ ಉಪಾಧ್ಯಕ್ಷ ಎಂ.ಡಿ.ರಮೇಶ್ ಗೌಡ, ತಾಲೂಕು ಅಧ್ಯಕ್ಷ ದೊಡ್ಡೇಗೌಡ, ಮಹಿಳಾ ಅಧ್ಯಕ್ಷೆ ಲೀಲಾವತಿ ಗಿಡ್ಡಯ್ಯ, ಮುಖಂಡರಾದ ಸಿಎಸ್ ಪುರ ನರಸಿಂಹಮೂರ್ತಿ, ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್, ಹೆಡಿಗೇಹಳ್ಳಿ ವಿಶ್ವನಾಥ್, ಬಿಜೆಪಿ ಮಂಡಲ ಅಧ್ಯಕ್ಷ ಮೃತ್ಯುಂಜಯ, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಸೋಮೇನಹಳ್ಳಿ ಜಗದೀಶ್, ಪಟ್ಟಣ ಪಂಚಾಯಿತಿ ಸದಸ್ಯೆ ಆಶಾ ರಾಜಶೇಖರ್, ಹೇಮಚಂದ್ರು, ಚೂಡಾಮಣಿ ಸೇರಿದಂತೆ ಹಲವರು ಇದ್ದರು. 21 ಟಿವಿಕೆ 1 – ತುರುವೇಕೆರೆಯಲ್ಲಿ ಎನ್ ಡಿ ಎ ಮೈತ್ರಿಕೂಟದಿಂದ ಬೆಲೆ ಏರಿಕೆ ವಿರುದ್ಧ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ರಾಜ್ಯ ಯುವ ಜೆಡಿಎಸ್ ನ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.

ಕೋಟ್‌...

ಸಂಪದ್ಭರಿತ ರಾಜ್ಯವನ್ನು ಸುಮಾರು ಎರಡುವರೆ ಸಾವಿರ ಕೋಟಿಯಷ್ಟು ಸಾಲಗಾರರ ರಾಜ್ಯವನ್ನಾಗಿಸಲು ಈ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ನಿಮ್ಮ ಮಕ್ಕಳ ಮೇಲೂ ಸಾಲ ಇದೆ. ನಮ್ಮ ಮಕ್ಕಳ ಮೇಲೂ ಸಾಲ ಇದೆ. ಕಾಕಾಪಾಟೀಲ್ ಮಗನ ಮೇಲೂ ಸಾಲ ಇರುತ್ತೆ, ಮಹದೇವಪ್ಪನ ಮಕ್ಕಳ ಮೇಲೂ ಸಾಲ ಇರುತ್ತೆ - ನಿಖಿಲ್ ಕುಮಾರಸ್ವಾಮಿ, ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ