ನಿಮ್ಮ ನಿಮ್ಮ ಬೇಡಿಕೆಗಳಿದ್ದರೆ ಹೈಕಮಾಂಡ್ ಗೆ ತಿಳಿಸಿ: ಪಿ.ಎಂ.ನರೇಂದ್ರಸ್ವಾಮಿ

| Published : Jun 30 2024, 12:45 AM IST

ನಿಮ್ಮ ನಿಮ್ಮ ಬೇಡಿಕೆಗಳಿದ್ದರೆ ಹೈಕಮಾಂಡ್ ಗೆ ತಿಳಿಸಿ: ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದಾಗ ಪಕ್ಷ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಆಂತರಿಕ ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ಆಯ್ಕೆ ಮಾಡಿದೆ. ಈ ಮಾತ್ರಕ್ಕೆ ಇನ್ನಿತರರಿಗೆ ಅವಕಾಶವಿಲ್ಲ ಎನ್ನುವಂತಿಲ್ಲ, ಸಮಯ, ಸಂದರ್ಭ ನಾಯಕತ್ವ ಮತ್ತು ಪಕ್ಷದ ಭವಿಷ್ಯದ ದೃಷ್ಟಿಯಿಂದ ಏನೋ ಬೇಕಾದರೂ ತೀರ್ಮಾನ ತೆಗೆದುಕೊಳ್ಳಬಹುದು ಎಂದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕಾಂಗ್ರೆಸ್ ಸಚಿವರು ಹಾಗೂ ಶಾಸಕರು ನಮ್ಮ ಬೇಡಿಕೆಗಳಿದ್ದರೆ ನೇರವಾಗಿ ಹೈಕಮಾಂಡ್ ಬಳಿ ತಿಳಿಸಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಪಕ್ಷದ ಘನತೆ ಮತ್ತು ಒಗ್ಗಟ್ಟಿಗೆ ಧಕ್ಕೆಯಾಗುವಂತೆ ಹೇಳಿಕೆ ನೀಡಬಾರದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಇತ್ತೀಚಿಗೆ ಕಾಂಗ್ರೆಸ್ ನ ಕೆಲ ಸಚಿವರು, ಶಾಸಕರ ಹೆಚ್ಚುವರಿ ಡಿಸಿಎಂ ಹಾಗೂ ಸಿಎಂ ಬದಲಾವಣೆ ಬಗ್ಗೆ ಕೆಲ ಸ್ವಾಮೀಜಿಗಳ ಹೇಳಿಕೆ ಸಂಬಂಧ ಸುದ್ಧಿಗಾರರೊಂದಿಗೆ ಪ್ರತಿಕ್ರಿಯಿಸಿದರು.

ಪಕ್ಷದಲ್ಲಿ ಕೆಲವರು ತಾವೇ ಸರ್ವಶ್ರೇಷ್ಠರು ಎಂದು ತಿಳಿದುಕೊಂಡಿದ್ದಾರೆ. ಆದರೆ, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಮೆ ಮಾಡಿ ಸರ್ಕಾರ ಬಂದಾಗ ಅಧಿಕಾರದಿಂದ ವಂಚಿತರಾಗಿದ್ದವರು ಸಾಕಷ್ಟು ಮಂದಿ ಇದ್ದಾರೆ. ನಿಮ್ಮ ಸಿರಿವಂತಿಕೆಗೋ, ನಿಮ್ಮ ಜಾತಿಯ ಒಲೈಕೆಗಾಗಿ ಪಕ್ಷವನ್ನು ಬಲಿ ಕೊಡಬೇಡಿ. ಕಾಂಗ್ರೆಸ್ ಜಾತಿ ಆಧಾರವಲ್ಲ ಎನ್ನುವ ಮೂಲಕ ಪಕ್ಷದಲ್ಲಿನ ಕೆಲ ಸಚಿವರು ಹಾಗೂ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದಡಿಯಲ್ಲಿ ಸಂವಿಧಾನದ ಆಧಾರದಲ್ಲಿ ನಮ್ಮ ಪಕ್ಷ ನಾಯಕ ರಾಹುಲ್ ಗಾಂಧಿ ನಾಯಕತ್ವದಲ್ಲಿ ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ನ್ನು ಸಂಘಟಿಸಿ ರಾಷ್ಟ್ರದಲ್ಲಿ ಪ್ರಬಲ ವಿರೋಧ ಪಕ್ಷವನ್ನಾಗಿ ನಿಲ್ಲಿಸಿದ್ದಾರೆ. ಅವರಿಗೆ ಬಲ ತುಂಬಲು ನಾವೆಲ್ಲರೂ ಮುಂದಾಗಬೇಕು ಎಂದು ಹೇಳಿದರು.

ಹಿರಿಯರಾದ ನಿಜಲಿಂಗಪ್ಪ, ಬೊಮ್ಮಾಯಿ, ಯಡಿಯೂರಪ್ಪ ಅವರು ಒಂದು ವರ್ಗಕ್ಕೆ ಸೇರಿದವರಾಗಿದ್ದರೆ. ಕಡಿದಾಳ್ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಸದಾನಂದಗೌಡರು ಇನ್ನೊಂದು ವರ್ಗದವರು, ಮಧ್ಯೆ ಇನ್ನು ಕೆಲವರು ಬಂದು ಹೋಗಿದ್ದಾರೆ ಎಂದರು.

ಮಠಾಧೀಶರು ಶೋಷಿತರ ಧ್ವನಿಯಾಗಬೇಕು:

ಬಹುಸಂಖ್ಯಾತರಾದ ಜನ ಸದಾ ಒಂದು ಪಕ್ಷಕ್ಕೆ ಬೆಂಬಲ ಕೊಟ್ಟಿದ್ದರೂ ಸಹ ಇತ್ತೀಚಿಗೆ ಕೆಲ ಮಠಾಧೀಶರು ಶೋಷಿತರ ಧ್ವನಿಯಾಗಬೇಕೆ ಹೊರತು ನೀವು ಜಾತಿಯ ಧ್ವನಿಯಾಗಿರುವುದು ಸರಿಯಲ್ಲ. ನಾವು ನಿಮ್ಮ ಮಠಕ್ಕೆ ಶರಣೆಂದಿದ್ದೇವೆ. ನಿಮ್ಮನ್ನು ಅನುಸರಿಸುತ್ತಿದ್ದೇವೆ. ನಮ್ಮನ್ನು ನೀವು ಮನುಷ್ಯರಂತೆ ಕಾಣಬೇಕು. ಸಮಾಜ, ಜಾತಿ ಎನ್ನುವ ಹೆಸರಿನಲ್ಲಿ ಮಠ ಮತ್ತು ಪೀಠಾಧಿಪತಿಗಳು ಮನುಷ್ಯತ್ವವನ್ನು ಕೊಲ್ಲುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.

ನಾನೊಬ್ಬ ಶೋಷಿತ ವರ್ಗದ ಅತ್ಯಂತ ಅಸ್ಪೃಶ್ಯ ಸಮಾಜದವನಾಗಿ ನನ್ನ ನೋವು ಹಂಚಿಕೊಳ್ಳುತ್ತಿರುವೆ, ದೇಶಕ್ಕೆ ಜಾರಿ ಆಧಾರವಾಗಿ ಅಧಿಕಾರ ಮತ್ತು ನಾಯಕತ್ವವನ್ನು ಘೋಷಣೆ ಮಾಡುವುದು ಸರಿಯಲ್ಲ, ಜತೆಗೆ ಈ ವಿಚಾರವನ್ನು ಪಕ್ಷ ಮತ್ತು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾವು ಮಠಕ್ಕೆ ಆರ್ಶೀವಾದ ಪಡೆಯುವುದಕ್ಕೆ ಹೋಗಿದ್ದೇವೆಯೇ ಹೊರತು ಯಾವ ಮಠಾಧಿಪತಿಗಳನ್ನು ಪ್ರಚಾರಕ್ಕೆ ಕರೆದಿಲ್ಲ, ಮುಂದೆ ಕರೆಯುವುದಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದಾಗ ಪಕ್ಷ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಆಂತರಿಕ ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ಆಯ್ಕೆ ಮಾಡಿದೆ. ಈ ಮಾತ್ರಕ್ಕೆ ಇನ್ನಿತರರಿಗೆ ಅವಕಾಶವಿಲ್ಲ ಎನ್ನುವಂತಿಲ್ಲ, ಸಮಯ, ಸಂದರ್ಭ ನಾಯಕತ್ವ ಮತ್ತು ಪಕ್ಷದ ಭವಿಷ್ಯದ ದೃಷ್ಟಿಯಿಂದ ಏನೋ ಬೇಕಾದರೂ ತೀರ್ಮಾನ ತೆಗೆದುಕೊಳ್ಳಬಹುದು ಎಂದರು.

ಯಾರೋ ಒಲೈಕೆಗೊಸ್ಕರ ಹಾಗೂ ಪಕ್ಷಕ್ಕೆ ಧಕ್ಕೆ ಉಂಟಾಗುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಕೆಲ ಶಾಸಕರು ಮೊದಲ ಬಾರಿ ಆಯ್ಕೆಯಾಗಿ ಈ ರೀತಿ ಮಾತನಾಡುವ ಬದಲು ಪಕ್ಷದ ಹೈಕಮಾಂಡ್ ಬಳಿ ಹೋಗಿ ತಮ್ಮ ಅಭಿಪ್ರಾಯ ತಿಳಿಸಲಿ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಲೋಕಸಭೆ ಚುನಾವಣೆಯಲ್ಲಿ ಹಿನ್ನೆಡೆಯಾಗಲು ಕೆಲವರು ಹೇಳಿಕೆ ಕಾರಣವಾಗಿದೆ. ಸಾರ್ವಜನಿಕವಾಗಿ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ ವ್ಯಕ್ತಿ ವಿಶೇಷತೆ, ಘಟನೆಯನ್ನು ಟೀಕಿಸುವುದು ಸರಿಯಲ್ಲ. ನಮ್ಮ ಹಿನ್ನೆಡೆಗೆ ನಾನಾ ಕಾರಣಗಳಿದ್ದು, ವಿಮರ್ಶೆ ಮಾಡಿಕೊಳ್ಳಬೇಕು. ಕೆಲವು ಸಮೀಕರಣಗಳು ಬೇರೆ ಬೇರೆ ಕಾರಣಗಳಿಗೆ ಒಗ್ಗೂಡಿವೆ ಎಂದು ಹೇಳಿದರು.