ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿ ದ್ವಿಚಕ್ರ ವಾಹನ ಓಡಿಸಬಾರದು. ಇಲ್ಲದಿದ್ದರೆ ದಂಡ ತೆರೆಬೇಕಾಗುತ್ತದೆ. ಪೋಷಕರಿಗೂ ಶಿಕ್ಷೆಯಾಗುತ್ತದೆ. ಹೆಣ್ಣು ಅಥವಾ ಗಂಡು ಮಕ್ಕಳಿಗೆ ಲೈಂಗಿಕ ಕಿರುಕುಳ ಅಥವಾ ಇನ್ಯಾವುದೇ ದೌರ್ಜನ್ಯ ನಡೆದರೂ ಪೋಕ್ಸೋ (2012)ರ ಕಾಯ್ದೆಯಡಿ ಮಾಡಿದವರಿಗೆ ಶಿಕ್ಷೆ ಆಗುತ್ತದೆ.

ಕನ್ನಡಪ್ರಭ ವಾರ್ತೆ ಹಲಗೂರು

ಸಮಾಜದಲ್ಲಿ ಯಾರು ಕೂಡ ತಾವು ತಪ್ಪು ಮಾಡದಿದ್ದರೆ ಯಾರಿಗೂ ಭಯಪಡುವ, ಹೆದರುವ ಅವಶ್ಯಕತೆ ಇಲ್ಲ ಎಂದು ಸಬ್ ಇನ್ಸ್ ಪೆಕ್ಟರ್ ಲೋಕೇಶ್ ತಿಳಿಸಿದರು.

ಚನ್ನಪಟ್ಟಣ ರಸ್ತೆಯ ಜೆ.ಜೆ.ಪಬ್ಲಿಕ್ ಶಾಲಾವರಣದಲ್ಲಿ ನಡೆದ ಅಪರಾಧ ತಡೆ ಮಾಸಾಚಾರಣೆಯಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಮಾತನಾಡಿ, ಶಾಲೆ ಬಿಟ್ಟ ನಂತರ ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುವಾಗ ನಿಮ್ಮನ್ನು ಪುಂಡುಪೋಕರಿಗಳು ಚುಡಾಯಿಸಿದರೆ ನೀವು ಧೈರ್ಯದಿಂದ ಎದುರಿಸಬೇಕು. ಪೊಲೀಸರಿಗೆ ದೂರು ನೀಡುತ್ತೇನೆ ಎಂದಾಗ ಅವರು ಮತ್ತೆ ನಿಮ್ಮ ತಂಟೆಗೆ ಬರುವುದಿಲ್ಲ. ಆದ್ದರಿಂದ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿ ದ್ವಿಚಕ್ರ ವಾಹನ ಓಡಿಸಬಾರದು. ಇಲ್ಲದಿದ್ದರೆ ದಂಡ ತೆರೆಬೇಕಾಗುತ್ತದೆ. ಪೋಷಕರಿಗೂ ಶಿಕ್ಷೆಯಾಗುತ್ತದೆ. ಹೆಣ್ಣು ಅಥವಾ ಗಂಡು ಮಕ್ಕಳಿಗೆ ಲೈಂಗಿಕ ಕಿರುಕುಳ ಅಥವಾ ಇನ್ಯಾವುದೇ ದೌರ್ಜನ್ಯ ನಡೆದರೂ ಪೋಕ್ಸೋ (2012)ರ ಕಾಯ್ದೆಯಡಿ ಮಾಡಿದವರಿಗೆ ಶಿಕ್ಷೆ ಆಗುತ್ತದೆ. ದೂರು ನೀಡಲು ಹಿಂಜರಿಯಬಾರದು ಎಂದರು.

ಮೊಬೈಲ್ ಗಳಲ್ಲಿ ಬ್ಯಾಂಕ್‌ಗಳ ಹೆಸರಿನಲ್ಲಿ ಹಣ ದೋಚುವ ಸೈಬರ್ ಕಳ್ಳತನದ ಹಾವಳಿ ಇತ್ತೀಚೆಗೆ ಹೆಚ್ಚಾಗಿದೆ. ಅವುಗಳ ಬಗ್ಗೆ ಜಾಗೃತರಾಗಬೇಕು. ಮೋಸ ಹೋಗಿದ್ದರೆ ತಕ್ಷಣ ರಾಷ್ಟ್ರೀಯ ಸೈಬರ್ ಕ್ರೈಂ ಬ್ರಾಂಚ್ ಟೋಲ್ ನಂಬರ್ (1930) ಗೆ ಕರೆ ಮಾಡಿ ದೂರು ದಾಖಲಿಸಬೇಕು. ಹಣ ಕಳೆದು ಹೋದ ಅರ್ಧ ಗಂಟೆ ಒಳಗೆ ದೂರು ದಾಖಲಿಸಿದರೆ ವರ್ಗಾವಣೆ ಗೊಂಡ ಅಕೌಂಟ್ ಅನ್ನು ಸೀಜ್ ಮಾಡಿಸಿ ಹಣ ವಾಪಸ್ ಪಡೆಯುವ ಸಾಧ್ಯತೆ ಹೆಚ್ಚಿದೆ ಎಂದರು.

ಸಂಸ್ಥೆ ಪ್ರಾಂಶುಪಾಲೆ ಲಲಿತಾಂಬ ಸೋಮಶೇಖರ್ ಮಾತನಾಡಿ, ಪ್ರತಿಯೊಬ್ಬ ಮಕ್ಕಳು ರಸ್ತೆ ಸುರಕ್ಷಾ ನಿಯಮ ಸರಿಯಾಗಿ ಪಾಲಿಸಬೇಕು. ಸುರಕ್ಷತೆ, ನಿಯಮಗಳನ್ನು ಉಲ್ಲಂಘಿಸಿ ಪೊಲೀಸ್ ಠಾಣೆ ಮೆಟ್ಟಿಲನ್ನು ಹತ್ತಬೇಡಿ ಎಂದು ತಿಳಿಸಿದರು.