ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಮೊಬೈಲ್ ಬಿಟ್ಟು ಸಮಚಿತ್ತರಾದರೆ ಖಚಿತವಾಗಿ ಜೇಬಿನಲ್ಲಿ ೨೫ ಅಂಕ ಭದ್ರವಾಗಲಿದ್ದು, ಉಳಿಕೆ ತೇರ್ಗಡೆ ಅಂಕಕ್ಕೆ ಹಳೆಯ ಪ್ರಶ್ನೆ ಪತ್ರಿಕೆ ತಿರುವು ಹಾಕಿ ಎಂದು ಅಂತಾರಾಷ್ಟ್ರೀಯ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸ್ಪಂದನಾ ಫೌಂಡೇಷನ್, ಎನ್‌ಎಸ್‌ಎಸ್‌ ಘಟಕ ನಾಡಗೀತೆ, ಸುಗಮ ಸಂಗೀತ ಶತಮಾನೋತ್ಸವ ನೆನಪಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪರೀಕ್ಷಾ ಭಯ ಬಿಡಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಲ್ಲಿ ಪರೀಕ್ಷಾ ಜ್ವರದ ಭಯ ಕಾಡುತ್ತಿದೆ. ಆತಂಕದಿಂದ ಎಲ್ಲವನ್ನು ಮರೆತುಕೊಳ್ಳುವಂತಾಗಿದೆ. ಭಯವೇ ನಮ್ಮ ಶತ್ರು. ಪರೀಕ್ಷೆ ಎಂಬುದು ತಾವು ಓದಿರುವುದನ್ನು ಬರೆಯುವುದು. ಇದಕ್ಕೆ ಏಕೆ ಭಯ. ಪರೀಕ್ಷೆಯನ್ನು ಮಿತ್ರನಂತೆ ಸ್ವಾಗತಿಸಿ ಎಂದರು.

ಭಯಕ್ಕೆ ಮದ್ದಾಗಿ ಸುಗಮ- ಸಂಗೀತ ಗೀತೆಗಳನ್ನು ಗುನುಗಿ. ಇದರಿಂದ ಹೊಸ ಚೈತನ್ಯ ಸಿಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಸರ್ಕಾರಿ ಶಾಲಾ- ಕಾಲೇಜುಗಳು ಉಳಿದಿವೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆ ವ್ಯಾಮೋಹದಿಂದ ಸರ್ಕಾರಿ ಶಾಲೆ- ಕಾಲೇಜು ಮುಚ್ಚುವ ಹಂತ ತಲುಪಿವೆ. ಈಗಾಗಲೇ ಮಂದಗೆರೆ, ಆನೆಗೊಳ ಸರ್ಕಾರಿ ಕಾಲೇಜು ಮುಚ್ಚಿದೆ. ಹೋಬಳಿ ಕೇಂದ್ರದಲ್ಲಿ ಇರುವುದು ಕಿಕ್ಕೇರಿ ಕಾಲೇಜು. ಇದನ್ನಾದರೂ ಉಳಿಸಲು ವಿದ್ಯಾರ್ಥಿಗಳು ಮುಂದಾಗಬೇಕು. ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ವಾಚು ಅಕಾಡೆಮಿಯಿಂದ ಬಹುಮಾನ ನೀಡಲಾಗುವುದು ಎಂದು ಆತ್ಮಸ್ಥೈರ್ಯ ತುಂಬಿದರು.


ಇನ್ನೂ ಕಾಲ ಮಿಂಚಿಲ್ಲ. ಟಿವಿ, ಮೊಬೈಲ್ ಬಂದ್ ಮಾಡಿ. ವೇಳಾ ಪಟ್ಟಿ ಹಾಕಿಕೊಂಡು ಕಷ್ಟವಾದ ವಿಷಯಗಳಿಗೆ ಆದ್ಯತೆ ನೀಡಿ ಓದಿ. ಹಳೆಯ ಪ್ರಶ್ನೆಪತ್ರಿಕೆಗೆ ಸಿದ್ಧವಾದರೆ ಕನಿಷ್ಠ ತೇರ್ಗಡೆಗೆ ಮೋಸವಿಲ್ಲ. ಮತ್ತಷ್ಟು ಪ್ರಯತ್ನ ಮಾಡಿದರೆ ಉನ್ನತ ದರ್ಜೆ ಖಚಿತ. ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಹಬ್ಬದಂತೆ ಸ್ವೀಕರಿಸಿ ಎಂದರು.

ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ನಾಡಗೀತೆ ಹಾಗೂ ಪರೀಕ್ಷಾ ಭಯ ನಿವಾರಣೆಗಾಗಿ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ, ಗೆಲುವೇ ಗೆಲುವೆ ನಮಗೆಂದಿಂದಿಗೂ ಗೆಲುವೇ, ಏದ್ದೇಳಿ ಮಕ್ಕಳೇ ಸನ್ನದ್ಧರಾಗಿ ಗೀತೆಗಳನ್ನು ಮಕ್ಕಳೊಂದಿಗೆ ಹಾಡಿ ಪರೀಕ್ಷೆ ಭಯದ ಒತ್ತಡ ನಿವಾರಣೆಗೆ ಸ್ಫೂರ್ತಿಯಾದರು.

ಪ್ರಾಂಶುಪಾಲ ಸಹದೇವು, ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ, ವಿನಾಯಕ, ರವೀಂದ್ರ, ನಾಗೇಶ್, ಪರಿಸರ ಪ್ರೇಮಿ ಊಗಿನಹಳ್ಳಿ ವೆಂಕಟೇಶ್, ಕಲಾವಿದ ಅಭಿಷೇಕ್ ರಾಮ್‌ಪ್ರಸಾದ್, ಚಂದ್ರಿಕಾ, ಅರ್ಪಿತಾ, ಫಾಜಿಲಾ ಖಾನಂ ಇದ್ದರು.