ಕನ್ನಡಪ್ರಭ ವಾರ್ತೆ ಹುಕ್ಕೇರಿ ತಾಲೂಕಿನ ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಬೆರೆಸುತ್ತಿರುವವರಿಗೆ ಇಲ್ಲಿನ ಸ್ವಾಭಿಮಾನಿ ಜನರು ಮುಟ್ಟಿ ನೋಡಿಕೊಳ್ಳುವ ಪೆಟ್ಟು ನೀಡಿದ್ದಾರೆ. ಇದರೊಂದಿಗೆ ಹುಕ್ಕೇರಿಯಲ್ಲಿ ಹೊರಗಿನವರ ಆಟ ನಡೆಯಲು ಬಿಡಲಾರೆ ಎಂದು ಮಾಜಿ ಸಂಸದ ರಮೇಶ ಕತ್ತಿ ಮತ್ತೊಮ್ಮೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕಿನ ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಬೆರೆಸುತ್ತಿರುವವರಿಗೆ ಇಲ್ಲಿನ ಸ್ವಾಭಿಮಾನಿ ಜನರು ಮುಟ್ಟಿ ನೋಡಿಕೊಳ್ಳುವ ಪೆಟ್ಟು ನೀಡಿದ್ದಾರೆ. ಇದರೊಂದಿಗೆ ಹುಕ್ಕೇರಿಯಲ್ಲಿ ಹೊರಗಿನವರ ಆಟ ನಡೆಯಲು ಬಿಡಲಾರೆ ಎಂದು ಮಾಜಿ ಸಂಸದ ರಮೇಶ ಕತ್ತಿ ಮತ್ತೊಮ್ಮೆ ಗುಡುಗಿದರು.

ಪಟ್ಟಣದ ವಿಶ್ವರಾಜ್ ಸಭಾಭವನದಲ್ಲಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ಗುರುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಇತ್ತೀಚೆಗೆ ತಾಲೂಕಿನಲ್ಲಿ ನಡೆದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಣ, ಹೆಂಡ, ಅಧಿಕಾರದ ಬಲಪ್ರಯೋಗ ನಡೆಸಿದವರಿಗೆ ಸ್ವಾಭಿಮಾನಿ ಮತದಾರರು ತಕ್ಕಶಾಸ್ತಿ ಮಾಡಿದ್ದಾರೆ. ಹಿರಿಯರ ದೂರದೃಷ್ಟಿಯಿಂದ ಎಲ್ಲ ಸಮುದಾಯದ ಹಿತಬಯಸಿ ಸ್ಥಾಪಿಸಿದ ಸಹಕಾರಿ ಸಂಘಗಳಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸಹಕಾರಿ ಸಂಸ್ಥೆಗಳನ್ನು ಉಳಿಸಿ ಬೆಳೆಸಲು ತಾಲೂಕಿನ ಜನತೆ ಸಂಘಟಿತ ಪ್ರಯತ್ನ ನಡೆಸಬೇಕಿದೆ ಎಂದರು.

ಚುನಾವಣೆಯಲ್ಲಿ ತಮ್ಮ ವಿರುದ್ಧ ಮತ ಚಲಾಯಿಸಿದ ಸಂಘಗಳಿಗೂ ಈ ಮೊದಲಿನಂತೆಯೇ ಸಾಲ ಮರುಪಾವತಿ ವ್ಯವಸ್ಥೆ ಮಾಡಲಾಗುವುದು. ತಾಲೂಕಿನ ಜನತೆ ಸಹಕಾರಿ ಸಂಘಗಳನ್ನು ತಾಯಿ ಅಂದುಕೊಂಡಿದ್ದಾರೆ. ಆದರೆ, ಹೊರಗಿನವರು ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಸಿ ಹಾಳು ಮಾಡುವ ಹುನ್ನಾರ ನಡೆಸಿದ್ದಾರೆ. ತಾಲೂಕಿನ ಸಂಸ್ಥೆಗಳ ಮೇಲೆ ಯಾರಾದರೂ ಕಣ್ಣು ಹಾಕಿದರೆ ಅಂಥವರ ಭವಿಷ್ಯದ ರಾಜಕೀಯ ಅಂತ್ಯಗೊಳಿಸುತ್ತೇವೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ಗೆ ಕಳೆದ 45 ವರ್ಷಗಳಿಂದ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ತಾಲೂಕಿನ 92 ಸಂಘಗಳ ಮೂಲಕ 54 ಸಾವಿರ ರೈತ ಸದಸ್ಯರು ಶೂನ್ಯ ಬಡ್ಡಿದರದಲ್ಲಿ ₹ 400 ಕೋಟಿ ಸಾಲ ಪಡೆದು ₹ 380 ಕೋಟಿ ಸಾಲ ಮನ್ನಾ ಸೌಲಭ್ಯ ಪಡೆದಿದ್ದಾರೆ ಎಂದು ತಿಳಿಸಿದರು.

ಮಾಜಿ ಸಚಿವ ಎ.ಬಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಾಸಕ ನಿಖಿಲ್ ಕತ್ತಿ, ವಿದ್ಯುತ್ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಟಿಎಪಿಸಿಎಂಎಸ್ ಅಧ್ಯಕ್ಷ ಮಹಾದೇವ ಜಿನರಾಳಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ, ಮುಖಂಡರಾದ ಪವನ ಕತ್ತಿ, ಅಜೀತ ಮುನ್ನೋಳಿ, ಗಜಾನನ ಕ್ವಳಿ, ಶಿವಾನಂದ ಮುಡಸಿ, ಕೆಂಪಣ್ಣ ವಾಸೇದಾರ, ಬಸವರಾಜ ಹುಂದ್ರಿ, ಶ್ರೀಶೈಲ ಮಠಪತಿ, ಮಹಾದೇವ ಕ್ಷೀರಸಾಗರ, ರಾಜು ಮುನ್ನೋಳಿ, ಲಾಜಮ ನಾಯಿಕವಾಡಿ ಇತರರು ಉಪಸ್ಥಿತರಿದ್ದರು. ವಿದ್ಯುತ್ ಸಂಘದ ನಿರ್ದೇಶಕ ಸತ್ಯಪ್ಪಾ ನಾಯಿಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಕುಲಕರ್ಣಿ ನಿರೂಪಿಸಿದರು. ಬಾಹುಬಲಿ ನಾಗನೂರಿ ಸ್ವಾಗತಗೀತೆ ಹಾಡಿದರು. ಸುರೇಶ ಜಿನರಾಳಿ ವಂದಿಸಿದರು.

------

ಕೋಟ್‌

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಏರ್ಪಟ್ಟ ಕತ್ತಿ ಹಾಗೂ ಎ.ಬಿ.ಪಾಟೀಲ ಕುಟುಂಬದ ನಡುವಿನ ಮೈತ್ರಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮುಂದುವರೆಯಲಿದೆ. ಇದರಲ್ಲಿ ಯಾವುದೇ ಬಿರುಕು ಕಾಣದು. ತಾಲೂಕಿನ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಸಂಕೇಶ್ವರ ಮತ್ತು ಹುಕ್ಕೇರಿ ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಕತ್ತಿ-ಪಾಟೀಲ ಕುಟುಂಬದ ನಡುವಿನ ಮೈತ್ರಿಕೂಟ ಒಂದಾಗಿ ಎದುರಿಸಿ, ಹೊರಗಿನ ವಿರೋಧಿಗಳನ್ನು ಸೆದೆಬಡಿಯಲಿದೆ. ಜೊತೆಗೆ 2028ರ ವಿಧಾನಸಭೆ ಚುನಾವಣೆಯಲ್ಲಿ ಯಮಕನಮರಡಿಯಿಂದ ಹೊರಗಿನವರನ್ನು ಓಡಿಸಲಾಗುವುದು.

- ರಮೇಶ ಕತ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕರು