ನಿರ್ದಿಷ್ಟ ಗುರಿ, ಕೆಲಸವನ್ನು ಪ್ರೀತಿಸಿದರೆ ಗುರಿ, ಯಶಸ್ಸು ಸಾಧ್ಯ: ನಿಶ್ಚಲಾನಂದನಾಥ ಶ್ರೀ

| Published : Nov 17 2025, 12:45 AM IST

ನಿರ್ದಿಷ್ಟ ಗುರಿ, ಕೆಲಸವನ್ನು ಪ್ರೀತಿಸಿದರೆ ಗುರಿ, ಯಶಸ್ಸು ಸಾಧ್ಯ: ನಿಶ್ಚಲಾನಂದನಾಥ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಞಾನ, ಮೂಢನಂಬಿಕೆ ಸುಟ್ಟು ಹಾಕಿ ಸುಜ್ಞಾನ, ಕ್ರಿಯಾಶೀಲವಾಗಿ, ಪುಸ್ತಕ ಜ್ಞಾನದ ಜತೆ ಸಂಸ್ಕೃತಿ ಅರಿತುಕೊಂಡಾಗ ಮಾತ್ರ ಬದುಕು ಸರಳವಾಗುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಸೋಮಾರಿತನವೇ ಮೊದಲ ಶತ್ರುವಾದರೆ, ಮೊಬೈಲ್, ಟಿವಿ ಎರಡನೇ ಶತ್ರುಗಳು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ, ಸಮಯದ ನಿರ್ವಹಣೆ ಮತ್ತು ಸತತ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ನಾವು ಮಾಡುವ ಕೆಲಸವನ್ನು ಪ್ರೀತಿಸಿದರೆ ಸುಲಭವಾಗಿ ಗುರಿ ತಲುಪಬಹುದು ಎಂದು ಕೆಂಗೇರಿ ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಬಿರುವಳ್ಳಿಯಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶ್ರಮದಾನ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು. ದೇಶದಲ್ಲಿ ಶೇ.80ರಷ್ಟು ವಿದ್ಯಾವಂತರಿದ್ದರೂ ಅವರಿಗೆ ಉತ್ತಮ ಸಂಸ್ಕಾರದ ಕೊರತೆ ಇದೆ. ಸಂಸ್ಕಾರವಿರದ ಶಿಕ್ಷಣ ನಿಜವಾದ ಶಿಕ್ಷಣ ಆಗಲಾರದು. ಕಷ್ಟಪಡದೆ ಏನನ್ನು ಸುಲಭವಾಗಿ ಪಡೆಯಲಾಗದು. ಬದ್ಧತೆಯಿಂದ ಓದಿದಾಗ ಮಾತ್ರ ಭವಿಷ್ಯ ಸುಂದರವಾಗಲಿದೆ ಎಂದರು.

ಅಜ್ಞಾನ, ಮೂಢನಂಬಿಕೆ ಸುಟ್ಟು ಹಾಕಿ ಸುಜ್ಞಾನ, ಕ್ರಿಯಾಶೀಲವಾಗಿ, ಪುಸ್ತಕ ಜ್ಞಾನದ ಜತೆ ಸಂಸ್ಕೃತಿ ಅರಿತುಕೊಂಡಾಗ ಮಾತ್ರ ಬದುಕು ಸರಳವಾಗುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಸೋಮಾರಿತನವೇ ಮೊದಲ ಶತ್ರುವಾದರೆ, ಮೊಬೈಲ್, ಟಿವಿ ಎರಡನೇ ಶತ್ರುಗಳು ಎಂದರು.

ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು. ವ್ಯಕ್ತಿತ್ವಕ್ಕೆ ವ್ಯಕ್ತಿಯನ್ನು ಗೆಲ್ಲುವ ಶಕ್ತಿ ಇರುತ್ತದೆ. ಇದು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಗಳಿಂದ ಮಾತ್ರ ಸಾಧ್ಯ. ಶಿಕ್ಷಣಕ್ಕೆ ಪೂರಕವಾದ ಇಂತಹ ಯೋಜನೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದರು.

ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಮೋಹನ್ ಶಿಬಿರಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಗ್ರಾಪಂ ಅಧ್ಯಕ್ಷೆ ರಂಗಮ್ಮ ರಂಗೇಗೌಡ, ನಿವೃತ್ತ ಶಿಕ್ಷಕ ಶಿವರಾಮೇಗೌಡ, ಗ್ರಾಪಂ ಸದಸ್ಯ ಬಿ.ಎನ್.ಕುಮಾರ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ, ಎಸ್.ಡಿ.ಎಂ.ಸಿ ಅಧ್ಯಕ್ಷ ಬಿ.ಎಸ್ ಕುಮಾರ್, ಕೆಇಬಿ ಕುಮಾರ್, ಮಂಜುನಾಥ್, ನಟೇಶ್, ಪಿಡಿಒ ಶಿವಕುಮಾರ್, ನಿವೃತ್ತ ಉಪನ್ಯಾಸಕರಾದ ಲೇಪಾಕ್ಷಿಗೌಡ, ಶಾಫಿ, ಡೈರಿ ಶಿವಶಂಕರ್, ನಾಗಮ್ಮ, ಜವರೇಗೌಡ ಸೇರಿದಂತೆ ಕಾಲೇಜಿನ ಶಿಬಿರಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.