ವಲಸೆ ಯಾಕ್ರಿ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ!

| Published : Apr 07 2024, 01:50 AM IST

ವಲಸೆ ಯಾಕ್ರಿ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ!
Share this Article
  • FB
  • TW
  • Linkdin
  • Email

ಸಾರಾಂಶ

ಬರಗಾಲದ ಸಮಯದಲ್ಲಿ ಕಲಘಟಗಿ, ಅಳ್ನಾವರ ಸೇರಿದಂತೆ ಕೆಲವು ತಾಲೂಕುಗಳ ಬಡ ಜನರು ಗೋವಾಕ್ಕೆ ವಲಸೆ ಹೋಗಲಿದ್ದಾರೆ ಎಂಬ ಮಾಹಿತಿ ಅರಿತ ಜಿಲ್ಲಾಡಳಿತವು ಅವರ ಕೈಗೆ ಕೆಲಸ ನೀಡುವ ಮೂಲಕ ತಮ್ಮೂರಲ್ಲೇ ಇರುವಂತೆ ನೋಡಿಕೊಳ್ಳಲು ಈ ಅಭಿಯಾನ ಶುರು ಮಾಡಿದೆ.

ಬಸವರಾಜ ಹಿರೇಮಠ

ಧಾರವಾಡ:

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬರಗಾಲ ಘೋಷಣೆ ಹಿನ್ನೆಲೆಯಲ್ಲಿ ಈಗಾಗಲೇ ಬರಗಾಲ ನಿರ್ವಹಣೆಯ ಕಾರ್ಯ ಚಟುವಟಿಕೆ ಚುರುಕುಗೊಂಡಿವೆ. ಕುಡಿಯುವ ನೀರು, ದನಕರುಗಳಿಗೆ ಮೇವು ಸೇರಿದಂತೆ ಜನತೆ ಬರಗಾಲಕ್ಕೆ ತುತ್ತಾಗದಂತೆ ಎಚ್ಚರಿಕೆಯ ಕ್ರಮಗಳು ಚಾಲ್ತಿಯಲ್ಲಿದ್ದು, ಇದಕ್ಕೆ ಪೂರಕವಾಗಿ ಕೆಲಸವಿಲ್ಲದೇ ಜನರು ಗುಳೆ ಹೋಗುವುದನ್ನು ತಡೆಯಲು ಜಿಲ್ಲಾಡಳಿತ "ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ " ಅಭಿಯಾನ ಶುರುಮಾಡಿದೆ.

ಬರಗಾಲದ ಸಮಯದಲ್ಲಿ ಕಲಘಟಗಿ, ಅಳ್ನಾವರ ಸೇರಿದಂತೆ ಕೆಲವು ತಾಲೂಕುಗಳ ಬಡ ಜನರು ಗೋವಾಕ್ಕೆ ವಲಸೆ ಹೋಗಲಿದ್ದಾರೆ ಎಂಬ ಮಾಹಿತಿ ಅರಿತ ಜಿಲ್ಲಾಡಳಿತವು ಅವರ ಕೈಗೆ ಕೆಲಸ ನೀಡುವ ಮೂಲಕ ತಮ್ಮೂರಲ್ಲೇ ಇರುವಂತೆ ನೋಡಿಕೊಳ್ಳಲು ಈ ಅಭಿಯಾನ ಶುರು ಮಾಡಿದೆ. ಕೂಲಿ ಆಧಾರಿತ ಕಾಮಗಾರಿಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಂಡು ಸ್ಥಳೀಯವಾಗಿ ಹೆಚ್ಚಿನ ಜನರಿಗೆ ಉದ್ಯೋಗ ನೀಡುವ ಯೋಜನೆ ಹಾಕಿಕೊಂಡಿದ್ದು ಕಾರ್ಯಗತಗೊಳಿಸಲಾಗುತ್ತಿದೆ.

ಪ್ರಸ್ತುತ ದಿನಗೂಲಿ ₹ 349ಕ್ಕೆ ಏರಿಕೆ ಮಾಡಿದ್ದಲ್ಲದೇ ವಿಶೇಷಚೇತನರಿಗೆ, ಹಿರಿಯ ನಾಗರಿಕರಿಗೆ ಕೆಲಸದಲ್ಲಿ ಶೇ. 50ರಷ್ಟು ರಿಯಾಯ್ತಿ ನೀಡಲಾಗುತ್ತಿದೆ. ಪುರುಷರಿಗೆ ನೀಡುತ್ತಿದ್ದ ಕೂಲಿಯನ್ನೇ ಮಹಿಳೆಯರಿಗೂ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ವಲಸೆ ಪ್ರಮಾಣ ತಗ್ಗಿಸಲು ನರೇಗಾ ಯೋಜನೆಯಡಿ 265 ವಿವಿಧ ವೈಯಕ್ತಿಕ ಮತ್ತು ಸಮುದಾಯ ಆಧಾರಿತ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಏನೇನು ಉಪಕ್ರಮಗಳು?

ಈ ಮೊದಲು ನರೇಗಾ ಯೋಜನೆ ಅಡಿ ಕೆಲವೇ ಕೆಲವು ಯೋಜನೆಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಇದೀಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ, ಕೃಷಿಹೊಂಡ, ಕೃಷಿ ಬದು ನಿರ್ಮಾಣದ ಮೂಲಕ ಜಲಸಂರಕ್ಷಣೆ ಹಾಗೂ ರೈತರಿಗೆ ಸಂಪ್ರಾದಾಯಿಕ ಬೆಳೆಗಳ ಬದಲಿಗೆ ಪರ್ಯಾಯವಾಗಿ ತೋಟಗಾರಿಕೆ ಬೆಳೆ ಬೆಳೆಯಲು ಪ್ರೋತ್ಸಾಹಿಸಿ, ತೋಟಗಾರಿಕಾ ಬೆಳೆಗಳ ವಿಸ್ತರಣೆಗೆ ಆದ್ಯತೆ ನೀಡಲಾಗಿದೆ. ವೈಯಕ್ತಿಕ ಹಾಗೂ ಸಾಮೂಹಿಕ ಕಾರ್ಯಗಳಲ್ಲಿ ನರೇಗಾ ಯೋಜನೆ ಬಳಸಿಕೊಳ್ಳಲಾಗುತ್ತಿದೆ ಎಂದು ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ ಮಾಹಿತಿ ನೀಡಿದರು.

ಕೆರೆ ರಕ್ಷಣೆ, ಜಲರಕ್ಷಣೆ, ಆಹಾರ ಮತ್ತು ಆರ್ಥಿಕ ಬೆಳೆ ಬೆಳೆಯಲು ನರೇಗಾದಲ್ಲಿ ರೈತರಿಗೆ ಹೆಚ್ಚು ಪ್ರೇರಣೆ ನೀಡಲಾಗುತ್ತಿದೆ. ಸಾವಯುವ ಕೃಷಿ, ಹನಿ ನೀರಾವರಿ, ತುಂತುರು ನೀರಾವರಿಗೆ ಆದ್ಯತೆ ಕೊಡಲಾಗಿದೆ. ರೈತರನ್ನು ಆರ್ಥಿಕವಾಗಿ ಸಬಲರಾಗಲು ಮತ್ತು ಪ್ರತಿ ಅರ್ಹ ವ್ಯಕ್ತಿಗೆ ನರೇಗಾ ಕೂಲಿ ಕೊಡಲು ಕ್ರಮ ವಹಿಸಲಾಗಿದೆ. ಪ್ರಸಕ್ತ ವರ್ಷದ ಕ್ರಿಯಾಯೋಜನೆಯಲ್ಲಿ 328 ಕೆರೆ ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಮಾದರಿಗಳು ನಿರ್ಮಾಣವಾಗಿವೆ ಎಂದು ಉಪಕಾರ್ಯದರ್ಶಿ ತಿಳಿಸಿದರು. ಶೇ. 90 ಗುರಿ ಸಾಧನೆ

2023-24ನೇ ಆರ್ಥಿಕ ವರ್ಷಕ್ಕೆ ಜಿಲ್ಲೆಗೆ 26 ಲಕ್ಷ ಮಾನವ ದಿನ ಸೃಷ್ಟಿಸಲು ಗುರಿ ನೀಡಿದ್ದು ಈ ಪೈಕಿ ಶೇ. 90ರಷ್ಟು ಗುರಿ ಮುಟ್ಟಲಾಗಿದೆ. ಇದೀಗ ಬರಗಾಲದ ಏಪ್ರಿಲ್‌ನಲ್ಲಿ 2.65 ಲಕ್ಷ, ಮೇ ತಿಂಗಳಲ್ಲಿ 2.67 ಲಕ್ಷ ಹಾಗೂ ಜೂನ್ ತಿಂಗಳಲ್ಲಿ 4 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದೆ. ಸದ್ಯ ಜಿಲ್ಲೆಯಲ್ಲಿ 9 ಸಾವಿರ ಜನ ಖಾತ್ರಿ ಯೋಜನೆ ಅಡಿ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ಆರೋಗ್ಯ ತಪಾಸಣೆ, ಇನ್ಸುರೆನ್ಸ್, ಕುಡಿಯಲು ನೀರು, ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಸೇರಿ ಹಲವು ಪ್ರಯೋಜನ ನೀಡಿದೆ. ತಾಪಮಾನ ಹೆಚ್ಚುತ್ತಿದ್ದು ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಮಾತ್ರ ಕೆಲಸ ಮಾಡುವಂತೆಯೂ ಯೋಚನೆ ಮಾಡಿದ್ದು ಸದ್ಯದಲ್ಲಿಯೇ ಇದು ಕಾರ್ಯಗತ ಆಗಲಿದೆ. ಯಾವುದೇ ಕಾರಣಕ್ಕೂ ಗುಳೆ ಹೋಗದಂತೆ ತಡೆಯುತ್ತೇವೆ. ಗುಳೆ ತಡೆಯುವ ಜತೆಗೆ ಅವರು ತಮ್ಮೂರಲ್ಲಿಯೇ ಇದ್ದು ಮತದಾನ ಮಾಡುವಂತೆಯೂ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಪಂ ಸಿಇಒ ಸ್ವರೂಪಾ ಟಿ.ಕೆ. ''''ಕನ್ನಡಪ್ರಭ''''ಕ್ಕೆ ಮಾಹಿತಿ ನೀಡಿದರು. ₹ 4 ಕೋಟಿ ಬಾಕಿ:

ಗುಳೆ ಹೋಗಬಾರದೆಂಬ ಉದ್ದೇಶದಿಂದ ಜಿಲ್ಲೆಯಲ್ಲಿ ಜನರಿಗೆ ಸಾಕಷ್ಟು ಕೆಲಸ ನೀಡಲಾಗುತ್ತಿದೆ. ಬೇಸರದ ಸಂಗತಿ ಏನೆಂದರೆ, ಕೂಲಿ ಹಣ ಕೂಲಿಕಾರರ ಕೈಗೆ ಮುಟ್ಟದೇ ಇರುವುದು. ವಾರಕ್ಕೊಮ್ಮೆ ಕೂಲಿಕಾರರಿಗೆ ಸಂಬಳ ನೀಡಲಾಗುತ್ತಿದ್ದು, ಕಳೆದ ಫೆಬ್ರುವರಿ 15ರಂದು ನೀಡಿದ್ದೇ ಕೊನೆ ಸಂಬಳ. ಅಲ್ಲಿಂದ ಈ ವರೆಗೆ ಬರೋಬ್ಬರಿ ಜಿಲ್ಲೆಗೆ ₹ 4 ಕೋಟಿ ಬಾಕಿ ಬರಬೇಕಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಪಂ ಸಿಇಒ, ಸರ್ಕಾರದ ಗಮನಕ್ಕೆ ತಂದಿದ್ದು, ಶೀಘ್ರದಲ್ಲಿಯೇ ಹಣ ಖಾತ್ರಿ ಫಲಾನುಭವಗಳ ಖಾತೆಗೆ ಬರಲಿದೆ ಎಂದರು. ಧಾರವಾಡ ಸಂಪೂರ್ಣ ಬರಪೀಡಿತ ಜಿಲ್ಲೆಯಾಗಿದ್ದು, ಗ್ರಾಮೀಣ ಭಾಗದ ಜನರಿಗೆ, ರೈತರಿಗೆ ಬರಗಾಲದ ಈ ಸಂದರ್ಭದಲ್ಲಿ ನರೇಗಾ ಯೋಜನೆ ಆಸರೆ ಆಗಿದೆ. ಕೂಲಿ ಕೇಳಿ ಬರುವ ಎಲ್ಲರಿಗೂ ಅವರ ಊರಲ್ಲಿಯೇ ಉದ್ಯೋಗ ನೀಡಲಾಗುತ್ತಿದ್ದು, ಕಳೆದ ವರ್ಷದ ಗುರಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಲಾಗಿದೆ. ಈ ಬಾರಿಯೂ ಗುರಿ ಮುಟ್ಟಲು ಈಗಿಂದಲೇ ಪ್ರಯತ್ನ ಶುರುವಾಗಿದೆ ಎಂದು ಜಿಪಂ ಸಿಇಒ ಸ್ವರೂಪಾ ಟಿ.ಕೆ. ಹೇಳಿದರು.