ನೀರು, ಗಾಳಿ ಬೇಕಾದರೆ ಗಿಡಮರ ಬೆಳೆಸಿ: ಕರಿಬಸವ ಶಿವಾಚಾರ್ಯ ಶ್ರೀ

| Published : Jun 20 2024, 01:08 AM IST

ನೀರು, ಗಾಳಿ ಬೇಕಾದರೆ ಗಿಡಮರ ಬೆಳೆಸಿ: ಕರಿಬಸವ ಶಿವಾಚಾರ್ಯ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ನಮಗೆ ಕುಡಿಯಲು ನೀರು, ಉಸಿರಾಡಲು ಶುದ್ಧ ಗಾಳಿ ಬೇಕಾದರೆ ಇರುವ ಮರಗಳನ್ನು ಉಳಿಸಬೇಕು.

ಪರಿಸರ ದಿನಾಚರಣೆಗೆ ಚಾಲನೆ ನೀಡಿದ ಅಭಿನವ ಕರಿಬಸವ ಶಿವಾಚಾರ್ಯರು

ಕನ್ನಡಪ್ರಭ ವಾರ್ತೆ ಕುಷ್ಟಗಿ

ನಮಗೆ ಕುಡಿಯಲು ನೀರು, ಉಸಿರಾಡಲು ಶುದ್ಧ ಗಾಳಿ ಬೇಕಾದರೆ ಇರುವ ಮರಗಳನ್ನು ಉಳಿಸಬೇಕು. ಇನ್ನೂ ಹೆಚ್ಚಿನ ಗಿಡಮರಗಳನ್ನು ಬೆಳೆಸುವುದು ನಮ್ಮ ಮುಖ್ಯ ಕರ್ತವ್ಯವಾಗಿದೆ ಎಂದು ನಿಡಶೇಸಿ ಮಠದ ಅಭಿನವ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ತಾಲೂಕಿನ ಕುರುಬನಾಳ ಗ್ರಾಮದ ರೈತರಿಗೆ ಹಾಗೂ ಶಾಲೆಯ ಮಕ್ಕಳಿಗೆ ಮಠದ ವತಿಯಿಂದ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಿ, ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.ಇಂದು ನಿಮಗೆ ನೀಡಿರುವಂತಹ ಸಸಿಗಳನ್ನು ಬೆಳೆಸಿ ಉತ್ತಮವಾದ ಗಾಳಿ ಪಡೆಯಬೇಕು ಎಂದು ಹೇಳಿದರು. ನಾವು ವಾತಾವರಣ ಕಲುಷಿತಗೊಳಿಸದೆ, ಪರಿಸರದ ಮೂಲಗಳಾದ ನೀರು, ಮಣ್ಣು, ಗಾಳಿ, ನದಿ, ಬೆಟ್ಟ ಮತ್ತು ಗುಡ್ಡಗಳನ್ನು ಉಳಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಈ ವರ್ಷ ನಾವು ಅತಿಯಾದ ಉಷ್ಣಾಂಶ ಅನುಭವಿಸಿದ್ದೇವೆ. ಪರಿಸರ ಉಳಿಸಲು ಅರಣ್ಯ ನಾಶ ತಡೆಯಬೇಕು, ಗಿಡಮರ ಬೆಳೆಸಬೇಕು, ನೀರು ಮತ್ತು ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆಯ ಜೊತೆಗೆ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು ಎಂದರು.

ಭೂಮಿ ಮೇಲಿನ ಜೀವ ಸಂಕುಲ-ಪರಿಸರಕ್ಕೂ ಅವಿನಾಭಾವ ಸಂಬಂಧವಿದ್ದು, ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಎಲ್ಲರೂ ಜೀವಸಂಕುಲ ರಕ್ಷಣೆಗೆ ಸಸಿ ನೆಡಬೇಕು ಎಂದರು.

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡುತ್ತಾ ಹೊರಟಿದ್ದು, ಬೆಟ್ಟ-ಗುಡ್ಡ, ಜಮೀನು, ಮನೆಯ ಬಳಿಯ ಗಿಡಗಳಲ್ಲಿ ಗೂಡು ಕಟ್ಟಿಕೊಂಡಿದ್ದ ಪಕ್ಷಿಗಳು ಅವನತಿಯತ್ತ ಸಾಗುತ್ತಿದ್ದು, ಪರಿಸರದ ನಾಶ ನಿಲ್ಲಬೇಕು ಎಂದರು.

ಈ ಸಂದರ್ಭದಲ್ಲಿ ವೀರಯ್ಯ ಹಿರೇಮಠ, ರಮೇಶ ಕುರುಬನಾಳ, ಮಲ್ಲಣ್ಣ ಸಾಹುಕಾರ, ನಿಂಗಪ್ಪ ಬೆಣಕಲ್, ಶರಣಪ್ಪ ನವಲಹಳ್ಳಿ ಶರಣಪ್ಪ ತಳವಾರ, ಕನಕಪ್ಪ ತಳವಾರ, ಶಂಕ್ರಪ್ಪ, ಮಲ್ಲಪ್ಪ ಗುಮಗೇರಾ, ಭೀಮಶೆಪ್ಪ ಸೇರಿದಂತೆ ಅನೇಕರು ಇದ್ದರು. ಶಾಲಾ ವಿದ್ಯಾರ್ಥಿಗಳು ಇದ್ದರು.