ಸಾರಾಂಶ
ಹಾನಗಲ್ಲ: ಹಿಂದೂ ಧರ್ಮದ ಸುರಕ್ಷತೆ ಏಕತೆ ಬಗೆಗೆ ನಿರ್ಲಕ್ಷ್ಯ ತೋರಿದರೆ ಭಾರತದಲ್ಲಿಯೇ ಹಿಂದುಗಳಿಗೆ ಗಂಡಾಂತರ ತಪ್ಪಿದ್ದಲ್ಲ, ಭಾರತೀಯರ ಸ್ವಾಭಿಮಾನ ಕೊಲ್ಲುವ ಷಡ್ಯಂತ್ರ ನಡೆದಿದ್ದು ಆತಂಕವಾದಿಗಳಿಂದ ನಾವು ಎಚ್ಚರವಾಗಿರಬೇಕಾಗಿದೆ ಎಂದು ಹಿಂದು ಜಾಗರಣ ವೇದಿಕೆ ಕ್ಷೇತ್ರೀಯ ಸಂಯೋಜಕ ಜಗದೀಶ ಕಾರಂತ ಎಚ್ಚರಿಕೆ ನೀಡಿದರು. ಹಾನಗಲ್ಲ ತಾಲೂಕಿನ ಬೆಳಗಾಲಪೇಟೆಯ ವೀರಭದ್ರೇಶ್ವರ ಹಾಗೂ ಶಿವಲಿಂಗೇಶ್ವರ ದೇವರ ಪ್ರಾಣ ಪ್ರತಿಷ್ಠಾಪನೆಯ 26ನೇ ವಾರ್ಷಿಕೋತ್ಸವ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ ಧರ್ಮ ಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಡೀ ಜಗತ್ತು ಭಾರತವನ್ನು ಹಿಂದೂ ರಾಷ್ಟ್ರ ಎಂದು ಘಂಟಾಘೋಷವಾಗಿ ಹೇಳುತ್ತದೆ. ಆದರೆ ಭಾರತೀಯರಾದ ನಮ್ಮವರೇ ಅದನ್ನು ಟೀಕಿಸುತ್ತಾರೆ. ಧರ್ಮ ಕಾರ್ಯದಲ್ಲಿಯೇ ಇರುವವರೂ ಕೂಡ ಹಿಂದು ಸಂಸ್ಕೃತಿಯನ್ನು ಟೀಕಿಸುತ್ತಿರುವುದು ಅತ್ಯಂತ ಖೇದದ ಸಂಗತಿ. ಭಾರತಕ್ಕೆ ಸ್ವಾಭಿಮಾನಿಂದ ಸ್ವಾತಂತ್ರ್ಯ ದೊರಕಿದೆ. ಭಾರತ ಮಾತಾ ಕಿ ಜೈ ಇಂದು ನಮ್ಮ ಘೋಷ ವಾಕ್ಯ ಎಂಬುದನ್ನೂ ಒಪ್ಪಲಾರದವರು ಈ ದೇಶದಲ್ಲಿದ್ದಾರೆ ಎಂಬುದೇ ವಿಷಾದದ ಸಂಗತಿ. ಭಾರತವನ್ನು ಇಸ್ಲಾಮೀಕರಣ ಮಾಡುವ ಸಂಚು ನಡೆದಿದೆ ಎಂದು ಸುದ್ದಿಗಳು ಓಡಾಡುತ್ತಿವೆ. ಅದರ ಹಲವು ಸಾಕ್ಷಿಗಳು ಸಿಕ್ಕಿವೆ. ಭಾರತೀಯರೆ ಈಗಲಾದರೂ ಮೈಮರೆತುಕೊಳ್ಳದೆ ಎಚ್ಚರಗೊಳ್ಳಿ. ಹಿಂದುತ್ವ ಈ ನಾಡಿನ್ನು ಒಗ್ಗೂಡಿಸುವ ಶಕ್ತಿ ಎಂದು ಒಪ್ಪಕೊಳ್ಳಿ ಎಂದರು. ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ ಅಧ್ಯಕ್ಷತೆವಹಿಸಿ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಧಾರ್ಮಿಕ ನೆಲೆಗಟ್ಟಿನ ಮೇಲೆ ಕಟ್ಟಬೇಕಾಗಿದೆ. ಇಂದಿನ ಯುವ ಪೀಳಿಗೆಗೆ ಆಧ್ಯಾತ್ಮಿಕ ಚಿಂತನೆ ತಿಳಿಸಬೇಕಾಗಿದೆ. ನಾವು ಸಂಸ್ಕೃತಿಯಿಂದ ವಿಮುಖರಾಗುವುದು ಬೇಡ. ಸಂಸ್ಕೃತಿ ವಿಹೀನತೆ ಮಾನಸಿಕ ಹಾಗೂ ದೈಹಿಕ ಕ್ಯಾನ್ಸರನಂತೆ. ಮಠ ಮಾನ್ಯಗಳು ಈಗಲಾದರೂ ಎಚ್ಚೆತ್ತು ಧರ್ಮ ರಕ್ಷಣೆಯ ಸಂಕಲ್ಪ ತೊಡಲಿ. ಮಠಗಳನ್ನು ಮಾರಾಟದ ಸರಕನ್ನಾಗಿ ಮಾಡಿಕೊಳ್ಳುವುದು ಬೇಡ. ನಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯುವುದು ಬೇಡ. ಆತ್ಮ ವಂಚನೆಯೂ ಬೇಡ ಎಂದರು. ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಅತಿಥಿಯಾಗಿ ಮಾತನಾಡಿ, ಭಕ್ತಿ ಶ್ರದ್ಧೆಗಳು ನಮ್ಮನ್ನು ಶುದ್ಧಗೊಳಿಸುತ್ತವೆ. ನಮ್ಮ ಆಲೋಚನೆಗಳು ದೇಶದ ಹಿತಕ್ಕೆ ಪೂರಕವಾಗಿರಲಿ. ಈ ದೇಶವನ್ನು ವಿಘಟಿಸುವವರಿಂದ ಎಚ್ಚರವಾಗಿರಬೇಕಾಗಿದೆ. ಜಾತಿ ಹೆಸರಿನಲ್ಲಿ ಭೇದ ಹುಟ್ಟು ಹಾಕಿ ಧರ್ಮವನ್ನು ಒಡೆಯುವ ಹುನ್ನಾರಕ್ಕೆ ಸೈ ಎನ್ನಬೇಡಿ. ಈಗಲಾದರೂ ನಾಳೆಗಳ ಭಯಾನಕ ಕಾಲದ ಬಗೆಗೆ ಎಚ್ಚರಿಕೆ ವಹಿಸದಿದ್ದರೆ ನಮ್ಮ ನಾಶಕ್ಕೆ ನಾವೇ ಸಾಕ್ಷಿಯಾಗಬೇಕಾಗುತ್ತದೆ ಎಂದರು. ಹುಕ್ಕೇರಿ ತಾಲೂಕು ಗೌಡಗೇರಿಯ ಕಾಶೀನಾಥ ಮಹಾಸ್ವಾಮಿಗಳು, ಗದಿಗೆಯ್ಯ ದೇವರು ಚೌಕಿಮಠ ಭಟಕುರ್ಕಿ, ಮೃತ್ಯುಂಜಯ ದೇವರು ಕೊಳ್ಳೂರು, ಸಮಾಜ ಸೇವಕ ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ, ಸಾಮರಸ್ಯ ವೇದಿಕೆ ಸಂಚಾಲಕ, ಸು.ಕೃಷ್ಣಮೂರ್ತಿ, ನ್ಯಾಯವಾದಿ ಬಸವರಾಜ ದಳವಾಯಿ, ಸಿದ್ದಲಿಂಗೇಶ ತುಪ್ಪದ, ಶಾಂತವೀರೇಶ ನೆಲೋಗಲ್, ಜಯಲಿಂಗಪ್ಪ ಹಳಕೊಪ್ಪ, ವೀರಣ್ಣ ನಿಂಬಣ್ಣನವರ, ರಾಜಶೇಖರ ಹಲಸೂರ ಅತಿಥಿಗಳಾಗಿದ್ದರು. ಎಸ್.ಎ. ಸುಂಕದ ಸ್ವಾಗತಿಸಿದರು. ಜ್ಯೋತಿ ಯಳ್ಳೂರ ಕಾರ್ಯಕ್ರಮ ನಿರೂಪಿಸಿದರು.