ಚಿಕ್ಕಮಗಳೂರುಬಡ್ಡಿಯೊಂದಿಗೆ ಸಾಲದ ಮೊತ್ತ ಮರು ಪಾವತಿಸಿದರೂ ಅಡವಿಟ್ಟ ಚಿನ್ನಾಭರಣ ನೀಡದಿದ್ದರೆ, ಚಿನ್ನಾಭರಣದ ತೂಕಕ್ಕೆ ಮಾರುಕಟ್ಟೆ ದರದಲ್ಲಿ ಹಣ ವಾಪಾಸ್‌ ಮಾಡುವಂತೆ ಚಿಕ್ಕಮಗಳೂರು ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.

- ದಲ್ಲಾಳಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸೂಚನೆ

(ಗ್ರಾಹಕ ನ್ಯಾಯಾಲಯಕ್ಕೆ ಸಂಬಂಧಿಸಿದ ಫೋಟೋ ಬಳಸಿ)

-- ಬಾಕ್ಸ್--- 2025ರ ಜೂನ್‌ 9 ರಂದು ಚಿಕ್ಕಮಗಳೂರು ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು

- 91.650 ಗ್ರಾಂ ತೂಕದ ಚಿನ್ನಾಭರಣಗಳನ್ನು ಮರಳಿಸಲು ಸೂಚಿಸಿದೆ

- ದೂರುದಾರರಿಗೆ ಪರಿಹಾರ ₹ 30 ಸಾವಿರ, ಪ್ರಕರಣದ ಖರ್ಚು-ವೆಚ್ಚಕ್ಕೆ ₹10 ಸಾವಿರ ಪಾವತಿಸಲು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬಡ್ಡಿಯೊಂದಿಗೆ ಸಾಲದ ಮೊತ್ತ ಮರು ಪಾವತಿಸಿದರೂ ಅಡವಿಟ್ಟ ಚಿನ್ನಾಭರಣ ನೀಡದಿದ್ದರೆ, ಚಿನ್ನಾಭರಣದ ತೂಕಕ್ಕೆ ಮಾರುಕಟ್ಟೆ ದರದಲ್ಲಿ ಹಣ ವಾಪಾಸ್‌ ಮಾಡುವಂತೆ ಚಿಕ್ಕಮಗಳೂರು ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.

ನಗರದ ಐ.ಜಿ. ರಸ್ತೆ ಹಿಂಭಾಗದ ನಿವಾಸಿ ಹುರ್ಮತ್ ನಾಜಿಯಾ ಎಂಬುವವರು ನಗರದ ಎಂ.ಜಿ.ರಸ್ತೆಯ ಅರಿಹಂತ್ ಹಣಕಾಸುದಾರರ ಬಳಿ ಚಿನ್ನಾಭರಣಗಳನ್ನು ಅಡವಿಟ್ಟು ಐದು ಬಾರಿ ಸಾಲ ಪಡೆದಿದ್ದರು. ಪಡೆದ ಸಾಲದ ಎಲ್ಲ ಮೊತ್ತಗಳನ್ನು ಲೆಕ್ಕ ಹಾಕಿ ಮರುಪಾವತಿಸಿದ್ದು, ತನ್ನ ಆಭರಣಗಳನ್ನು ವಾಪಸು ನೀಡುವಂತೆ ಕೋರಿದ್ದರೂ ಸ್ಪಂದಿಸದೆ ಹಣಕಾಸುದಾರರು ಸೇವಾ ನ್ಯೂನತೆ ಎಸಗಿದ್ದರು. ಈ ಹಿನ್ನೆಲೆಯಲ್ಲಿ ಅರಿಹಂತ್ ಹಣಕಾಸುದಾರರ ವಿರುದ್ಧ ಕಳೆದ ವರ್ಷದ ಜೂನ್‌ 9 ರಂದು ಚಿಕ್ಕಮಗಳೂರು ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗ ದೂರುದಾರರು ಪಡೆದ ಸಾಲಗಳ ಮೊತ್ತಕ್ಕೆ 2025ರ ಫೆಬ್ರವರಿ 21 ರವರೆಗೆ ಆರ್‌ಬಿಐ ನಿಯಮಾವಳಿಯಂತೆ ಬಡ್ಡಿ ಲೆಕ್ಕಾಚಾರ ಮಾಡಿ ಸಾಲದ ಅಸಲು ಮತ್ತು ಬಡ್ಡಿಯ ಮೊತ್ತವನ್ನು ಹಣಕಾಸುದಾರರು ದೂರುದಾರರಿಂದ ಪಡೆದು 91.650 ಗ್ರಾಂ ತೂಕದ ಚಿನ್ನಾಭರಣಗಳನ್ನು ಮರಳಿಸುವಂತೆ ಸೂಚಿಸಿದೆ.

ಒಂದು ವೇಳೆ ಈ ಚಿನ್ನಾಭರಣಗಳನ್ನು ಹಣಕಾಸುದಾರರು ಮರಳಿಸಲು ವಿಫಲವಾದಲ್ಲಿ ಈ ಚಿನ್ನಾಭರಣಕ್ಕೆ ಹಾಲಿ ಮಾರುಕಟ್ಟೆಯ ದರವನ್ನು ಆಧರಿಸಿದ ಮೊತ್ತವನ್ನು ದೂರುದಾರರಿಗೆ ನೀಡುವುದು. ಅಲ್ಲದೆ, ದೂರುದಾರರಿಗೆ ಪರಿಹಾರವಾಗಿ ₹ 30 ಸಾವಿರ ಹಾಗೂ ಪ್ರಕರಣದ ಖರ್ಚು-ವೆಚ್ಚಕ್ಕಾಗಿ ₹10 ಸಾವಿರ ಪಾವತಿಸುವಂತೆ ಆದೇಶಿಸಲಾಗಿದೆ.

ಈ ತೀರ್ಪನ್ನು ಮುಂದಿನ 45 ದಿನಗಳ ಒಳಗಾಗಿ ಪಾಲಿಸಬೇಕು. ತಪ್ಪಿದಲ್ಲಿ ಆದೇಶದ ಮೊತ್ತವನ್ನು ಪಾವತಿಸುವವರೆಗೆ ವಾರ್ಷಿಕ ಶೇ.6ರ ಬಡ್ಡಿಯನ್ನು ನೀಡುವಂತೆ ಸೂಚಿಸಲಾಗಿದೆ. ಆಯೋಗದ ಅಧ್ಯಕ್ಷ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ, ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಇವರು ಈ ಆದೇಶವನ್ನು ನೀಡಿದ್ದು, ಎದುರುದಾರರು ಸೇವಾ ನ್ಯೂನತೆ ಎಸಗಿರುವುದನ್ನು ಪುರಾವೆ ಸಹಿತ ಸಾಬೀತುಪಡಿಸಿದ್ದು, ಗ್ರಾಹಕರಿಗೆ ನ್ಯಾಯ ಒದಗಿಸಿದ್ದಾರೆ. ಪ್ರಕರಣದಲ್ಲಿ ದೂರುದಾರರ ಪರವಾಗಿ ವಕೀಲರಾದ ಐ.ಎಸ್.ತೇಜಸ್ವಿ ವಾದ ಮಂಡಿಸಿದ್ದಾರೆ.