ಸಾಮರ್ಥ್ಯ ಅರಿತು ರೆಕ್ಕೆ ಬಿಚ್ಚಿ ಹಾರಿದರೆ ಆಗಸವೇ ನಿಮ್ಮದು: ಡಿಸಿಪಿ

| Published : Jan 19 2025, 02:16 AM IST

ಸಾರಾಂಶ

ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಜೀವನ ನಮಗೆ ಸಾಕಷ್ಟು ಅವಕಾಶ ನೀಡುತ್ತದೆ. ಸರಿಯಾದ ಸಮಯ, ವೇಳೆಯಲ್ಲಿ ಗುರುತಿಸಬೇಕು ಎಂದು ಡಿಸಿಪಿ ರೋಹನ ಜಗದೀಶ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಜೀವನ ನಮಗೆ ಸಾಕಷ್ಟು ಅವಕಾಶ ನೀಡುತ್ತದೆ. ಸರಿಯಾದ ಸಮಯ, ವೇಳೆಯಲ್ಲಿ ಗುರುತಿಸಬೇಕು ಎಂದು ಡಿಸಿಪಿ ರೋಹನ ಜಗದೀಶ ಹೇಳಿದರು.

ಗುರುವಾರ ಬೆಳಗಾವಿಯ ವಿಟಿಯುನ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಎಂಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಾರಂಭ 2ಕೆ 25 ಸ್ವಾಗತ ಹಾಗೂ ಒಂದು ದಿನದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಶಿಷ್ಟ ಪ್ರತಿಭೆ ಮತ್ತು ಸಾಮರ್ಥ್ಯಗಳಿವೆ. ನೀವು ನಿಮ್ಮ ಸಾಮರ್ಥ್ಯ ನಂಬಬೇಕು ಮತ್ತು ನಿಮಗೆ ಯಾವುದೇ ಮಿತಿ ಹಾಕಿಕೊಳ್ಳದೆ ಮಿತಿಗಳ ಗಡಿಗಳನ್ನು ಮೀರಿ ನಿಮ್ಮ ಆಸಕ್ತಿಯ ರೆಕ್ಕೆಗಳನ್ನು ಚಾಚಿದರೆ ಇಡೀ ಆಕಾಶವೇ ನಿಮ್ಮದಾಗುತ್ತದೆ . ನಿಮ್ಮ ಕೌಶಲ್ಯಗಳ ಮೇಲೆ ಕೆಲಸ ಮಾಡಬೇಕು. ಶ್ರೇಷ್ಠತೆ ಸಾಧಿಸಲು ಸಮರ್ಥರಾಗಿದ್ದೀರಿ ಎಂದುಕೊಳ್ಳಬೇಕು. ಬದುಕಿನಲ್ಲಿ ವೈಫಲ್ಯಗಳು ಸಂಭವಿಸುವುದು ಖಚಿತ, ವಾಸ್ತವವಾಗಿ, ವೈಫಲ್ಯಗಳು ಯಶಸ್ಸಿನ ಮೆಟ್ಟಿಲುಗಳಾಗಿವೆ ಎಂದು ಹೇಳಿದರು.

ಬೆಳಗಾವಿಯ ಟೀ ಟೋಸ್ಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಕ್ಷಯ್ ಕುಲಕರ್ಣಿ ಮಾತನಾಡಿ, ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಅಥವಾ ಯೋಜನೆ ರೂಪಿಸಲು ವಿಶ್ಯದ ಬಗ್ಗೆ ಆಲಿಸುವುದು ಬಹಳ ಮುಖ್ಯ. ಆಲಿಸುವುದು ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ, ಆದ್ದರಿಂದ ಇಂದಿನ ವಿದ್ಯಾರ್ಥಿ ಸಮುದಾಯ ಆಲಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು. ನೀವು ಎಐ, ಮೆಷಿನ್ ಲರ್ನಿಂಗ್, ಬಿಗ್ ಡೇಟಾ ಮುಂತಾದ ಇವತ್ತಿನ ತಂತ್ರಜ್ಞಾನದ ಯುಗದಲ್ಲಿದ್ದೀರಿ. ನೀವು ಈ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಕಾರಣ ಇವುಗಳ ಪರಿಣಾಕಾರಿ ಉಪಯೋಗದಿಂದ ಇವತ್ತಿನ ಅವಶ್ಯಕ ಕೌಶಲ್ಯವನ್ನು ಕಲಿಯುವಲ್ಲಿ ಇವು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್. ವಿಟಿಯು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ವಿವಿಧ ಯೋಜನೆಗಳ ಅಡಿಯಲ್ಲಿ, ವಿದ್ಯಾರ್ಥಿಗಳಿಗೆ ಇಂದಿನ ವೃತ್ತಿಪರ ವಲಯದಲ್ಲಿ ಅಗತ್ಯವಿರುವ ಕೌಶಲ್ಯಗಳನ್ನು ಇಂಟರ್ನ್‌ಶಿಪ್ ಮತ್ತು ತರಬೇತಿಯ ಮೂಲಕ ನೀಡಲಾಗುತ್ತಿದೆ ಅದಕ್ಕಾಗಿ ಕೌಶಲ್ಯ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿಲಾಗಿದೆ ಎಂದು ಹೇಳಿದರು.

ಕುಲಸಚಿವ ಪ್ರೊ. ಬಿ. ಈ. ರಂಗಸ್ವಾಮಿ, ಹಣಕಾಸು ಅಧಿಕಾರಿ ಡಾ. ಪ್ರಶಾಂತ ನಾಯಕ್ ಜಿ. ಎಂಬಿಎ ವಿಭಾಗದ ಅಧ್ಯಕ್ಷ ಪ್ರೊ. ಪ್ರಹ್ಲಾದ್ ರಾಥೋಡ್, ಕಾರ್ಯಕ್ರಮ ಸಂಯೋಜಕಿ ಪ್ರೊ. ದೀಪ್ತಿ ಶೆಟ್ಟಿ ಉಪಸ್ಥಿತರಿದ್ದರು.