ಹೊಸ ಮನೆಯಲ್ಲಿ ಮಲಗಿದ್ದರೆ ಬದುಕುಳೀತಿದ್ರು...

| Published : Jul 20 2024, 12:46 AM IST

ಸಾರಾಂಶ

ಹಳೆಯ ಮಣ್ಣಿನ ಮನೆ ಸೋರುತ್ತಿತ್ತು. ಅದಕ್ಕೆ ಪ್ಲಾಸ್ಟಿಕ್‌ ಹೊದೆಸಿಕೊಂಡು ವಾಸಿಸುತ್ತಿದ್ದ ಆ ಕುಟುಂಬ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಹೊಸ ಮನೆಯಲ್ಲಿ ರಾತ್ರಿ ಮಲಗಿದ್ದರೆ ಇಂದು ಮೂವರು ಬದುಕುಳಿಯುತ್ತಿದ್ದರು. ಅಷ್ಟೇ ಅಲ್ಲ, ಘಟನೆ ನಡೆದ ತಕ್ಷಣ ಆ್ಯಂಬುಲೆನ್ಸ್‌ ಬಂದಿದ್ದರೆ ಪುಟ್ಟ ಮಕ್ಕಳಿಬ್ಬರನ್ನು ಉಳಿಸಬಹುದುತ್ತೇನೋ...

ಪವನಕುಮಾರ ಲಮಾಣಿ

ಕನ್ನಡಪ್ರಭ ವಾರ್ತೆ ಸವಣೂರು

ಹಳೆಯ ಮಣ್ಣಿನ ಮನೆ ಸೋರುತ್ತಿತ್ತು. ಅದಕ್ಕೆ ಪ್ಲಾಸ್ಟಿಕ್‌ ಹೊದೆಸಿಕೊಂಡು ವಾಸಿಸುತ್ತಿದ್ದ ಆ ಕುಟುಂಬ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಹೊಸ ಮನೆಯಲ್ಲಿ ರಾತ್ರಿ ಮಲಗಿದ್ದರೆ ಇಂದು ಮೂವರು ಬದುಕುಳಿಯುತ್ತಿದ್ದರು. ಅಷ್ಟೇ ಅಲ್ಲ, ಘಟನೆ ನಡೆದ ತಕ್ಷಣ ಆ್ಯಂಬುಲೆನ್ಸ್‌ ಬಂದಿದ್ದರೆ ಪುಟ್ಟ ಮಕ್ಕಳಿಬ್ಬರನ್ನು ಉಳಿಸಬಹುದುತ್ತೇನೋ...

ಇದು ಸವಣೂರು ತಾಲೂಕು ಮಾದಾಪುರ ಗ್ರಾಮದಲ್ಲಿ ಮನೆ ಚಾವಣಿ ಕುಸಿದು ಎರಡು ವರ್ಷದ ಅವಳಿ ಮಕ್ಕಳು ಸೇರಿದಂತೆ ಮೂವರು ಮೃತಪಟ್ಟ ಘಟನೆಯಿಂದ ಕಂಗೆಟ್ಟಿರುವ ಕುಟುಂಬದ ಸದಸ್ಯರು ಹೇಳುತ್ತಿರುವ ಮಾತು.

ಆ ಮಣ್ಣಿನ ಮನೆ ಸಂಪೂರ್ಣವಾಗಿ ಜೀರ್ಣಾವಸ್ಥೆಗೆ ತಲುಪಿತ್ತು. ಮಳೆ ಬಂದರೆ ಸೋರುತ್ತಿತ್ತು. ಇದರಿಂದ ಆತಂಕದಲ್ಲೇ ಜೀವನ ಸಾಗಿಸುತ್ತಿದ್ದ ಆ ಕುಟುಂಬದವರು ಕೆಲವು ದಿನಗಳ ಹಿಂದೆ ಮನೆ ಚಾವಣಿ ಮೇಲೆ ಕಪ್ಪು ಪ್ಲಾಸ್ಟಿಕ್‌ ಹೊದೆಸಿದ್ದರು. ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗಿದ್ದರಿಂದ ಮಣ್ಣಿನ ಮನೆ ತೇವಗೊಂಡಿತ್ತು. ಅವಘಡ ಸಂಭವಿಸಿದ ಮುತ್ತಪ್ಪ ಹರಕುಣಿ ಅವರ ಮನೆಗೆ ಹೊಂದಿಕೊಂಡೇ ಸಹೋದರ ಮನೆ ಕಟ್ಟಿಸುತ್ತಿದ್ದರು. ಆರ್‌ಸಿಸಿ ಆಗಿದ್ದರಿಂದ ಆ ಮನೆಯಲ್ಲೇ ಸಹೋದರರ ಕುಟುಂಬದವರು ವಾಸಿಸುತ್ತಿದ್ದರು. ಗುರುವಾರ ರಾತ್ರಿವರೆಗೂ ಅವಳಿ ಮಕ್ಕಳು ಆಟವಾಡಿಕೊಂಡಿದ್ದರು. ಎಲ್ಲರೂ ಎತ್ತಿಕೊಂಡು ಮುದ್ದಾಡಿದ್ದರು.

ಈ ರೀತಿಯ ಅವಘಡ ಸಂಭವಿಸಬಹುದು ಎಂಬ ಅರಿವಿಲ್ಲದೇ ಕುಟುಂಬದ ಆರು ಸದಸ್ಯರು ಆ ಪುಟ್ಟ ಗುಡಿಸಿಲಲ್ಲೇ ಮಲಗಿದ್ದರು. ಆದರೆ, ರಾತ್ರಿ ಬೆಳಗಾಗುವುದರೊಳಗೆ ಮೂವರು ಶಾಶ್ವತವಾಗಿ ಕಣ್ಮುಚ್ಚಿದ್ದರು. ಮಕ್ಕಳನ್ನು ನೆನಪಿಸಿಕೊಂಡು ಕಣ್ಣೀರಿಡುತ್ತಿರುವ ಕುಟುಂಬದ ಸದಸ್ಯರು, ಬದುಕಿ ಬಾಳಬೇಕಿದ್ದ ಕಂದಮ್ಮಗಳು ನಮ್ಮೆದುರೇ ಉಸಿರು ನಿಲ್ಲಿಸಿದ್ದನ್ನು ಹೇಗೆ ಸಹಿಸಿಕೊಳ್ಳುವುದು, ಮಳೆಯಾಗುತ್ತಿದ್ದರಿಂದ ಹೊಸ ಮನೆಗೆ ಬಂದು ಮಲಗುವಂತೆ ಹೇಳಿದ್ದೆವು. ಆದರೆ, ಅವರು ಅಲ್ಲೇ ಮಲಗಿದರು. ಇದರಿಂದ ಇಬ್ಬರು ಮಕ್ಕಳು, ಅವರ ಅತ್ತೆ ಬಾರದ ಲೋಕಕ್ಕೆ ತೆರಳಿದರು ಎಂದು ಹೇಳುತ್ತ ಕುಟುಂಬದ ಸದಸ್ಯರು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಆ್ಯಂಬುಲೆನ್ಸ್‌ ತಕ್ಷಣ ಬಂದಿದ್ದರೆ: ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಒಮ್ಮೆಲೇ ದೊಡ್ಡ ಶಬ್ದ ಬಂತು. ಆಗ ನಸುಕಿನ 3-30 ಗಂಟೆಯಾಗಿತ್ತು. ಬಂದು ನೋಡಿದರೆ ಮನೆಯ ಚಾವಣಿ ಕುಸಿದು ಬಿದ್ದಿತ್ತು. ಏನಾದರೂ ಮಾಡಿ ಮನೆಯೊಳಗಿದ್ದವರನ್ನು ಹೊರತೆಗೆಯೋಣ ಎಂದರೆ ಕರೆಂಟ್‌ ಬೇರೆ ಕೈಕೊಟ್ಟಿತ್ತು. ಬೀಳುತ್ತಿದ್ದ ಮಳೆಯ ನಡುವೆಯೇ ರಾಶಿಯಾಗಿ ಬಿದ್ದಿದ್ದ ಮಣ್ಣನ್ನು ಪ್ರಯಾಸದಿಂದ ಹೊರಹಾಕಿದರು. ಸಿಲುಕಿಕೊಂಡಿದ್ದ ಆರು ಜನರನ್ನು ಹೊರತೆಗೆದರು. ಮಕ್ಕಳಿಬ್ಬರೂ ಗಾಯಗೊಂಡು ಒದ್ದಾಡುತ್ತಿದ್ದರು. ತಕ್ಷಣ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರು. ಆದರೆ, ಅದು ಬಂದಿದ್ದು ಒಂದೂವರೆ ಗಂಟೆ ತಡವಾಗಿ. ಒಂದು ವೇಳೆ ತಕ್ಷಣ ಆ್ಯಂಬುಲೆನ್ಸ್‌ ಸ್ಥಳಕ್ಕೆ ಬಂದು ಆಸ್ಪತ್ರೆಗೆ ಸಾಗಿಸಿದ್ದರೆ ಪುಟ್ಟ ಮಕ್ಕಳಿಬ್ಬರೂ ಬದುಕುಳಿಯುವ ಸಾಧ್ಯತೆಯಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಘಟನೆಯಿಂದ ಜಿಲ್ಲೆಯಲ್ಲಿ ಸಿಗುತ್ತಿರುವ ಆರೋಗ್ಯ ಸೇವೆಯ ಗುಣಮಟ್ಟದ ಬಗ್ಗೆಯೇ ಅನುಮಾನ ಮೂಡಿಸುವಂತಾಗಿದೆ.

ಮುನ್ನೆಚ್ಚರಿಕೆ ಅಗತ್ಯ: ಮಣ್ಣಿನ ಮನೆಗಳಲ್ಲಿ ವಾಸಿಸುತ್ತಿರುವ ಸಾವಿರಾರು ಬಡ ಕುಟುಂಬಗಳು ಜಿಲ್ಲೆಯಲ್ಲಿವೆ. ಅವರ ಬದುಕು ಎಷ್ಟು ಅಪಾಯದಲ್ಲಿವೆ ಎಂಬುದನ್ನು ಈ ದುರ್ಘಟನೆಯಿಂದ ಮನಗಾಣಬಹುದಾಗಿದೆ. ಆ ರೀತಿ ಕಚ್ಚಾ ಮನೆಗಳಲ್ಲಿ ವಾಸಿಸುವವರ ಬಗ್ಗೆ ಸರ್ಕಾರ ಯೋಚಿಸಬೇಕು ಎಂಬ ಮಾತು ಎಲ್ಲರಿಂದ ಕೇಳಿಬರುತ್ತಿದೆ.