ಪೌರುಷದ ಮಾತನಾಡುವವರು ತಾವು ಶಾಸಕರಾಗಿದ್ದ ಅವಧಿಯಲ್ಲಿ ಪ್ರಜಾಸೌಧ ಮಾಡಲಿಲ್ಲ. ಪ್ರಜಾಸೌಧ ಮಾಡಬಾರದೆಂಬ ಉದ್ದೇಶ ಅವರದ್ದಾಗಿತ್ತು. ಇದೀಗ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಬೇಕಾಬಿಟ್ಟಿಯಾಗಿ ಮಾತನಾಡಿದರೇ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಕರ್ನಾಟಕ ಮಾರ್ಜಕ ಮತ್ತು ಸಾಬೂನು ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪೌರುಷದ ಮಾತನಾಡುವವರು ತಾವು ಶಾಸಕರಾಗಿದ್ದ ಅವಧಿಯಲ್ಲಿ ಪ್ರಜಾಸೌಧ ಮಾಡಲಿಲ್ಲ. ಪ್ರಜಾಸೌಧ ಮಾಡಬಾರದೆಂಬ ಉದ್ದೇಶ ಅವರದ್ದಾಗಿತ್ತು. ಇದೀಗ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಬೇಕಾಬಿಟ್ಟಿಯಾಗಿ ಮಾತನಾಡಿದರೇ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಕರ್ನಾಟಕ ಮಾರ್ಜಕ ಮತ್ತು ಸಾಬೂನು ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿದ್ದ ಅವಧಿಯಲ್ಲಿ ತಾಳಿಕೋಟೆ ತಾಲೂಕು ಕೇಂದ್ರವನ್ನಾಗಿ ಮಾಡಿದ್ದೇನೆ. ಶಾಸಕರಾಗಿದ್ದ 5 ವರ್ಷದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಶ್ರಮಿಸದೇ ನಿದ್ದೆ ಮಾಡುತ್ತಿದ್ರಾ?. ನಾನು ಆಯ್ಕೆಯಾಗಿ ಬಂದ ಎರಡೇ ತಿಂಗಳಲ್ಲಿ ಪ್ರಜಾಸೌಧ ನಿರ್ಮಾಣದ ಸ್ಥಳ ಗುರುತಿಸಲು ಪ್ರಯತ್ನ ನಡೆಸಿದ್ದೇನೆ. ಸದ್ಯ ಮೈಲೇಶ್ವರ ರಸ್ತೆಯಲ್ಲಿ ಗುರುತಿಸಿರುವ ಜಾಗವನ್ನು ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. 50 ಅಡಿ ರಸ್ತೆ ಬೇಕೆಂದು ತಿಳಿಸಿದ್ದಾರೆ. ಅದಕ್ಕೆ ಜಮೀನಿನ ಮಾಲೀಕರು ಒಪ್ಪಿದ್ದಾರೆ ಎಂದು ತಿಳಿಸಿದರು.ಜಾಗ ಕೊಡಲು ಮುಂದೆ ಬಂದರೆ ಅಲ್ಲೇ ನಿರ್ಮಾಣ:

ಇವತ್ತಿಗೂ ಪ್ರಜಾಸೌಧ ಅಲ್ಲೇ ಆಗಬೇಕು ಎಂಬುವುದು ನನ್ನ ಆಸೆ ಅಲ್ಲ. ಬೇರೆಡೆ ಉಚಿತವಾಗಿ ಭೂಮಿ ಕೊಡಲು ಯಾರೇ ಮುಂದೆ ಬಂದರೂ ಅಲ್ಲಿಯೇ ಪ್ರಜಾಸೌಧ ನಿರ್ಮಾಣ ಮಾಡಲು ಸಿದ್ಧರಿದ್ದೇವೆ. ಜಾಗ ಕೊಡಲು ಮುಂದೆ ಬಂದರೆ ಈಗಲೂ ಸರ್ಕಾರದ ಗಮನಕ್ಕೆ ತಂದು ಸ್ಥಳ ಬದಲಾಯಿಸುವ ಬಗ್ಗೆ ಆಲೋಚಿಸುತ್ತೇವೆ. ಆದರೆ, ನಾಡಗೌಡರು ಪ್ರಜಾಸೌಧ ಮಾಡಲಿಲ್ಲ ಎಂಬ ಅಪವಾದಕ್ಕೆ ನಾನು ಆಸ್ಪದ ನೀಡುವುದಿಲ್ಲ ಎಂದರು.ಜಾಗ ಖರೀದಿ ತನಿಖೆಗೆ ಒತ್ತಾಯ:

ದೋಣಿ ಆಚೇಗೆ ಇರುವ 141 ಸರ್ವೇ ನಂಬರ್‌ದಲ್ಲಿ ಬರುವ ಜಾಗದಲ್ಲಿ ಪ್ರಜಾಸೌಧ ನಿರ್ಮಿಸಿದರೇ ಒಳ್ಳೆಯದೆಂದು ವಿಚಾರಿಸಿದಾಗ ಆ ಜಮೀನು ಖರೀದಿ ಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿತ್ತು. ಟೆಂಡೆನ್ಸ್ ಆಕ್ಟ್‌ನಲ್ಲಿ 2013-14 ಕ್ಲಿಯರ್ ಇಲ್ಲ ಎಂದು ತಿಳಿದು ಬಂದಿತು. ಆದರೆ, 139 ಎಕರೆಯ ಡಿ ಕ್ಲಾಸ್ ಲ್ಯಾಂಡ್ ಅನ್ನು ಲ್ಯಾಂಡ್ ರಿಫಾರ್ಮ್ ಆಕ್ಟ್ ಅಡಿ ಮಂಜೂರು ಮಾಡಲು ಬರುತ್ತದೆಯೇ? ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಇಷ್ಟೊಂದು ಜಾಗ ಹೇಗೆ ಆಗಿದೆ ಎಂಬುವುದು ನಮಗೂ ಯಕ್ಷ ಪ್ರಶ್ನೆ. ಇದು ಹೇಗೆ ಆಗಿದೆ ಎಂದು ತನಿಖೆ ಮಾಡಲು ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.ವಿರೋಧ ಸರಿಯಲ್ಲ:

ಪ್ರಭು ಮದರಕಲ್ ಹಾಗೂ ಇತರರು 2 ಎಕರೆ ಜಮೀನು ದಾನವಾಗಿ ಕೊಡುತ್ತೇವೆ ಎಂದು ಮುಂದೆ ಬಂದಿದ್ದರು. ಅದಕ್ಕೆ ವಿರೋಧ ಮಾಡುತ್ತಿರುವುದು ಸರಿಯಲ್ಲ. ಪಿಡಬ್ಲೂಡಿಯವರು ಕೊಡುವುದಿಲ್ಲ. ಕೆಇಬಿ ಅವರು ನಮಗೆ ಜಾಗ ಇಲ್ಲವೆಂದರು. ಹೀಗಾದಾಗ ನಾವು ದಾನವಾಗಿ ಕೊಡುವ ದಾನಿಗಳನ್ನು ಸಂಪರ್ಕಿಸಿ ಸರ್ಕಾರದ ನಿಯಮಗಳಂತೆ ಪ್ರಜಾಸೌಧ ನಿರ್ಮಾಣಕ್ಕೆ ಮುಂದಾಗುವ ಆಲೋಚನೆ ಮಾಡುತ್ತಿದ್ದರೇ ಇವರು ಇಲ್ಲದ ವಿಷಯಗಳನ್ನು ಜನರ ತಲೆಯಲ್ಲಿ ತುಂಬುತ್ತಿದ್ದಾರೆ. ಎಕರೆಗೆ ₹70 ಲಕ್ಷ ದಂತೆ ಮಾರಾಟವಾಗುವ ಜಾಗ ದಾನ ಮಾಡುತ್ತಿದ್ದಾರೆ. ಅದಕ್ಕೆ ವಿರೋಧಿಸುತ್ತಿರುವುದು ಹಾಸ್ಯಾಸ್ಪದ. ಡಾ.ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ಹೆರಿಗೆ ಆಸ್ಪತ್ರೆ ಕಟ್ಟಿಸುತ್ತೇನೆ. ಗಾರ್ಮೆಂಟ್ ಫ್ಯಾಕ್ಟರಿ ಕಟ್ಟುತ್ತೇನೆ ಎಂದವರು ಏನು ಮಾಡಿದ್ದಾರೆ. ನಾಲತವಾಡದಲ್ಲಿ ಬೇನಾಮಿಯಾಗಿ ಆಸ್ತಿ ಖರೀದಿಸಿ ಈಗ ಪ್ಲಾಟ್ ಮಾಡಿ ಮಾರಾಟ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ತಾಳಿಕೋಟೆ ಕಾಂಗ್ರೆಸ್ ಮುಖಂಡ ಪ್ರಭುಗೌಡ ಮದರಕಲ್, ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ್‌ ಗೊಳಸಂಗಿ, ಮುಖಂಡರಾದ ವೈ.ಎಚ್.ವಿಜಯಕರ, ಶಿವಶಂಕರಗೌಡ ಹಿರೇಗೌಡರ, ಪ್ರಭುರಾಜ ಕಲ್ಬುರ್ಗಿ, ಸಂಗನಗೌಡ ಬಿರಾದಾರ, ಸದ್ದಾಂ ಕುಂಟೋಜಿ, ಸದು ಮಠ, ಡಾ.ವಿಜಯಕುಮಾರ ಗೂಳಿ, ರಾಜು ನಾಯಕ, ಹಣಮಂತ ಭೋವಿ ಇತರರಿದ್ದರು.ಬೇನಾಯಿ ಆಸ್ತಿ ಮಾಡಿದ್ದಕ್ಕೆ ದಾಖಲೆ ತೋರಿಸಲಿ: ನಾಡಗೌಡ ಸವಾಲ್‌

₹100 ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆಂದು ಹೇಳುತ್ತಿದ್ದಾರೆ. ಚುನಾವಣೆಗಾಗಿ ಮಾಡಿದ ಸಾಲವನ್ನೇ ತೀರಿಸಲು ಆಗುತ್ತಿಲ್ಲ. ಇನ್ನೂ ಬೇನಾಮಿ ಆಸ್ತಿ ಎಲ್ಲಿಂದ ಮಾಡಲಿ. ನಾನು ಬೇನಾಮಿ ಆಸ್ತಿ ಮಾಡಿದ್ದಕ್ಕೆ ದಾಖಲೆ ತೋರಿಸಲಿ. ಮನ ಬಂದಂತೆ ಮಾತನಾಡಿದರೇ ಮಾನನಷ್ಟ ಮೊಕದ್ದಮೆ ಹಾಕುವೆ ಎಂದು ಕರ್ನಾಟಕ ಮಾರ್ಜಕ ಮತ್ತು ಸಾಬೂನು ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಖಡಕ್‌ ಎಚ್ಚರಿಕೆ ನೀಡಿದರು.ಮಾಜಿ ಶಾಸಕರು, ಪಕ್ಷದ ರೈತ ಮೋರ್ಚಾ ಅಧ್ಯಕ್ಷರೊಬ್ಬರು ಸೌಜನ್ಯದ ಭಾಷೆ ಬಳಸಿ ಮಾತನಾಡಬೇಕು. ನೀವು ಏಕವಚನದಲ್ಲಿ ಮಾತನಾಡಲು ಶುರು ಮಾಡಿದರೇ ನಮ್ಮ ಹಿಂಬಾಲಕರು ನಿಮಗೆ ಬೇರೆ ಭಾಷೆ ಬಳಸಬೇಕಾಗುತ್ತದೆ. ಜನ ನಿಮ್ಮನ್ನು ಏಳೇಳು ಜನ್ಮಕ್ಕೂ ಆಯ್ಕೆ ಮಾಡಲ್ಲ. ಸಾರ್ವಜನಿಕರ ದೇಣಿಗೆಯಿಂದ ಜಾಗ ಖರೀದಿಸುವ ಮಾತುಕತೆ ನಡೆದಾಗ ನಾನು ₹5 ಲಕ್ಷ ಕೊಡುತ್ತೇನೆಂದು ಹೇಳಿಕೆ ನೀಡಿದ್ದೆ. ನಮಗೆ ಅದೇ ದೊಡ್ಡ ಮೊತ್ತ. ಆದರೆ, ಇವರು 7 ಬಾರಿ ಶಾಸಕರಾಗಿದ್ದಾರೆ ಅವರೇ ಕೊಡಿಸಲಿ ಎಂದು ತಿಳಿಸಿದರು.