ಗ್ರ್ಯಾಮರ್‌ ಬೇಕಿದ್ದರೆ ಥಿ, ಗ್ಲ್ಯಾಮರ್‌ ಬೇಕಿದ್ದರೆ.....!

| Published : Sep 26 2025, 01:00 AM IST

ಸಾರಾಂಶ

ಮೊಬೈಲ್‌ ಪಿನ್‌ ಸಾಮಾನ್ಯವಾಗಿ ಹುಟ್ಟಿದ ದಿನಾಂಕವಾಗಿರುತ್ತದೆ. ನಿಮ್ಮ ಹುಟ್ಟಿದ ದಿನಾಂಕ ಸುಲಭವಾಗಿ ಆಧಾರ್‌ ಕಾರ್ಡ್‌ನಲ್ಲಿ ದೊರೆಯುತ್ತದೆ. ಆದ್ದರಿಂದ ಅಂತಹ ಪಿನ್‌ ಬೇಡ. ಬದಲಿಗೆ ನಿಮ್ಮ ತಾಯಿಯ ಜನ್ಮ ದಿನಾಂಕವೋ, ನಿಮ್ಮ ಪ್ರೇಯಸಿಯ ಜೊತೆ ಸಿನಿಮಾಗೆ ಹೋದ ದಿನಾಂಕವನ್ನೋ ಇಡಿ ಎಂದಾಗ ಮತ್ತೆ ಸಭೀಕರು ನಕ್ಕರು.

ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ಆನ್‌ಲೈನ್‌ನಲ್ಲಿ ತರಿಸಿದ ಶಾಂಪುವಿನಿಂದ ಕೂದಲು ಉದುರುವುದು ನಿಂತಿದೆ, ಅದಕ್ಕೆ ಸಾಕ್ಷಿಯಾಗಿ ಒಂದೇ ಕೂದಲು ನಿಂತಿದೆ. ಭಾಗೀರಥಿ ಹೇಗೆ ಬರೆಯಬೇಕು ಎಂದು ಕೇಳಿದೆ, ವೆಂಕಟಸುಬ್ಬಯ್ಯ ನೋಡೋ ಮೂರ್ತಿ, ಗ್ರ್ಯಾಮರ್ ಬೇಕಾದರೆ ಥಿ ಬರಿ, ಗ್ಲ್ಯಾಮರ್ ಬೇಕಾದರೆ ತಿ ಬರಿ ಅಂದರು.

ನಗರದ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ದಸರಾ ಕವಿಗೋಷ್ಠಿ ಉಪ ಸಮಿತಿ ಆಯೋಜಿಸಿದ್ದ ಪ್ರಜ್ವಲ ಕವಿಗೋಷ್ಠಿಯಲ್ಲಿ ತೇಲಿ ಬಂದು ನಗೆ ಬುಗ್ಗೆಗಳಿವು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಹಾಸ್ಯಕವಿ ಮತ್ತು ಸಂಭಾಷಣೆಗಾರ ಎಂ.ಎಸ್‌. ನರಸಿಂಹಮೂರ್ತಿ ಅವರು, ಮೊಬೈಲ್‌ನಿಂದಾಗುವ ಅವಾಂತರ ಮತ್ತು ಪ್ರಕರಣಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಒಮ್ಮೆ ಗೂಗಲ್‌ ಮೀಟ್‌ಮೂಲಕ ದೂರದ ಲಂಡನ್‌ನಲ್ಲಿರುವ ಕನ್ನಡಿಗರ ಜೊತೆದ ಹರಟೆ ಆಯೋಜಿಸಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಹಾಸ್ಯ ನಡೆಸಿಕೊಟ್ಟ ಲೇಖಕರಿಗೆ ಅಭಿನಂದನೆ ಎಂದ ಆಯೋಜಕರು ಫೋಟೋ ತಂದಿಟ್ಟು, ಪೇಟ ಹಾಕಿ, ಶಾಲು ಹಾಕಿ, ಹಾರ ಹಾಕಿ ಚಪ್ಪಳೆ ಹೊಡೆದರು. ಊದುಗಡ್ಡಿಯೊಂದು ಬಾಕಿ ಇತ್ತು. ಬದುಕಿರುವಾಗಲೇ ನನ್ನ ಫೋಟೋಗೆ ಹಾರ ಹಾಕಿದ್ದನ್ನು ನೋಡುವ ಸೌಭಾಗ್ಯ ನನ್ನದು ಎಂದಾಗ ಇಡೀ ಸಭಾಂಗಣದಲ್ಲಿ ನಗು ಉಕ್ಕಿ ಬಂತು.

ಮೊಬೈಲ್‌ನಲ್ಲಿಯೇ ಊದುಗಡ್ಡಿ ಅಚ್ಚಿಬಿಡಿ ಎಂದರಂತೆ. ಆಗ ಆಯೋಜಕರಿಗೆ ಅವರ ತಪ್ಪಿನ ಅರಿವಾಗಿ, ಕ್ಷಮಿಸಿ ಎಂದರಂತೆ.

ಕಾರ್ಯಕ್ರಮಕ್ಕೆ ಲಾಗಿನ್‌ ಆಗಿದ್ದ 300 ಮಂದಿಯಲ್ಲಿ 280 ಮಂದಿ ನಕ್ಕಿದ್ದಾಗೆ ಎಂದು ಅಧ್ಯಕ್ಷರು ಕರೆ ಮಾಡಿ ತಿಳಿಸಿದರಂತೆ. ಉಳಿದ 20 ಮಂದಿ ಯಾಕೆ ನಕ್ಕಿಲ್ಲ ಎಂದು ಕೇಳಿದಾಗ, ಅವರು ಲಾಗ್‌ಇನ್‌ ಆಗಿದ್ದರೂ ಬಿಡುವಿಲ್ಲ. ನಾಳೆ ನಗುತ್ತಾರೆ ಎಂದರಂತೆ. ಆಗ ಮತ್ತೂ ನಗು.

ಮೊಬೈಲ್‌ನಿಂದಾಗಿ ಸಂಸದೆಯೊಬ್ಬರ ಪತ್ನಿ 14 ಲಕ್ಷ ಕಳೆದುಕೊಂಡಿದ್ದಾರೆ. ಬಹಳ ಬೇಗ ನಿಮ್ಮನ್ನು ಮರಳು ಮಾಡುವ ದುರುಳರಿದ್ದಾರೆ. ಬಹಳ ದೊಡ್ಡ ಪೊಲೀಸ್‌ ಅಧಿಕಾರಿಯಂತೆ ಮಾತನಾಡುತ್ತಾರೆ. ನಿಮ್ಮ ಹೆಸರಿನಲ್ಲಿ ಮೋಸ ಆಗಿರುವುದರಿಂದ ನಿಮ್ಮನ್ನು ವಿಚಾರಣೆ ನಡೆಸಬೇಕು ಮತ್ತು ನಿಮ್ಮ ಖಾತೆಯನ್ನು ಪರಿಶೀಲಿಸಬೇಕು ಎಂದು ಹೇಳಿ 14 ಲಕ್ಷ ದೋಚಿದ್ದಾರೆ. ಆದ್ದರಿಂದ ನಿಮ್ಮ ಖಾತೆ, ಮೊಬೈಲ್‌ ಪಿನ್‌, ಎಟಿಎಂ ಪಿನ್‌ಗಳನ್ನು ಗೌಪ್ಯವಾಗಿಡಬೇಕು ಎಂದು ಸಲಹೆ ನೀಡಿದರು.

ಮೊಬೈಲ್‌ ಪಿನ್‌ ಸಾಮಾನ್ಯವಾಗಿ ಹುಟ್ಟಿದ ದಿನಾಂಕವಾಗಿರುತ್ತದೆ. ನಿಮ್ಮ ಹುಟ್ಟಿದ ದಿನಾಂಕ ಸುಲಭವಾಗಿ ಆಧಾರ್‌ ಕಾರ್ಡ್‌ನಲ್ಲಿ ದೊರೆಯುತ್ತದೆ. ಆದ್ದರಿಂದ ಅಂತಹ ಪಿನ್‌ ಬೇಡ. ಬದಲಿಗೆ ನಿಮ್ಮ ತಾಯಿಯ ಜನ್ಮ ದಿನಾಂಕವೋ, ನಿಮ್ಮ ಪ್ರೇಯಸಿಯ ಜೊತೆ ಸಿನಿಮಾಗೆ ಹೋದ ದಿನಾಂಕವನ್ನೋ ಇಡಿ ಎಂದಾಗ ಮತ್ತೆ ಸಭೀಕರು ನಕ್ಕರು.

ಪಿನ್‌ ಹೇಗಿರಬೇಕೆಂದರೆ ನೀವು ಹಾಕುವ ಒಳ ಉಡುಪಿನಂತಿರಬೇಕು, ಯಾರಿಗೂ ತೋರಿಸದಂತಿರಬೇಕು, ಯಾರೊಂದಿಗೂ ಹಂಚಿಕೊಳ್ಳದಂತಿರಬೇಕು ಎಂದಾಗ ಮತ್ತೂ ನಗು.

ಸರಿಯಾದ ಸಂವಹನ ಇಲ್ಲದಿದ್ದರೆ ಯಾರೂ ನಮ್ಮನ್ನು ಮೋಸಗೊಳಿಸಲು ಸಾಧ್ಯವಿಲ್ಲ. ಅಂತಹ ಕರೆಗಳು ಬಂದಾಗ ನೀನೀ ನೀನೀ ಎಂಬ ಮಂತ್ರ ಜಪಿಸಿ. ಅದರ ಅರ್ಥ ನೀ ಮೆಟ್ಟುವ ನೆಲ ಅದೇ ಕರ್ನಾಟಕ, ನೀ ನೇರುವ ಮಲೆ ಸಹ್ಯಾದ್ರಿ, ನೀ ಮುಟ್ಟುವ ಮರ ಶ್ರೀಗಂಧದ ಮರ ನೀ ಕುಡಿಯುವ ನೀರ್‌ ಕಾವೇರಿ. ಅವನು ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸುತ್ತ ಹೋದರೆ ಅವನೇ ಗೊಂದಲಕ್ಕೆ ಒಳಗಾಗಿ ಫೋನ್‌ಸಂಪರ್ಕ ಕಡಿತವಾಗುತ್ತದೆ. ಇದು ಪ್ರಾಯೋಗಿಕವಾಗಿ ಯಶಸ್ವಿಯೂ ಆಗಿದೆ ಎಂದರು.

ಮೊಬೈಲ್‌ನ ಅವಂತಾರಗಳಿಂದ ತಪ್ಪಿಸಿಕೊಳ್ಳಲು ಮೊದಲು ಸಿಕ್ಕಿದ್ದನ್ನೆಲ್ಲ ಒತ್ತಬೇಡಿ. ನಿಮ್ಮದನ್ನು ನೀವು ಒತ್ತಿಕೊಳ್ಳಿ ಎಂದಾಗ ನಗು ಬಂತು, ಅಯ್ಯೋ ಲಿಂಕನ್ನ ಎಂದರು.

ಬಳಿಕ ನಡೆದ ಕವಿಗೋಷ್ಠಿಯಲ್ಲಿ ಕೆ. ಶಿವಶಂಕರ್‌ ಕಳಸ್ತವಾಡಿ ಅವರು ತಮ್ಮ ಕವನ ವಾಚಿಸುತ್ತ, ಮೊಬೈಲ್‌ಮೂಲಕ ಆನ್‌ಲೈನ್‌ನಲ್ಲಿ ಮಾಡಿದ ಶ್ಯಾಂಪು ಚೆನ್ನಾಗಿ ಇತ್ತು, ಶಾಂಪುವಿನಿಂದ ಕೂದಲು ಉದುರುವುದು ನಿಂತಿದೆ, ಅದಕ್ಕೆ ಸಾಕ್ಷಿಯಾಗಿ ಒಂದೇ ಕೂದಲು ನಿಂತಿದೆ ಎಂದಾಗ ನಗು ಉಕ್ಕಿ ಬಂತು.

ಸಿ. ಲಕ್ಷ್ಮೀನಾರಾಯಣ ಮಾಲೂರು ಅಕ್ರಮ ಸಕ್ರಮದ ಕುರಿತು ಕಾವ್ಯ ವಾಚಿಸಿದರು. ಕೋಲಾರ ಜಿಲ್ಲಾ ಕಾಂಗ್ರೆಸ್‌ಅಧ್ಯಕ್ಷರೂ ಆದ ಲಕ್ಷ್ಮೀನಾರಾಯಣ ಅವರ ಪತ್ನಿ ಮಾಲೂರು ನಗರಸಭೆ ಅಧ್ಯಕ್ಷರು. ಅವರೂ ಬಂದಿದ್ದಾರೆ ಎದ್ದು ನಿಲ್ಲಿಯಮ್ಮ ಎಂದು ನರಸಿಂಹಮೂರ್ತಿ ಹೇಳಿದರು.

ಎದ್ದೇಳುವುದು ತಡವಾಯಿತು. ನರಸಿಂಹಮೂರ್ತಿ ಅವರು ಅವಕಾಶ ಬಿಡುತ್ತಾರೆಯೇ, ಯಾರೋ ಒಬ್ಬರು ಎದ್ದಿ ನಿಲ್ಲಿ ಎಂದರು.

ಕವಿ ಎನ್‌. ಶರಣಪ್ಪ ಮೆಟ್ರಿ ವಚನದ ಮೂಲಕ ಬರೆದ ಕವನ ವಾಚಿಸಿದರು. ತುಂಬಾ ಜನಸಂದಣಿಯಿಂದ ಕೂಡಿದ್ದ ಬಸ್ಸಿನಲ್ಲಿ ಹಿರಿಯರೊಬ್ಬರು ಇದ್ದರಂತೆ, ಅವರು ಸೀಟಿಗಾಗಿ ದಯವೇ ಧರ್ಮದ ಮೂಲವಯ್ಯ ಎಂದರಂತೆ. ಸೀಟಿನಲ್ಲಿ ಕುಳಿತಿದ್ದ ಯುವಕ, ಪರರ ಚಿಂತೆ ನಮಗೇಕಯ್ಯ ಎಂದನಂತೆ.

ಉಳಿದಂತೆ ಅರವಳಿಕೆ ತಜ್ಞ ಗೋವಿಂದ ಹೆಗಡೆ, ಎಲ್‌. ಗಿರಿಜಾ ರಾಜ್‌, ಮಹಂತೇಶ ಮಾಗನೂರ, ಮುರಳಿ ಎಸ್‌. ಪತಂಗಿ, ವೆಂಕಟೇಶ ಬಾಗಿ, ಹರೀಶ್‌ನಾಯಕ್‌, ಬೆಂ.ಶ್ರೀ. ರವೀಂದ್ರ ಮೊದಲಾದವರು ಕವನ ವಾಚಿಸಿದರು.