ಭೂಮಿ ಬಿಡುವುದಾದರೇ ಮೊದಲು ಒಂದು ತೊಟ್ಟು ವಿಷ ಕೊಡಿ. ನಂತರ ನಮ್ಮನ್ನು ಒಕ್ಕಲೆಬ್ಬಿಸಲಿ ಎಂದು ಕ್ಯಾದಗಿ ವಲಯದ ಇಟಗಿ ಶಾಖೆಯ ಸುತ್ತಲಮನೆ ಗ್ರಾಮದ ಗಾಲಮಾಂವ್ ಅರಣ್ಯವಾಸಿ ಲಿಂಗ ಪುಟ್ಟ ನಾಯ್ಕ ಮತ್ತು ಪತ್ನಿ ಲೀಲಾವತಿ ಲಿಂಗ ನಾಯ್ಕ ಕಣ್ಣೀರು ಸುರಿಸುತ್ತಾರೆ.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಭೂಮಿ ಬಿಡುವುದಾದರೇ ಮೊದಲು ಒಂದು ತೊಟ್ಟು ವಿಷ ಕೊಡಿ. ನಂತರ ನಮ್ಮನ್ನು ಒಕ್ಕಲೆಬ್ಬಿಸಲಿ ಎಂದು ಕ್ಯಾದಗಿ ವಲಯದ ಇಟಗಿ ಶಾಖೆಯ ಸುತ್ತಲಮನೆ ಗ್ರಾಮದ ಗಾಲಮಾಂವ್ ಅರಣ್ಯವಾಸಿ ಲಿಂಗ ಪುಟ್ಟ ನಾಯ್ಕ ಮತ್ತು ಪತ್ನಿ ಲೀಲಾವತಿ ಲಿಂಗ ನಾಯ್ಕ ಕಣ್ಣೀರು ಸುರಿಸುತ್ತಾರೆ.ಈ ದಂಪತಿ ಸಾಗುವಳಿ ಮಾಡುತ್ತಿರುವ ಅರಣ್ಯ ಅತಿಕ್ರಮಣ ಕ್ಷೇತ್ರಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಜಿಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಅವರ ನೇತೃತ್ವದ ನಿಯೋಗ ಭೇಟಿ ನೀಡಿದ ಸಂದರ್ಭ ಅವರು ತಮ್ಮ ಅಳಲು ತೋಡಿಕೊಂಡರು.
ತಾಲೂಕಿನ ವಾಜಗೋಡ ಗ್ರಾಪಂ ವ್ಯಾಪ್ತಿಯ ಸುತ್ತಲು ಮನೆ ಗ್ರಾಮದ ಅರಣ್ಯ ಸರ್ವೆ ನಂ. ೬೪ರಲ್ಲಿ ಲಿಂಗ ಪುಟ್ಟ ನಾಯ್ಕ ಗಾಲಮಾಂವ್ ಅವರು ಅರಣ್ಯ ಭೂಮಿ ಸ್ವಾದೀನ ಮಾಡಿರುವ ಮೂರು ಎಕರೆ ಹದಿನಾಲ್ಕು ಗುಂಟೆ ಪ್ರದೇಶವನ್ನು ಅರಣ್ಯ ಕಾಯಿದೆ ಅಡಿಯಲ್ಲಿ ಒಕ್ಕಲೆಬ್ಬಿಸಲು ಸ್ಥಳೀಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆನರಾ ವೃತ್ತ ಶಿರಸಿಯವರ ಪ್ರಾಧಿಕಾರದಲ್ಲಿ ೨೦೧೨ರಲ್ಲಿ ಅಂತಿಮ ಆದೇಶವಾಗಿದೆ. ಆದರೆ, ಅನಕ್ಷರಸ್ಥ ಕುಟುಂಬ ೧೯೭೮ರ ಪೂರ್ವದ ಸಾಗುವಳಿ ಮತ್ತು ಗಿಡ ಮರಗಳಿದ್ದಾಗಲೂ ಮಂಜೂರಿ ಪ್ರಕ್ರಿಯೆಯಿಂದ ವಂಚಿತವಾಗಿದೆ.ವಲಯ ಅರಣ್ಯಾಧಿಕಾರಿ ಕಚೇರಿ ಕ್ಯಾದಗಿ ವಲಯದವರು ಡಿ. ೨೦ರಂದು ನೋಟಿಸ್ ಹೊರಡಿಸಿದ ದಿನದಿಂದ ವಾರದ ಒಳಗೆ ಬೆಳೆದಂತ ೫೦ರಿಂದ ೬೦ ವರ್ಷ ಬೆಳೆದಂತ ಅಡಕೆ ಹಾಗೂ ಇನ್ನಿತರ ಬಾಳೆ, ಮನೆ ಸ್ವತ್ತುಗಳನ್ನು ಸ್ವಇಚ್ಚೆಯಿಂದ ಸ್ವಂತ ಖರ್ಚಿನಲ್ಲಿ ತೆರವು ಮಾಡಲು ಆದೇಶ ನೀಡಿರುವುದು ಕುಟುಂಬವು ಅತಂತ್ರವಾಗುವ ಸ್ಥಿತಿಗೆ ಬಂದಂತಾಗಿದೆ ಎಂದು ನಿಯೋಗವು ಅಭಿಪ್ರಾಯ ವ್ಯಕ್ತಪಡಿಸಿತ್ತು.
ನಿಯೋಗದಲ್ಲಿ ಜಿಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ರಾಮಚಂದ್ರ ನಾಯ್ಕ ತ್ಯಾಗಲಿಮನೆ, ಕೆ.ಬಿ. ನಾಯ್ಕ ಸುತ್ತಮನೆ, ನಾರಾಯಣ ನಾಯ್ಕ ಗಾಳು ಮನೆ, ರಾಮಚಂದ್ರ ನಾಯ್ಕ ಮುಂಡಗೇತಗ್ಗು, ರವಿ ನಾಯ್ಕ , ಗೋವಿಂದ ಗೌಡ ಕಿಲವಳ್ಳೀ, ಗಣಪತಿ ಗೌಡ ಮಕ್ಕಿಗದ್ದೆ ಮುಂತಾದವರಿದ್ದರು.ಅರಣ್ಯ ಭೂಮಿ ಸಾಗುವಳಿ ವಂಚಿತವಾಗುವ ಲಿಂಗ ಪುಟ್ಟ ನಾಯ್ಕ ಕುಟುಂಬಕ್ಕೆ ಹೋರಾಟಗಾರರ ವೇದಿಕೆ ಸಂಪೂರ್ಣ ಕಾನೂನು ನೆರವು ನೀಡಲಿದೆ ಎಂದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.