ಸಾರಾಂಶ
ಕುಮಟಾ: ಬಡಜನರ ಉದ್ಧಾರಕ್ಕಾಗಿಯೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭಗೊಂಡಿದ್ದು, ಜನಸಾಮಾನ್ಯರ, ಮಹಿಳೆಯರ ಅಭಿವೃದ್ಧಿ ಕಾರ್ಯಕ್ರಮಗಳೇ ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೂರಜ ನಾಯ್ಕ ತಿಳಿಸಿದರು. ಮಂಗಳವಾರ ತಾಲೂಕಿನ ಮಾದನಗೇರಿಯ ಮಹಾಲಸಾ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಮತ್ತು ಆಶ್ರಯ ಫೌಂಡೇಶನ್ ಆಶ್ರಯದಲ್ಲಿ ೮ ದಿನಗಳ ಕಾಲ ನಡೆಯುವ ೧೮೪೬ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಂತಹ ಸಮಾಜಮುಖಿ ಕಾರ್ಯಗಳಿಂದಲೇ ಗುರುತಿಸಿಕೊಂಡು ರಾಜ್ಯದ ಮನೆಮಾತಾಗಿರುವ ಗ್ರಾಮಾಭಿವೃದ್ಧಿ ಯೋಜನೆಯ ಪ್ರಯೋಜನವನ್ನು ಹೆಚ್ಚು ಪಡೆದುಕೊಳ್ಳಬೇಕು. ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡ ಫಲಾನುಭವಿಗಳು ವ್ಯಸನಮುಕ್ತರಾಗಿ ಬದುಕನ್ನು ಹಸನುಗೊಳಿಸಿಕೊಳ್ಳಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ ನಾಯ್ಕ ವಹಿಸಿದ್ದರು. ಕಾಂಗ್ರೆಸ್ ಮಾಜಿ ಬ್ಲಾಕ್ ಅಧ್ಯಕ್ಷ ಹೊನ್ನಪ್ಪ ನಾಯಕ, ಗೋಕರ್ಣ ಪಿಎಸ್‌ಐ ವಸಂತ ಆಚಾರ್ಯ, ಪಂಚಾಯಿತಿ ಅಧ್ಯಕ್ಷ ಆನಂದ ಎನ್. ಕವರಿ, ಸದಸ್ಯ ಸತೀಶ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ವಾಸುದೇವ ನಾಯಕ, ಕೋಶಾಧಿಕಾರಿ ರಮೇಶ, ಗ್ರಾಮಾಭಿವೃದ್ಧಿ ಯೋಜನಾ ನಿರ್ದೇಶಕ ಮಹೇಶ ಎಂ.ಡಿ., ತಾಲೂಕು ಯೋಜನಾಧಿಕಾರಿ ಕಲ್ಮೇಶ ಎಂ., ಮೇಲ್ವಿಚಾರಕರಾದ ಮಾದೇವ, ಗುರುರಾಜ ಇತರರು ಇದ್ದರು. ಮದ್ಯವರ್ಜನ ಶಿಬಿರದಲ್ಲಿ ೬೦ಕ್ಕೂ ಹೆಚ್ಚು ಮಂದಿ ಶಿಬಿರಾರ್ಥಿಗಳಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ.