ಸಾರಾಂಶ
ಭಾರತೀಯ ಅರಣ್ಯ ಇಲಾಖೆ ವಿಭಾಗದಲ್ಲಿ 143ನೇ ರ್‍ಯಾಂಕ್
ಕನ್ನಡಪ್ರಭ ವಾರ್ತೆ ಸಿರಿಗೆರೆ
ಭರಮಸಾಗರ ಸಮೀಪದ ಕೋಗುಂಡೆ ಗ್ರಾಮದ ಹಳ್ಳಿ ಹುಡುಗ ಕೆ.ಎಲ್.ಸಚಿನ್‌ಗೆ ಐಎಫ್ಎಸ್ ಭಾಗ್ಯ ಒಲಿದು ಬಂದಿದೆ. ಯುಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಸರಣ್ಯ ಭಾರತೀಯ ಅರಣ್ಯ ಇಲಾಖೆಯ ವಿಭಾಗದಲ್ಲಿ 143ನೇ ರ್‍ಯಾಂಕ್ ಗಳಿಸಿದ್ದಾರೆ.ಸೋಮವಾರ ಸಂಜೆ ಐಎಫ್‌ಎಸ್ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು ಸಚಿನ್ (ರಿ.ನಂ.7305613) ಅವರು ರಾಷ್ಟ್ರಮಟ್ಟದಲ್ಲಿ 143ನೇ ಸ್ಥಾನ ಗಳಿಸಿದ್ದಾರೆ.
ಐಎಎಸ್ ಕನಸು ಕಂಡಿದ್ದ ಸಚಿನ್ ಯುಪಿಎಸ್‌ಸಿ ಸ್ಪರ್ಧಾತ್ಮಕ ಮುಖ್ಯ ಪರೀಕ್ಷೆಯ ನಂತರ ಐಎಎಸ್ ಸಂದರ್ಶನಕ್ಕೂ ಹಾಜರಾಗಿದ್ದರು.ಸಚಿನ್ ಮೂಲತಃ ವ್ಯವಸಾಯ ಕುಟುಂಬದವಾಗಿದ್ದು, ತಂದೆ ಎಚ್.ಸಿ.ಲೋಕೇಶ್ ಕೃಷಿ ಅವಲಂಬಿತರಾಗಿದ್ದರೆ ತಾಯಿ ಆರ್.ಎಚ್.ಪುಷ್ಪ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಭರಮಸಾಗರದ ಡಿ.ವಿ.ಎಸ್.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ದಾವಣಗೆರೆಯ ಅನುಭವ ಮಂಟಪದಲ್ಲಿ ಪ್ರೌಢಶಿಕ್ಷಣ ಮುಗಿಸಿದರು. ಬೆಂಗಳೂರಿನಲ್ಲಿ ಪಿಯು ಶಿಕ್ಷಣ ಮುಗಿಸಿದ್ದರು.ಸುರತ್ಕಲ್‌ನ್ ಎನ್‌ಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಪದವೀದರರಾಗಿರುವ ಸಚಿನ್ ವೃತ್ತಿಪರವಾದ ಯಾವುದೇ ತರಬೇತಿ ಸಂಸ್ಥೆಯಲ್ಲಿ ದಾಖಲಾಗದೆ ತಮ್ಮ ಸ್ವಂತ ಪರಿಶ್ರಮದಿಂದ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಸಚಿನ್, ಐಎಎಸ್ ಮಾಡುವ ಗುರಿ ಇಟ್ಟುಕೊಂಡಿದ್ದೇನೆ. ಅದನ್ನು ಸಾಧಿಸುತ್ತೇನೆ ಎಂದು ಹೇಳಿದರು.