ಕೊಪ್ಪಳ: ಜಿಲ್ಲಾ ಪೊಲೀಸ್ ವತಿಯಿಂದ ಸೋಮವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಮತ್ತು ಪೊಲೀಸ್ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜರುಗಿತು.

ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ. ಪಿ.ಎಸ್. ಹರ್ಷ ಮಾತನಾಡಿ, 2025 ಮತ್ತು 2026ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ ದಾಖಲಾಗಿದ್ದ ಕಳ್ಳತನ, ದರೋಡೆಯಂತಹ ಸ್ವತ್ತಿನ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ತಂಡ ತೋರಿದ ದಕ್ಷತೆ ಮತ್ತು ತಾಂತ್ರಿಕ ಕೌಶಲ್ಯವನ್ನು ಶ್ಲಾಘಿಸಿದರು. ವಾರಸುದಾರರಿಗೆ ವಾಹನಗಳು, ಬಂಗಾರ ಮತ್ತು ಬೆಳ್ಳಿಯ ಒಡವೆಗಳು, ಮೊಬೈಲ್ ಪೋನ್ ಹಾಗೂ ನಗದು ಹಣ ಮತ್ತಿತರ ಸ್ವತ್ತುಗಳನ್ನು ಹಿಂದಿರುಗಿಸಲಾಗಿದೆ ಎಂದರು.

ಬಳಿಕ ಎಸ್.ಎಸ್.ಎಲ್.ಸಿ‌. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕ್ಕೂ ಅಧಿಕ ಅಂಕಗಳನ್ನು ಪಡೆದ ಪೊಲೀಸ್ ಕುಟುಂಬದ ಸುಮಾರು 53 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಪ್ರೋತ್ಸಾಹಿಸಿದರು.

ಜಿಲ್ಲೆಯಲ್ಲಿ ಸ್ವತ್ತು ಕಳುವಾದ 252 ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 104 ಪ್ರಕರಣಗಳನ್ನು ಪತ್ತೆ ಮಾಡಿ ಕಳುವಾದ ಮಾಲಿನ ಪೈಕಿ ಒಟ್ಟು ₹1,82,45,960 ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ ಎಂದರು.

ಸೈಬರ್ ಅಪರಾಧಗಳಲ್ಲಿ ಪತ್ತೆಯಾದ ₹33,49,662, ಸಿ.ಇ.ಐ.ಆರ್. ಪೋರ್ಟಲ್ ಮೂಲಕ ಪತ್ತೆ ಹಚ್ಚಲಾದ 1905 ಮೊಬೈಲ್‌ಗಳು, 988.960 ಗ್ರಾಂ ಚಿನ್ನದ ಆಭರಣಗಳು, 10 ಕೆಜಿ ಬೆಳ್ಳಿ ಆಭರಣಗಳು, ₹43,33,830 ನಗದು, 6 ನಾಲ್ಕು ಚಕ್ರ ವಾಹನಗಳು, 3 ತ್ರಿಚಕ್ರ ವಾಹನಗಳು ಹಾಗೂ 34 ದ್ವಿಚಕ್ರ ವಾಹನಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದರು.


ಅಪರಾಧ ತಡೆಗೆ ಕಟ್ಟುನಿಟ್ಟಿನ ಕ್ರಮ: ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ರಾತ್ರಿ ಗಸ್ತು ಚುರುಕುಗೊಳಿಸುವುದು, ಸಿಸಿ ಕ್ಯಾಮೆರಾಗಳ ಅಳವಡಿಕೆ ಹಾಗೂ ಹಳೇ ಅಪರಾಧಿಗಳ ಮೇಲೆ ತೀವ್ರ ನಿಗಾ ಇಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮಾದಕ ವಸ್ತುಗಳ ವಿರುದ್ಧ ಸಮರ "ಆಪರೇಷನ್ ರೈಸ್ ಮತ್ತು ಬೇಡ ಬ್ರೋ " ಎಂಬ ಧ್ಯೇಯವಾಕ್ಯದೊಂದಿಗೆ ರಾಜ್ಯ ಸರ್ಕಾರದ ಆದೇಶದಂತೆ ನಶೆ ಮುಕ್ತ ಕರ್ನಾಟಕದ ಅಭಿಯಾನವನ್ನು ರಾಜ್ಯದ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದು, ಯುವ ಜನತೆಗೆ ಮಾದಕ ವ್ಯಸನದ ದುಷ್ಪರಿಣಾಮದ‌ ಅರಿವು ಮೂಡಿಸಲಾಗುತ್ತಿದೆ‌ ಎಂದರು.

ಮೊಬೈಲ್ ಪೊರೆನ್ಸಿಕ್ ಲ್ಯಾಬ್ ವಾಹನಕ್ಕೆ ಚಾಲನೆ: ಮೊಬೈಲ್ ಫೊರೆನ್ಸಿಕ್ ಲ್ಯಾಬ್ ಕೊಪ್ಪಳ ಜಿಲ್ಲಾ ಪೊಲೀಸ್ ವಾಹನಕ್ಕೆ ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕರು ಹಸಿರು ನಿಶಾನೆ ತೋರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಮಾತನಾಡಿ, 2025 ಜ. 1ರಿಂದ 2026 ಜೂ. 30ರ ವರೆಗೆ ಪತ್ತೆ ಮಾಡಿದ ಸ್ವತ್ತುಗಳನ್ನು ಮರಳಿಸಲಾಗಿದೆ ಎಂದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತ್ ಕುಮಾರ್, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಗಂಗಾವತಿ ಡಿವೈಎಸ್ಪಿ ಜೆ‌. ನ್ಯಾಮನಗೌಡರ, ಸೈಬರ್ ವಿಭಾಗದ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ಡಿಎಆರ್ ಡಿವೈಎಸ್ಪಿ ಶಶಿಧರಯ್ಯ ಹಿರೇಮಠ ಇದ್ದರು. ಕೆ.ಎಚ್. ಕಳಕಬಂಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.