ಜಿಎಂ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯಮಟ್ಟದ ತಾಂತ್ರಿಕ ಮಹೋತ್ಸವ ಇಗ್ನಿಟ್ರಾನ್ 2ಕೆ25 ಗುರುವಾರ ಅದ್ಧೂರಿಯಾಗಿ ವಿಶೇಷತೆಗಳೊಂದಿಗೆ ಶುಭಾರಂಭವಾಯಿತು.

ದಾವಣಗೆರೆ: ಜಿಎಂ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯಮಟ್ಟದ ತಾಂತ್ರಿಕ ಮಹೋತ್ಸವ ಇಗ್ನಿಟ್ರಾನ್ 2ಕೆ25 ಗುರುವಾರ ಅದ್ಧೂರಿಯಾಗಿ ವಿಶೇಷತೆಗಳೊಂದಿಗೆ ಶುಭಾರಂಭವಾಯಿತು.ಹೊಸತನ್ನು ಹುಡುಕುವ ಸೃಜನಶೀಲ ಮನಸ್ಸುಗಳಿಗೆ ಅವಕಾಶಗಳನ್ನು ಒದಗಿಸುವ ಸಜೀವ ವೇದಿಕೆಯಾಗಿರುವ ಈ ಭವ್ಯ ತಾಂತ್ರಿಕ ಉತ್ಸವವನ್ನು ಹ್ಯೂಮನಟಿಕ್ಸ್ ಸಂಸ್ಥೆಯ ಲೀಡ್ ಸಿಎಇ ಎಂಜಿನಿಯರ್ ಜಿ.ಎಂ.ರೇಣುಕ ಪ್ರಸಾದ್ ಬಲೂನ್ ಹಾರಿ ಬಿಡುವ ಮೂಲಕ ಉದ್ಘಾಟಿಸಿದರು.ಜಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಆರ್.ಶಂಕಪಾಲ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಪಕುಲಪತಿ ಡಾ.ಎಚ್.ಡಿ.ಮಹೇಶಪ್ಪ, ಕುಲಸಚಿವ ಡಾ.ಬಿ.ಎಸ್.ಸುನೀಲ್ ಕುಮಾರ, ವಿದ್ಯಾರ್ಥಿಗಳ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕ ಡಾ.ಎಚ್.ಎಸ್.ಕಿರಣ್ ಕುಮಾರ್, ಅಸಿಸ್ಟೆಂಟ್ ಡೈರೆಕ್ಟರ್ ಇಮ್ರಾನ್ ಖಾನ್ ಉಪಸ್ಥಿತರಿದ್ದರು.

ವಿಶೇಷವೆಂದರೆ ಜಿಎಂಯು ರೋಬೋಟಿಕ್ಸ್ ಅಂಡ್ ಆಟೋಮೇಶನ್ ವಿದ್ಯಾರ್ಥಿಗಳು ಸಿದ್ಧಪಡಿಸಿದ "ರೋಬೋ ಮಿತ್ರ " ಹೆಸರಿನ ರೋಬೋಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿ ಗಣ್ಯರಿಗೆ ಹೂವಿನ ಬೊಕ್ಕೆ ನೀಡಿ ಸ್ವಾಗತಿಸಿದ್ದು ಎಲ್ಲರ ಗಮನ ಸೆಳೆಯಿತು. ''''''''ಆರಂಭ'''''''' ಹೆಸರಿನ ರೋಬೋಟ್ ಇಗ್ನಿಟ್ರಾನ್ 2ಕೆ25 ಕಾರ್ಯಕ್ರಮವನ್ನು ಪ್ರತಿಬಿಂಬಿಸಿತು. ಇಸಿಇ ವಿಭಾಗದ ವಿದ್ಯಾರ್ಥಿ ಸಮರ್ಥ ಗೌಡ ಮತ್ತು ತಂಡದ ರೋಬೋ ನೃತ್ಯ ಆಕರ್ಷಿಸಿತು.

ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಗಣೇಶ ಜಿ.ಟಿಲ್ವೆ ಕಾರ್ಯಕ್ರಮ ನಿರೂಪಿಸಿದರು.

ಡಿ.ತೇಜಸ್ವಿನಿ(ಇಸಿಇ) ಸ್ವಾಗತಿಸಿದರು. ಎಸ್.ಪಿ.ಕೌಶಿಕ್(ಬಿಟಿ) ಅತಿಥಿಗಳ ಪರಿಚಯ ಮಾಡಿದರೆ, ಯಶವಂತ್ ವಿಎಸ್ ದೇವಾಂಗ್ (ಎಐಎಂಎಲ್) ವಂದಿಸಿದರು.

ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ವಿಭಾಗದಿಂದ ಆಯೋಜಿಸಲಾದ ಇಗ್ನಿಟ್ರಾನ್ 2ಕೆ25 ಮಹೋತ್ಸವದಲ್ಲಿ 23 ಸ್ಪರ್ಧೆಗಳು, 3 ಲಕ್ಷ ರು.ಗಳ ವಿಸ್ತೃತ ಪ್ರಶಸ್ತಿ ನಿಧಿ ಮತ್ತು ದೇಶದಾದ್ಯಂತದಿಂದ ಬಂದ 2000ಕ್ಕೂ ಹೆಚ್ಚು ನೋಂದಣಿಗಳೊಂದಿಗೆ ಇದು ಗುರುತಿಸಿಕೊಂಡಿದೆ. ಮೂರು ದಿನಗಳ ಈ ಉತ್ಸವ ತಂತ್ರಜ್ಞಾನ, ಕ್ರಿಯೇಟಿವಿಟಿ ಮತ್ತು ಸ್ಪರ್ಧಾತ್ಮಕತೆಯ ಸಂಯೋಜನೆಯೊಂದಿಗೆ ಸಾಗುತ್ತದೆ. ಮೊದಲ ದಿನ ಆಟೋ ಎಕ್ಸ್ಪೋ, ಬ್ಯಾನರ್ ಡ್ರಾಪ್, ಫ್ಲ್ಯಾಶ್ ಮೊಬ್ ಕಾರ್ಯಕ್ರಮಗಳಿಂದ ಆರಂಭಗೊಂಡು ಕ್ಯಾಂಪಸ್‌ಗೆ ಹೊಸ ಚೈತನ್ಯವನ್ನು ತುಂಬಲಿದೆ. ವಿಶೇಷವಾಗಿ, ಪ್ರೀಮಿಯಂ ಕಾರುಗಳು ಮತ್ತು ಆಧುನಿಕ ಆಟೋಮೋಟಿವ್ ತಂತ್ರಜ್ಞಾನಗಳ ಪ್ರದರ್ಶನದೊಂದಿಗೆ ನಡೆಯುವ ಆಟೋ ಎಕ್ಸ್ಪೋ ದಾವಣಗೆರೆಯ ಅತಿದೊಡ್ಡ ತಾಂತ್ರಿಕ ಪ್ರದರ್ಶನವಾಯಿತು.24 ಗಂಟೆಗಳ ಕೋಡ್ ರಶ್ ಹ್ಯಾಕಥಾನ್ ಗೆ 300ಕ್ಕೂ ಹೆಚ್ಚು ಐಡಿಯಾಗಳು ಸಲ್ಲಿಕೆಯಾಗಿದ್ದವು. 80 ತಂಡಗಳು ಆಫ್‌ಲೈನ್ ಸುತ್ತಿಗೆ ಆಯ್ಕೆಯಾಗಿದ್ದವು. ಹಾಗೆಯೇ ಮಾಡೆಲ್ ಕ್ವೆಸ್ಟ್, ಸಿಟಿಎಫ್‌, ರೋಬೊ ರೇಸ್‌, ಟೆಕ್ ಥೀಸಿಸ್, ನೆಕ್ಸ್ಟ್‌ವೇ ಪೇಪರ್ ಪ್ರೆಸೆಂಟೇಷನ್, ಇಗ್ನಿಟ್ಸ್ ಡಿಬೇಟ, ಮಾರ್ಕೆಟ್ ಮಾವೆರಿಕ್ಸ್ ಹಾಗೂ ಮೂಟ್ ಕೋರ್ಟ್ ಸ್ಪರ್ಧೆಯ ಪ್ರಾರಂಭಿಕ ಹಂತಗಳು ನಡೆದವು. ಸಂಜೆ ಸಮಯದಲ್ಲಿ ಗೇಮಿಂಗ್ ಅಭಿಮಾನಿಗಳನ್ನು ಒಂದೆಡೆ ಸೇರಿಸುವ ಎ-ಸ್ಪೋರ್ಟ್ಸ್ ನೈಟ್ ಉತ್ಸಾಹಭರಿತ ವಾತಾವರಣವನ್ನು ಸೃಷ್ಟಿಸಿತ್ತು.

ಯುವಕರ ಹುಚ್ಚಾಟ: ವಿಂಟೇಜ್

ಕಾರು ಎಕ್ಸಪೋ ರದ್ದು

ದಾವಣಗೆರೆ: ಯುವಕರ ಹುಚ್ಚಾಟದಿಂದ ಬಹು ನಿರೀಕ್ಷೆಯಿಂದ ಹಮ್ಮಿಕೊಂಡಿದ್ದ ವಿಂಟೇಜ್ ಕಾರುಗಳ ಎಕ್ಸ್‌ಪೋವನ್ನು ರದ್ದುಪಡಿಸಿದ ಘಟನೆ ನಗರದ ಜಿಎಂ ವಿಶ್ವ ವಿದ್ಯಾನಿಲಯದಲ್ಲಿ ಗುರುವಾರ ವರದಿಯಾಗಿದೆ.

ನಗರದ ಜಿಎಂ ವಿವಿ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿದ್ದ ವಿಂಟೇಜ್ ಕಾರುಗಳ ಎಕ್ಸ್‌ಪೋದಲ್ಲಿ ಯುವಜನರ ಹುಚ್ಛಾಟವನ್ನು ನೋಡಿ ರೋಸಿ ಹೋದ ಕಾಲೇಜು ಆಡಳಿತ ಮಂಡಳಿ, ಸಂಘಟಕರು ವಿಂಟೇಜ್ ಕಾರುಗಳ ಎಕ್ಸಪೋವನ್ನೇ ರದ್ದುಪಡಿಸಿದರು.

ಜಿಎಂ ವಿವಿ ಕ್ಯಾಂಪಸ್‌ನಲ್ಲಿ ಗುರುವಾರದಿಂದ ಮೂರು ದಿನಗಳ ಕಾಲ ನಡೆಯಬೇಕಾಗಿದ್ದ ವಿಂಟೇಜ್ ಕಾರುಗಳ ಎಕ್ಸ್‌ಪೋ ಸ್ಪರ್ಧೆಗೆ ಆಹ್ವಾನವೇ ಇಲ್ಲದಿದ್ದರೂ ಬೈಕ್‌, ಕಾರುಗಳ ಸಮೇತ ಅನೇಕ ಯುವಕರು ಆಗಮಿಸಿದ್ದರು. ಅಲ್ಲದೇ, ಬೈಕು, ಕಾರುಗಳ ಮಾಡಿಫೈ ಮಾಡಿದ್ದ ಕರ್ಕಶ ಧ್ವನಿ ಹೊರ ಹೊಮ್ಮಿಸುತ್ತಿದ್ದ ಸೈಲೆನ್ಸರ್ ನ ಸದ್ದುಗಳು ಅಲ್ಲಿದ್ದವರಿಗೂ ಮುಜುಗರವನ್ನುಂಟುಮಾಡುವಂತಿತ್ತು. ಅಂತಿಮವಾಗಿ ವಿಂಟೇಜ್ ಕಾರುಗಳ ಎಕ್ಸಪೋವನ್ನು ರದ್ದುಪಡಿಸಿದ್ದರಿಂದ ಹಳೆ ಸ್ಕೂಟರ್, ಕಾರುಗಳ ಸಮೇತ ಬಂದಿದ್ದವರು ನಿರಾಸೆಯಾದರು.