ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಪ್ರತಿದಿನ ಸಂತ ಶರಣರ ಹಾಗೂ ಪೂಜ್ಯರ ಪ್ರವಚನ ಆಲಿಸುವುದರಿಂದ ಮನದಲ್ಲಿರುವ ಅಜ್ಞಾನ ಅಂಧಕಾರವೆಂಬ ಮೈಲಿಗೆ ತೊಳೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ರಾಷ್ಟ್ರೀಯ ಬಸವ ದಳದ ನಗರ ಘಟಕಾಧ್ಯಕ್ಷ ಡಾ. ಮಹೇಶ ಬಿರಾದಾರ ತಿಳಿಸಿದರು.ಜಿಲ್ಲಾ ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ನಗರ ಘಟಕ ರಾಷ್ಟ್ರೀಯ ಬಸವ ದಳದಿಂದ ಶ್ರಾವಣ ಮಾಸದ ಪ್ರಯುಕ್ತ ನಗರದ ಪಾಪನಾಶ ಗೇಟ್ ಹತ್ತಿರ ಹಮ್ಮಿಕೊಂಡ ಬಸವ ಮಂಟಪದ ಸದ್ಗುರು ಮಾತೆ ಸತ್ಯಾದೇವಿಯವರ ವಿಶ್ವಧರ್ಮ ಪ್ರವಚನ ಉದ್ಘಾಟಿಸಿ ಮಾತನಾಡಿದ ಅವರು, ಯಾಂತ್ರಿಕರಣದ ಇಂದಿನ ಯುಗದಲ್ಲಿ ವ್ಯಕ್ತಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಸ್ಕಾರದಿಂದ ದೂರ ಸರಿಯುತ್ತಿರುವುದು ದುರಂತವೇ ಸರಿ ಎಂದರು.
ಒತ್ತಡ ಮತ್ತು ಉದ್ವೇಗದ ಈ ಬದುಕಿನಲ್ಲಿ ಮನುಷ್ಯ ನನ್ನವರು ತನ್ನವರೆಂಬ ಭಾವ ತೊರೆದು, ಸ್ವಾರ್ಥ ಬದುಕು ಸಾಗಿಸುತಿದ್ದಾನೆ. ಶಾಂತಿ ಪ್ರೀತಿ ಸೌಹಾರ್ದತೆ ಮರೆಮಾಚುತ್ತಿದೆ. ಮಾನವೀಯ ಮೌಲ್ಯಗಳ ಬಲವರ್ಧನೆಗಾಗಿ ಪ್ರವಚನ ಆಲಿಸಿ ಬದುಕು ಸಾರ್ಥಕ ಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು.ಎಂಜಿನಿಯರ್ ಹಾವಶೆಟ್ಟಿ ಪಾಟೀಲ್ ಮಾತನಾಡಿ, ರಾಷ್ಟ್ರೀಯ ಬಸವ ದಳವು ಕಳೆದ ಐದು ದಶಕಗಳಿಂದ ಬಸವ ತತ್ವದ ಸೇವೆ ಮಾಡುತ್ತ ಬಂದಿದೆ. ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ತಾಯಿಯವರು ರಾಷ್ಟ್ರದ ವಿವಿಧ ಹಳ್ಳಿಗಳಿಗೆ ತೆರಳಿ ವಿಶ್ವಧರ್ಮ ಪ್ರವಚನದ ಮೂಲಕ ಬಸವ ಸಂದೇಶಗಳನ್ನು ಜನರ ಮನೆಮನಗಳ ಬಾಗಿಲಿಗೆ ಕೊಂಡೊಯ್ದಿದ್ದಾರೆ. ಅವರ ದಾರಿಯಲ್ಲಿ ಸಾಗುತ್ತಿರುವ ಸತ್ಯಾದೇವಿ ಮಾತೆಯವರ ಪ್ರವಚನ ಆಲಿಸಬೇಕೆಂದು ಕೋರಿದರು.
ಪ್ರವಚನಕಾರ ಸದ್ಗುರು ಮಾತೆ ಸತ್ಯಾದೇವಿ ಮಾತನಾಡಿ, ಒಂದು ತಿಂಗಳು ಕಾಲ ಪಾಪನಾಶ ಗೇಟ್ ಹತ್ತಿರದ ಕಟ್ಟಡದಲ್ಲಿ ಪ್ರವಚನ ಜರುಗಲಿದೆ. ಈ ಭಾಗದ ಶರಣ ಶರಣೆಯರು ಪ್ರತಿನಿತ್ಯ ಆಗಮಿಸಿ, ಬಸವಾದಿ ಶರಣರ ಹಾಗೂ ಅಕ್ಕನ ಯೋಗಾಂಗ ತ್ರಿವಿಧಿ ಆಲಿಸಬೇಕೆಂದು ಪ್ರತಿಪಾದಿಸಿದರು.ಈ ವೇಳೆ ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ಲಿಂಗಾಯತ ಸಮಾಜದ ಔರಾದ ತಾಲೂಕಾಧ್ಯಕ್ಷ ಕಲ್ಲಪ್ಪ ದೇಶಮುಖ, ರಾಷ್ಟ್ರೀಯ ಬಸವದಳದ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ, ದಳದ ಸಂಘಟನಾ ಕಾರ್ಯದರ್ಶಿ ಬಸವರಾಜ ಸಂಗಮದ್, ಬಸವಂತರಾವ ಬಿರಾದಾರ, ರವಿಕಾಂತ ಬಿರಾದಾರ, ಗಣಪತಿ ಬಿರಾದಾರ, ಸತೀಶ ಪಾಟೀಲ ಹಾರೂರಗೇರಿ, ಶ್ರೀನಾಥ ಕೋರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.