ಸಮಯ ಯಾರನ್ನೂ ಕಾಯುವುದಿಲ್ಲ. ನಾವೇ ಸಮಯವನ್ನು ಪಾಲಿಸಬೇಕು. ಒಂದು ಪ್ರಶ್ನೆಗೆ ಒಂದೇ ಉತ್ತರ. ಆದರೆ, ಒಂದು ಉತ್ತರಕ್ಕೆ ಹಲವು ಪ್ರಶ್ನೆಗಳು. ಈ ಜಿಜ್ಞಾಸೆಗೆ ಅನೇಕ ವಿಶ್ಲೇಷಕ ಸಂಶೋಧನೆಗಳಿವೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಶಿಕ್ಷಕರು ಮತ್ತು ವೈದ್ಯರ ಬಳಿ ನಿಸ್ಸಂಕೋಚದಿಂದ ಪರಿಹಾರ ಪಡೆದುಕೊಳ್ಳುವ ವಿದ್ಯಾರ್ಥಿಗಳಲ್ಲಿ ಅಜ್ಞಾನ ಅಳಿದು ಸುಜ್ಞಾನ ಮೂಡುತ್ತದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಹೇಳಿದರು.ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ 81ನೇ ಜಯಂತ್ಯುತ್ಸವ ಹಾಗೂ 13ನೇ ವರ್ಷದ ಸಂಸ್ಮರಣಾ ಮಹೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಸಮಯ ಯಾರನ್ನೂ ಕಾಯುವುದಿಲ್ಲ. ನಾವೇ ಸಮಯವನ್ನು ಪಾಲಿಸಬೇಕು. ಒಂದು ಪ್ರಶ್ನೆಗೆ ಒಂದೇ ಉತ್ತರ. ಆದರೆ, ಒಂದು ಉತ್ತರಕ್ಕೆ ಹಲವು ಪ್ರಶ್ನೆಗಳು. ಈ ಜಿಜ್ಞಾಸೆಗೆ ಅನೇಕ ವಿಶ್ಲೇಷಕ ಸಂಶೋಧನೆಗಳಿವೆ. ಸಿದ್ದಾರ್ಥ ಮನೆ ಬಿಟ್ಟು ಸರ್ವಸಂಗ ಪರಿತ್ಯಾಗಿಯಾಗಿ ಅಸಾಧ್ಯವನ್ನು ಸಾಧಿಸಿ ಬುದ್ಧನಾದಂತೆ ವಿದ್ಯಾರ್ಥಿಗಳು ಆಸಕ್ತಿ ಮತ್ತು ಶ್ರದ್ಧೆಯಿಂದ ವ್ಯಾಸಂಗಕ್ಕಾಗಿ ಅಧ್ಯಯನ ಮಾಡಿದರೆ ಮಾತ್ರ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡಬಹುದು ಎಂದರು.ಹಾಲು, ಮೊಸರು, ಬೆಣ್ಣೆ, ತುಪ್ಪ ಇವು ಹಾಲಿನ ಉತ್ಪನ್ನಗಳಾದರೂ ಬೆಲೆ ಮತ್ತು ಬಾಳಿಕೆ ಹೆಚ್ಚು. ಅಧಿಕ ಬೆಲೆ ಮತ್ತು ದೀರ್ಘಕಾಲ ಬಾಳುವ ತುಪ್ಪವಾಗಲು ಸುಟ್ಟು ಬೆಂದು ಒತ್ತಡ ಅನುಭವಿಸಿದರೆ ಮಾತ್ರ ಸಾಧ್ಯ. ಕಾರ್ಬನ್ ವಜ್ರವಾಗುವ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳ ಶಿಕ್ಷಣ ಪರಿಶ್ರಮಕ್ಕೆ ಹೋಲಿಸಿ ಶ್ರೀಗಳು ಅರ್ಥೈಸಿದರು.
ನೆಲಮಂಗಲ ತಾಲೂಕಿನ ಶ್ರೀವನಕಲ್ಲು ಮಲ್ಲೇಶ್ವರಸ್ವಾಮಿ ಮಠದ ಶ್ರೀಬಸವಾನಂದ ಸ್ವಾಮೀಜಿ ಮಾತನಾಡಿ, ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ. ವಿದ್ಯಾರ್ಥಿಗಳೆಲ್ಲರೂ ಅದನ್ನು ಕುಡಿದು ಘರ್ಜಿಸಿ ಮಹಾನ್ ಸಾಧಕರಾಗಬೇಕು. ಧ್ಯಾನ ಓದು ಬರಹ ಅಂತರ್ಮನನ ಮತ್ತು ಕಠಿಣ ಪರಿಶ್ರಮ ಈ ಐದು ಮಾತ್ರೆಗಳನ್ನು ತೆಗೆದುಕೊಂಡರೆ ವಿದ್ಯಾರ್ಥಿ ನಿರಾಯಾಸವಾಗಿ ಉತ್ತೀರ್ಣನಾಗುತ್ತಾನೆ ಎಂದರು.ಅನ್ನದಾನ ಶ್ರೇಷ್ಠದಾನ. ಆದರೆ, ವಿದ್ಯಾ ದಾನ ಪರಮ ಶ್ರೇಷ್ಠದಾನ. ಆಧ್ಯಾತ್ಮಿಕ ತಳಹದಿಯ ಮೇಲೆ ವಿದ್ಯಾದಾನವನ್ನು ನೀಡುತ್ತಾ ಭಾರತದಲ್ಲಿ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವ ಮಹಾಸಂಸ್ಥಾನ ಮಠಗಳಲ್ಲಿ ಆದಿಚುಂಚನಗಿರಿ ಮಠವು ಅಗ್ರಸ್ಥಾನದಲ್ಲಿದೆ ಎಂದರು.
ಬೆಂಗಳೂರಿನ ಡಿಎಸ್‌ಇಆರ್‌ಟಿ ಉಪ ನಿರ್ದೇಶಕ ಡಾ.ಹರಿಪ್ರಸಾದ್ ಅವರು ಕಾರ್ಯಾಗಾರದಲ್ಲಿ ಹಾಜರಿದ್ದ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದೇಹ ಮತ್ತು ಮನಸ್ಸಿನ ಸಿದ್ಧತೆ, ಸರಳ ವ್ಯಾಯಾಮ, ಪರೀಕ್ಷಾ ಭಯದ ನಿವಾರಣೆ, ಓದುವ ಕ್ರಮ, ಪ್ರಶ್ನೆ ಪತ್ರಿಕೆಯ ನೀಲಿ ನಕಾಶೆ, ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ ನೀಡುವ ವಿಧಾನ ಕುರಿತು ಮಾರ್ಗದರ್ಶನ ನೀಡಿದರು.ಆದಿಚುಂಚನಗಿರಿ ಆಸ್ಪತ್ರೆಯ ಮನೋತಜ್ಞೆ ಡಾ.ಎಸ್.ಪಿ.ವೈಭವಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಮಾತನಾಡಿದರು. ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಹಾಸನ ಡಿವೈಎಸ್‌ಪಿ ಸುಮಿತ್, ಸಿಪಿಐ ನಿರಂಜನ್, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎನ್.ಮಂಜುನಾಥ್ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಮತ್ತು ಭಕ್ತರು ಇದ್ದರು.