ಮನುಷ್ಯ ನಿಸರ್ಗದ ಮೇಲೆ ಅವಲಂಬಿತವಾದ ಪ್ರಾಣಿ. ನಿಸರ್ಗದಲ್ಲಿ ಮರ ಗಿಡಗಳನ್ನು ಹೆಚ್ಚು-ಹೆಚ್ಚು ಬೆಳೆಸುವುದರೊಂದಿಗೆ ಪ್ರಾಣಿ-ಪಕ್ಷಿಗಳ ಉಳಿವಿಗಾಗಿ ಶ್ರಮಿಸಬೇಕು.
ಮುಂಡರಗಿ: ಮನುಷ್ಯ ಪ್ರಾಣಿ- ಪಕ್ಷಿಗಳನ್ನು ನಿರ್ಲಕ್ಷ್ಯ ಮಾಡಿದರೆ ಪರಿಸರ ಸಮತೋಲನವನ್ನು ಕಳೆದುಕೊಂಡು ಹಾನಿ ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಬೇಸಿಗೆಯ ಕಾಲದಲ್ಲಿ ತಮ್ಮ ಮನೆಯ ಮಾಳಿಗೆಯ ಮೇಲೆ ಮತ್ತು ಮನೆಯಂಗಳದಲ್ಲಿ ಪ್ರಾಣಿ, ಪಕ್ಷಿಗಳಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕತ ಈಶ್ವರಪ್ಪ ಹಂಚಿನಾಳ ಮನವಿ ಮಾಡಿದರು.
ಇಲ್ಲಿನ ಸ್ವಾಮಿ ವಿವೇಕಾನಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿರುವ 60ಕ್ಕೂ ಹೆಚ್ಚು ಮರಗಳಿಗೆ ಗುರುವಾರ ನೀರಿನ ತೊಟ್ಟಿಗಳನ್ನು ಕಟ್ಟಿ, ಪಕ್ಷಿಗಳಿಗೆ ಕಾಳುಗಳನ್ನು ಚೆಲ್ಲುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮನುಷ್ಯ ನಿಸರ್ಗದ ಮೇಲೆ ಅವಲಂಬಿತವಾದ ಪ್ರಾಣಿ. ನಿಸರ್ಗದಲ್ಲಿ ಮರ ಗಿಡಗಳನ್ನು ಹೆಚ್ಚು-ಹೆಚ್ಚು ಬೆಳೆಸುವುದರೊಂದಿಗೆ ಪ್ರಾಣಿ-ಪಕ್ಷಿಗಳ ಉಳಿವಿಗಾಗಿ ಶ್ರಮಿಸಬೇಕು. ಬೇಸಿಗೆಯಲ್ಲಿ ಅವು ನೀರು ಮತ್ತು ಆಹಾರವಿಲ್ಲದೆ ಸಂಕಷ್ಟದಲ್ಲಿ ಸಿಲುಕುತ್ತವೆ. ಹೀಗಾಗಿ ಸಾಧ್ಯವಾದ ಕಡೆ ನೀರಿನ ತೊಟ್ಟಿಗಳನ್ನು ಇಟ್ಟು, ಕಾಳುಗಳನ್ನು ಹಾಕಿ ಪ್ರಾಣಿ- ಪಕ್ಷಿಗಳ ಸಂಕುಲಗಳನ್ನು ಉಳಿಸುವ ಮಾನವೀಯ ಕೆಲಸವನ್ನು ಮಾಡಬೇಕು ಎಂದರು.
ಸಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅವರು ತೊಟ್ಟಿಗಳಿಗೆ ನೀರು ಮತ್ತು ಮರಗಳ ಬುಡದಲ್ಲಿ ಆಹಾರದ ಧಾನ್ಯ ಹಾಕಿ ಕಾರ್ಯಕ್ರಮ ಉದ್ಘಾಟಿಸಿದರು.ಮಾಜಿ ಸೈನಿಕ ಶೇಖರಗೌಡ ಪಾಟೀಲ ಮಾತನಾಡಿ, ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಕಾಳಜಿ ಇಲ್ಲದಿರುವುದು ವಿಷಾದದ ಸಂಗತಿ. ಪ್ರಾಣಿ- ಪಕ್ಷಿಗಳು ಪರಿಸರಕ್ಕೆ ಹಾನಿಯನ್ನು ಮಾಡುವುದಿಲ್ಲ. ಮನುಷ್ಯ ಪ್ರಾಣಿಯೇ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪ್ರಾಣಿ. ಮನುಷ್ಯರು ಪರಿಸರಕ್ಕೆ ಪೂರಕ ಕಾರ್ಯ ಮಾಡಬೇಕೇ ವಿನಾ ಹಾನಿಯಾಗುವ ಕಾರ್ಯ ಮಾಡಬಾರದು ಎಂದರು.ಸಂಸ್ಥೆಯ ಆಡಳಿತಾಧಿಕಾರಿ ಸಿ.ಎಸ್. ಅರಸನಾಳ ಮಾತನಾಡಿ, ಬೇಸಿಗೆಯ ಸಮಯದಲ್ಲಿ ನಮಗೆ ಅನುಕೂಲವಾದ ಕಡೆ ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರನ್ನು ಒದಗಿಸುವ ಕಾರ್ಯ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ದೇವಪ್ಪ ಇಟಗಿ, ಪತ್ರಕರ್ತರಾದ ಶರಣು ಸೊಲಗಿ, ಸಿ.ಕೆ. ಗಣಪ್ಪನವರ, ಶಾಲಾ ಪ್ರಧಾನ ಗುರು ಪರಮೇಶ ನಾಯಕ, ಬಿ.ಡಿ. ನದಾಫ್, ಜೆ.ಎಂ. ಜಿಂದೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಡಿ.ಟಿ. ಇಮ್ರಾಪೂರ ಸ್ವಾಗತಿಸಿರು. ಶಿಕ್ಷಕ ಗುಡದೀರಪ್ಪ ಲಿಂಗಶೆಟ್ಟರ ನಿರೂಪಿಸಿ, ವಂದಿಸಿದರು.