ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿ ಬಗೆಗಿನ ಆಸಕ್ತಿ ಅಳಿಯುತ್ತಿದ್ದು, ಅದೊಂದು ಅನುತ್ಪಾದಕ ಕ್ಷೇತ್ರ ಎನ್ನುವ ಅಸಡ್ಡೆ ಧೋರಣೆ ಮೂಡುತ್ತಿದೆ ಎಂದು ಚಲನಚಿತ್ರ ನಟ, ಸಂಸ್ಕಾರ ಭಾರತಿ ದಕ್ಷಿಣ ಪ್ರಾಂತ ಅಧ್ಯಕ್ಷ ಕೆ.ಸುಚೇಂದ್ರ ಪ್ರಸಾದ್ ವಿಷಾದ ವ್ಯಕ್ತಪಡಿಸಿದರು. ಮೈಸೂರಿನ ನೃತ್ಯಗಿರಿ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರ, ಚಿಕ್ಕಮಗಳೂರಿನ ಆರಾಧನಾ ಕಲ್ಚರಲ್ ಟ್ರಸ್ಟ್ ಆಶ್ರಯದಲ್ಲಿ ನಗರದ ಕುವೆಂಪು ಕಲಾ ಮಂದಿರದಲ್ಲಿ ಭಾನುವಾರ ನಡೆದ ಡಾ. ವರ್ಷಿಣಿ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಮೀಕ್ಷೆಯೊಂದರ ಪ್ರಕಾರ ಶೇ.78 ರಷ್ಟು ಮಂದಿ ತಮಗೆ ಸಂಸ್ಕೃತಿ ಅಗತ್ಯವಿಲ್ಲ, ಅದೊಂದು ಅನುತ್ಪಾದಕ ಕ್ಷೇತ್ರ ಎನ್ನುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸಂಸ್ಕೃತಿ ಹಾಗೂ ಕಲೆ ಬಗೆಗಿನ ಪೋಷಣೆ ಮುಂದುವರಿಯದೇ ಇದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಆ ಪೋಷಣೆಯೂ ಆಪೋಶನವಾದೀತು; ಈ ಬಗ್ಗೆ ಅಗತ್ಯ ಎಚ್ಚರಿಕೆ ವಹಿಸಬೇಕಿದೆ ಎಂದು ಸಲಹೆ ನೀಡಿದರು. ಪ್ರಬುದ್ಧತೆ, ಪ್ರಾಮಾಣಿಕತೆ ಜೊತೆಗೆ ಪ್ರೌಢ ಚಿಂತನೆ ಇರದೆ ಸಂಸ್ಕೃತಿಯನ್ನಾಗಲಿ, ಪರಂಪರೆಯನ್ನಾಗಲಿ ಪೊರೆಯುವುದು ಸಾಧ್ಯವಿಲ್ಲ. ನಮ್ಮ ಹಿರಿಯರು ಕಲೆ ಹಾಗೂ ಸಂಸ್ಕೃತಿಯ ದೊಡ್ಡ ಪರಂಪರೆಯನ್ನೇ ನಮಗೆ ಬಳುವಳಿಯಾಗಿ ಉಳಿಸಿ ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವುಗಳ ಮೇಲಿನ ಆಸಕ್ತಿ ಕ್ಷೀಣಿಸುತ್ತಿರುವುದು ದುರದೃಷ್ಟಕರ. ನಮ್ಮ ನೆಲದಲ್ಲೇ ಜನಿಸಿದ ಭರತನಾಟ್ಯ ಶಾಸ್ತ್ರದ ರಥವನ್ನು ಇಲ್ಲಿಯವರೆಗೂ ಎಳೆದು ತರುವ ಕೆಲಸ ಆಗಿದೆ. ಅದನ್ನು ಮುಂದುವರಿಸುವುದು ಕಲಾ ಪೋಷಕರ ಕೈಯಲ್ಲಿದೆ. ಈ ನಿಟ್ಟಿನಲ್ಲಿ ಪಣ ತೊಡಬೇಕಿದೆ. ನಮ್ಮ ಹಿರಿಯರು ಬೋಧಿಸಿದ ವಿಧಿ ವಿಧಾನಗಳು, ಹೇಳಿದ ಕಿವಿಮಾತುಗಳು ಪಾಲನೆಯಾಗುವುದು ಅಗತ್ಯ. ಇದರಿಂದ ಆತ್ಮೋದ್ಧಾರದ ಜೊತೆಗೆ ಪರೋದ್ಧಾರವೂ ಆದೀತು. ಇಲ್ಲದಿದ್ದರೆ ಅವುಗಳ ಹೆಜ್ಜೆ ಗುರುತೇ ಅಳಿಸೀತು ಎನ್ನುವ ಎಚ್ಚರಿಕೆ ನಮ್ಮೊಳಗಿರಬೇಕು ಎಂದು ಹೇಳಿದರು.ಸುಗಮ ಸಂಗೀತ ಗಂಗಾದ ಉಪಾಧ್ಯಕ್ಷ, ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಮಾತನಾಡಿ, ಭಾವನೆಗಳನ್ನು ಅಂತ ರಂಗದ ಸೌಂದರ್ಯದ ಪರಿಕಲ್ಪನೆಗಳಿಗೆ ಭಾಷ್ಯ ಬರೆಯುವ ಕಲೆ ಭರತನಾಟ್ಯ. ಡಾ.ವರ್ಷಿಣಿಯ ಭರತನಾಟ್ಯ ಪ್ರದರ್ಶನದ ಹಿಂದೆ ಸಾಕಷ್ಟು ದಿನಗಳ ಪರಿಶ್ರಮವಿದೆ. ಆಕೆಗೆ ಯಶಸ್ಸು ದೊರೆಯಲಿ ಎಂದು ಹಾರೈಸಿದರು.ಹಾಸನ ನಾಟ್ಯ ಕಲಾ ನಿವಾಸದ ನಿರ್ದೇಶಕ ವಿದ್ವಾನ್ ಎಚ್.ಆರ್.ಉನ್ನತ್ ಮಾತನಾಡಿ, ರಂಗ ಪ್ರವೇಶ ಎಂದ ಕೂಡಲೇ ಮೊದಲಿಗೆ ಆಗುವುದು ಆತಂಕ. ರಂಗದ ಮೇಲೆ ಸತತ ಎರಡರಿಂದ ಎರಡೂವರೆ ಗಂಟೆಗಳ ಕಾಲ ನೃತ್ಯ ಪ್ರದರ್ಶನ ನೀಡ ಬೇಕಾಗುತ್ತದೆ. ಆದರೆ, ರಂಗದ ಹಿಂದೆ ಸಾಕಷ್ಟು ವರ್ಷಗಳ ಸಾಧನೆ ಮಾಡುವುದು ಅಗತ್ಯ. ಹಂತ ಹಂತವಾಗಿ ಕಲಾ ವಿದರಲ್ಲಿ ಆಗುವ ಪ್ರಬುದ್ಧತೆ ಅದು. ಒಟ್ಟಿನಲ್ಲಿ ಡಾ.ವರ್ಷಿಣಿ ರಂಗ ಪ್ರವೇಶ ಯಶಸ್ವಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಡಾ.ವರ್ಷಿಣಿ ಅವರ ಗುರು, ಮೈಸೂರು ನೃತ್ಯ ಗುರು ಸಂಸ್ಥೆ ಮುಖ್ಯಸ್ಥೆ ವಿದುಷಿ ಡಾ.ಕೃಪಾ ಫಡ್ಕೆ, ನಗರದ ಶ್ರೀ ಕಂಠೇಶ್ವರ ಕಲಾ ಮಂದಿರದ ವಿದುಷಿ ಸುಮನಾ ರಾಮಚಂದ್ರ, ಕೂದುವಳ್ಳಿ ಸುಸ್ವರ ಸಂಗೀತಾಲಯದ ವಿದುಷಿ ಉಮಾ ನಾಗರಾಜ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಇದೇ ವೇಳೆ ಸ್ಪರ್ಶ ಆಸ್ಪತ್ರೆ ಡಾ.ಚಂದ್ರಶೇಖರ್ ಸರ್ಜಾ ಅವರನ್ನೂ ಗೌರವಿಸಲಾಯಿತು.ಸುಮಾರು ಎರಡೂವರೆ ಗಂಟೆಗಳ ಕಾಲ ನೃತ್ಯ ಪ್ರದರ್ಶನ ನೀಡಿದ ಡಾ.ವರ್ಷಿಣಿ ಭರತನಾಟ್ಯ ವೈವಿಧ್ಯಮಯ ಪ್ರಕಾರ ಗಳೊಂದಿಗೆ ಗಮನ ಸೆಳೆಯಿತು. ಉತ್ತಮ ಹಿಮ್ಮೇಳ, ಸುಶ್ರಾವ್ಯ ಸಂಗೀತ, ಬೆಳಕು, ಸೂಕ್ತ ಪ್ರಸಾದನ ವ್ಯವಸ್ಥೆ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ನಟುವಾಂಗದಲ್ಲಿ ವಿದುಷಿ ಪೂಜಾ ಸುಗಮ್, ಹಾಡುಗಾರಿಕೆಯಲ್ಲಿ ವಿದ್ವಾನ್ ಕರುಣಾ ಕರನ್, ಮೃದಂಗದಲ್ಲಿ ನಾಗೈ ಪಿ.ಶ್ರೀರಾಮ್, ಕೊಳಲುವಿನಲ್ಲಿ ವಿದ್ವಾನ್ ಎ.ಪಿ.ಕೃಷ್ಣಪ್ರಸಾದ್ ಸಾಥ್ ನೀಡಿದರು.ಆರಾಧನಾ ಕಲ್ಚರಲ್ ಟ್ರಸ್ಟ್‌ನ ಮುಖ್ಯಸ್ಥೆ ಸುಮಾ ಪ್ರಸಾದ್, ಅಕ್ಷತಾ ಪಟವರ್ಧನ್ ಇತರರಿದ್ದರು.28 ಕೆಸಿಕೆಎಂ 3ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಭಾನುವಾರ ನಡೆದ ಡಾ.ವರ್ಷಿಣಿ ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ವಿದುಷಿ ಡಾ.ಕೃಪಾ ಫಡ್ಕೆ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಡಾ.ವರ್ಷಿಣಿ, ಕೆ.ಸುಚೇಂದ್ರ ಪ್ರಸಾದ್, ಸ.ಗಿರಿಜಾಶಂಕರ, ವಿದ್ವಾನ್ ಎಚ್.ಆರ್.ಉನ್ನತ್, ಶ್ರೀಧರಮೂರ್ತಿ, ಸುಮಾ ಪ್ರಸಾದ್ ಇದ್ದರು.
ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಭಾನುವಾರ ನಡೆದ ಡಾ.ವರ್ಷಿಣಿ ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ವಿದುಷಿ ಡಾ.ಕೃಪಾ ಫಡ್ಕೆ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಡಾ.ವರ್ಷಿಣಿ, ಕೆ.ಸುಚೇಂದ್ರ ಪ್ರಸಾದ್, ಸ.ಗಿರಿಜಾಶಂಕರ, ವಿದ್ವಾನ್ ಹೆಚ್.ಆರ್.ಉನ್ನತ್, ಶ್ರೀಧರಮೂರ್ತಿ, ಸುಮಾ ಪ್ರಸಾದ್ ಇದ್ದರು.