ಚನ್ನಗಿರಿ ಪಟ್ಟಣದ ತೋಟ ಉತ್ಪನ್ನ ಮಾರಾಟ ಸಹಕಾರ ಸಂಘದಿಂದ ಹೊರತಂದಿರುವ 2026ರ ಗೋಡೆ ಕ್ಯಾಂಲೆಂಡರ್‌ನಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಆರ್.ಮರುಳಪ್ಪ ಅವರ ಭಾವಚಿತ್ರವನ್ನು ಮುದ್ರಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಆರ್.ಮರುಳಪ್ಪ ಅಭಿಮಾನಿ ಬಳಗ ವತಿಯಿಂದ ಚನ್ನಗಿರಿ ತುಮ್ ಕೋಸ್ ಕೇಂದ್ರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ವ್ಯವಸ್ಥಾಪಕ ನಿರ್ದೇಶಕ ಮಧು ಅವರಿಗೆ ಮನವಿ ಸಲ್ಲಿಸಿದ್ದಾರೆ.
- ಚನ್ನಗಿರಿ ತುಮ್‌ಕೋಸ್ ಕಚೇರಿ ಮುಂಭಾಗ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ । ಮಾಜಿ ನಿರ್ದೇಶಕ ಚಂದ್ರಶೇಖರ್ ನೇತೃತ್ವ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ತೋಟ ಉತ್ಪನ್ನ ಮಾರಾಟ ಸಹಕಾರ ಸಂಘದಿಂದ ಹೊರತಂದಿರುವ 2026ರ ಗೋಡೆ ಕ್ಯಾಂಲೆಂಡರ್‌ನಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಆರ್.ಮರುಳಪ್ಪ ಅವರ ಭಾವಚಿತ್ರವನ್ನು ಮುದ್ರಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಆರ್.ಮರುಳಪ್ಪ ಅಭಿಮಾನಿ ಬಳಗ ವತಿಯಿಂದ ಚನ್ನಗಿರಿ ತುಮ್ ಕೋಸ್ ಕೇಂದ್ರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ವ್ಯವಸ್ಥಾಪಕ ನಿರ್ದೇಶಕ ಮಧು ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಸಂಸ್ಥೆ ಮಾಜಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ತುಮ್‌ಕೋಸ್ ಸಂಸ್ಥೆಯನ್ನು ಕಟ್ಟಲು ಆರ್.ಮರುಳಪ್ಪನವರು ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗಳನ್ನು ಸುತ್ತಿ ಅಡಕೆ ಬೆಳೆಗಾರ ರೈತರಿಂದ ₹100 ಚಂದಾವನ್ನು ವಸೂಲಿ ಮಾಡಿ, ಸಂಸ್ಥೆಗೆ ಭದ್ರ ಬುನಾದಿ ಹಾಕಿದ್ದರು. ಅಲ್ಲಿಂದ ಇಲ್ಲಿಯವರೆಗೆ ಸಂಘದ ಎಲ್ಲ ಚಟುವಟಿಕೆಗಳಲ್ಲಿ ಮರುಳಪ್ಪನವರ ಭಾವಚಿತ್ರವನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ನೂತನವಾಗಿ ಅಧಿಕಾರಕ್ಕೆ ಬಂದಿರುವ ಆಡಳಿತ ಮಂಡಳಿಯವರು ಸಂಸ್ಥೆಯ ವಾಲ್ ಕ್ಯಾಲೆಂಡರ್-2026ರಲ್ಲಿ ಮರುಳಪ್ಪನವರ ಫೋಟೋ ಮುದ್ರಿಸಿಲ್ಲ. ಈ ನಿರ್ಲಕ್ಷ್ಯ ಸಂಸ್ಥಾಪಕ ಅಧ್ಯಕ್ಷರಿಗೆ ಮಾಡಿರುವ ಅವಮಾನವಾಗಿದೆ ಎಂದು ಕಿಡಿಕಾರಿದರು.ಮಾಜಿ ಸದಸ್ಯ ಹರೋನಹಳ್ಳಿ ದೇವರಾಜ್ ಮಾತನಾಡಿ, ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆ ಸಂದರ್ಭದಲ್ಲಿ ಮರುಳಪ್ಪನವರ ಪೋಟೋ ಮತ್ತು ಹೆಸರನ್ನು ಬಳಸಿಕೊಳ್ಳುವ ಇಂದಿನ ಅಧ್ಯಕ್ಷರು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಮೇಲೆ ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿರುವುದು ಸರಿಯಲ್ಲ. ಮರುಳಪ್ಪನವರ ಬೆವರ ಹನಿಗಳ ಮೇಲೆ ಇಂದು ಈ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ಇಂಥ ಸಂಸ್ಥೆಯ ಘನತೆ ಹೆಚ್ಚಿಸುವ ಕೆಲಸವನ್ನು ಆಡಳಿತ ಮಂಡಳಿಯವರು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಅಡಕೆ ಬೆಳೆಗಾರ ರೈತರಾದ ದಿಗ್ಗೇನಹಳ್ಳಿ ನಾಗರಾಜ್, ಗೌ.ಹಾಲೇಶ್, ಪಟ್ಲಿ ನಾಗರಾಜ್, ಕೋಗಲೂರು ಉಮೇಶ್, ಚಿಕ್ಕೂಲಿಕೆರೆ ಸಂಗಮೇಶ್, ಪಾಂಡೋಮಟ್ಟಿ ಎಂ.ಎಸ್. ಮಲ್ಲೇಶಪ್ಪ, ಮಲಹಾಳ್ ಕುಮಾರಸ್ವಾಮಿ, ಕಗತೂರು ಪಾಲಾಕ್ಷಪ್ಪ, ಹಿರೇಮಳಲಿ ಲೋಕಣ್ಣ, ಎಂ.ಯು. ಚನ್ನಬಸಪ್ಪ ಸೇರಿದಂತೆ ಅಡಕೆ ಬೆಳೆಗಾರ ರೈತರು, ಅರ್.ಮರುಳಪ್ಪ ಅಭಿಮಾನಿಗಳು ಭಾಗವಹಿಸಿದ್ದರು.- - -
(ಬಾಕ್ಸ್)* ಗೌರವ ಕಾಪಾಡಲೆಂದೇ ಪೋಟೋ ಮುದ್ರಿಸಿಲ್ಲ: ಅಧ್ಯಕ್ಷ ಪ್ರತಿಕ್ರಿಯೆ
ತುಮ್ ಕೋಸ್ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಆರ್.ಮರುಳಪ್ಪ ಅವರ ಭಾವಚಿತ್ರವನ್ನು 2026ರ ಹೊಸ ವರ್ಷದ ಕ್ಯಾಲೆಂಡರ್‌ನಲ್ಲಿ ಮುದ್ರಿಸದಿರುವುದಕ್ಕೆ ಕಾರಣವಿದೆ. ತುಮ್ ಕೋಸ್ ಸಂಸ್ಥೆಯ ಮುಂಭಾಗದಲ್ಲಿಯೇ ಸಂಸ್ಥಾಪಕ ಅಧ್ಯಕ್ಷ ಮರುಳಪ್ಪನವರ ಪ್ರತಿಮೆ ಸ್ಥಾಪಿಸಿದ್ದೇವೆ. ಪ್ರತಿಮೆಗೆ ಪ್ರತಿನಿತ್ಯ ಪೂಜೆ ಸಲ್ಲಿಸುತ್ತೇವೆ. ಇದು ನಾವು ಅವರಿಗೆ ಕೊಡುವ ಗೌರವವಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.ಕ್ಯಾಲೆಂಡರ್‌ನಲ್ಲಿ ಮರುಳಪ್ಪನವರ ಭಾವಚಿತ್ರ ಮುದ್ರಣ ಮಾಡುವುದರಿಂದ ಅಯಾ ತಿಂಗಳು ಕಳೆಯಿತೆಂದರೆ ಅದನ್ನು ಹರಿದು ಬಿಸಾಕುವಂಥವರು ಹಲವರಿರುತ್ತಾರೆ. ಮತ್ತು ಕಸಗಳಲ್ಲಿಯೂ ಕ್ಯಾಲೆಂಡರ್ ಬೀಳುತ್ತದೆ. ಅಂಗಡಿಗಳಲ್ಲಿ ಸಾಮಾನುಗಳನ್ನು ಕಟ್ಟಲು ಸಹ ಹಳೇ ಕ್ಯಾಲೆಂಡರ್ ಹಾಳೆಗಳ ಬಳಕೆ ಮಾಡುತ್ತಾರೆ. ಹೀಗಾಗಿ ಮರುಳಪ್ಪ ಅವರ ಭಾವಚಿತ್ರಕ್ಕೆ ಅಪಮಾನವಾಗ ಬಾರದು ಎಂಬ ಉದ್ದೇಶದಿಂದ 2026ರ ಕ್ಯಾಲೆಂಡರ್‌ನಲ್ಲಿ ಅವರ ಭಾವಚಿತ್ರ ಮುದ್ರಿಸಿಲ್ಲ ಎಂದು ಉತ್ತರಿಸಿದ್ದಾರೆ.
- - --5ಕೆಸಿಎನ್ಜಿ2:
ಚನ್ನಗಿರಿ ತುಮ್ ಕೋಸ್ ಸಂಸ್ಥೆಯಿಂದ 2026ರ ಹೊಸ ವರ್ಷದ ಕ್ಯಾಲೆಂಡರಲ್ಲಿ ಸಂಸ್ಥಾಪಕ ಅಧ್ಯಕ್ಷ ಮರುಳಪ್ಪ ಅವರ ಫೋಟೋ ಮುದ್ರಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಆರ್.ಮರುಳಪ್ಪ ಅಭಿಮಾನಿಗಳು ಪಟ್ಟಣದ ಕೇಂದ್ರ ಕಚೇರಿ ಎದುರು ಪ್ರತಿಭಟಿಸಿದರು.