ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಸಂದೀಪ್ ಪಾಟೀಲ್ ಅವರು ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಪ್ರಸಿದ್ಧ ಐರನ್‌ಮ್ಯಾನ್ 70.3 ವೆಸ್ಟರ್ನ್ ಸಿಡ್ನಿ–2026 ಸಹಿಷ್ಣುತೆ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಈ ಸಾಧನೆಯೊಂದಿಗೆ ಅವರು ವಿಶ್ವದ ವಿವಿಧ ದೇಶಗಳಲ್ಲಿ ಒಟ್ಟು ಆರನೇ ಬಾರಿ ಐರನ್‌ಮ್ಯಾನ್ ಸ್ಪರ್ಧೆಯನ್ನು ಪೂರ್ಣಗೊಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಸಂದೀಪ್ ಪಾಟೀಲ್ ಅವರು ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಪ್ರಸಿದ್ಧ ಐರನ್‌ಮ್ಯಾನ್ 70.3 ವೆಸ್ಟರ್ನ್ ಸಿಡ್ನಿ–2026 ಸಹಿಷ್ಣುತೆ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಈ ಸಾಧನೆಯೊಂದಿಗೆ ಅವರು ವಿಶ್ವದ ವಿವಿಧ ದೇಶಗಳಲ್ಲಿ ಒಟ್ಟು ಆರನೇ ಬಾರಿ ಐರನ್‌ಮ್ಯಾನ್ ಸ್ಪರ್ಧೆಯನ್ನು ಪೂರ್ಣಗೊಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಗೋವಾ, ಥಾಯ್ಲೆಂಡ್, ಪೋಲೆಂಡ್, ಟರ್ಕಿ ಹಾಗೂ ಕೋಪನ್‌ಹೇಗನ್‌ನಲ್ಲಿ ನಡೆದ ಸ್ಪರ್ಧೆಗಳನ್ನು ಯಶಸ್ವಿಯಾಗಿ ಮುಗಿಸಿದ್ದರು. ಇದೀಗ ಸಿಡ್ನಿಯಲ್ಲೂ ಅವರ ಸಾಧನೆ ಮರುಕಳಿಸಿದೆ.

ಐರನ್‌ಮ್ಯಾನ್ 70.3 ಸ್ಪರ್ಧೆಯನ್ನು ವಿಶ್ವದ ಅತ್ಯಂತ ಕಠಿಣ ಸಹಿಷ್ಣುತೆ ಕ್ರೀಡೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಸ್ಪರ್ಧಿಗಳು 1.9 ಕಿಲೋಮೀಟರ್ ಈಜು, 90 ಕಿಲೋಮೀಟರ್ ಸೈಕಲ್ ಸವಾರಿ ಹಾಗೂ 21.1 ಕಿಲೋಮೀಟರ್ ಅರ್ಧ ಮ್ಯಾರಥಾನ್ ಓಟವನ್ನು ನಿರಂತರವಾಗಿ ಪೂರ್ಣಗೊಳಿಸಬೇಕಾಗುತ್ತದೆ. 45ರಿಂದ 49 ವರ್ಷದ ವಯೋಮಾನದ ವಿಭಾಗದಲ್ಲಿ ಸ್ಪರ್ಧಿಸಿದ ಸಂದೀಪ್ ಪಾಟೀಲ್ ಅವರು ಸಂಪೂರ್ಣ ಸ್ಪರ್ಧೆಯನ್ನು 7 ಗಂಟೆ 16 ನಿಮಿಷ 25 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ್ದಾರೆ.

ಅವರ ಸ್ಪರ್ಧಾ ವಿವರ ಹೀಗಿದೆ:ಈಜು ಸ್ಪರ್ಧೆಯಲ್ಲಿ 49 ನಿಮಿಷ 58 ಸೆಕೆಂಡು, ಸೈಕಲ್ ಸವಾರಿ ಸ್ಪರ್ಧೆಯಲ್ಲಿ 3 ಗಂಟೆ 38 ನಿಮಿಷ 03 ಸೆಕೆಂಡು ಹಾಗೂ ಓಟ ಸ್ಪರ್ಧೆಯಲ್ಲಿ 2 ಗಂಟೆ 35 ನಿಮಿಷ 06 ಸೆಕೆಂಡು ಅವಧಿ ತೆಗೆದುಕೊಂಡಿದ್ದಾರೆ. ಈ ಸಾಧನೆಯೊಂದಿಗೆ ಅವರು ತಮ್ಮ ವಿಭಾಗದಲ್ಲಿ 77ನೇ ಸ್ಥಾನ ಪಡೆದಿದ್ದಾರೆ. ತಮ್ಮ ಸಾಧನೆ ಕುರಿತು ಪ್ರತಿಕ್ರಿಯಿಸಿದ ಸಂದೀಪ್ ಪಾಟೀಲ್, ಪ್ರತಿ ಐರನ್‌ಮ್ಯಾನ್ ಸ್ಪರ್ಧೆಯೂ ಹೊಸ ಅನುಭವ ನೀಡುತ್ತದೆ. ದೈಹಿಕ ಮತ್ತು ಮಾನಸಿಕ ಸಹಿಷ್ಣುತೆಯನ್ನು ಪ್ರತಿಯೊಂದು ಹಂತವೂ ಪರೀಕ್ಷಿಸುತ್ತದೆ. ಆದರೆ ಶಿಸ್ತು, ಸ್ಥಿರತೆ ಮತ್ತು ನಿರಂತರ ಪ್ರಯತ್ನವೇ ಯಶಸ್ಸಿನ ಗುಟ್ಟು ಎಂದು ಹೇಳಿದರು. ಪೊಲೀಸ್ ಇಲಾಖೆಯ ಒತ್ತಡದ ಕರ್ತವ್ಯಗಳ ನಡುವೆಯೂ ಆರೋಗ್ಯ ಮತ್ತು ವ್ಯಾಯಾಮಕ್ಕೆ ಆದ್ಯತೆ ನೀಡುತ್ತಿರುವುದು ಯುವಕರಿಗೆ ಪ್ರೇರಣೆಯಾಗಿದೆ. ಅವರ ಸಾಧನೆಗೆ ಪೊಲೀಸ್ ಇಲಾಖೆ, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರ ವ್ಯಕ್ತವಾಗಿದೆ.