ತೀವ್ರ ಜ್ವರದಿಂದ ಬಳಲುತ್ತಿದ್ದಐಐಎಸ್ಸಿ ವಿದ್ಯಾರ್ಥಿ ಸಾವು

| Published : Aug 08 2024, 01:35 AM IST

ಸಾರಾಂಶ

ತೀವ್ರ ಜ್ವರದಿದ ಬಳಲುತ್ತಿದ್ದ ನಗರದ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್ಸಿ) ಎಂಟೆಕ್‌ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತೀವ್ರ ಜ್ವರದಿದ ಬಳಲುತ್ತಿದ್ದ ನಗರದ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್ಸಿ) ಎಂಟೆಕ್‌ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ.

ಮಹಾರಾಷ್ಟ್ರದ ಸತಾರಾ ಮೂಲದ ಅವಿರಾಜ್‌ ಹನಮಂತ ಪವಾರ್‌ (23) ಮೃತ ವಿದ್ಯಾರ್ಥಿ. ಮಂಗಳವಾರ ಐಐಎಸ್ಸಿ ಕ್ಯಾಂಪಸ್‌ನ ಹಾಸ್ಟೆಲ್‌ ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾರೆ.

ಮೃತ ವಿದ್ಯಾರ್ಥಿ ಅವಿರಾಜ್‌ ನಗರದ ಐಐಎಸ್ಸಿಯ ಇನ್‌ಸ್ಟ್ರುಮೆಂಟೇಶನ್‌ ಆ್ಯಂಡ್‌ ಅಪ್ಲೈಡ್‌ ಫಿಜಿಕ್ಸ್‌ ವಿಭಾಗದಲ್ಲಿ ಎಂಟೆಕ್‌ ವ್ಯಾಸಂಗ ಮಾಡುತ್ತಿದ್ದರು. ಐಐಎಸ್ಸಿ ಕ್ಯಾಂಪಸ್‌ನ ಬ್ಲಾಕ್‌ -2ರ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಅವಿರಾಜ್‌, ಮಂಗಳವಾರ ಹಾಸ್ಟೆಲ್‌ನ ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೂಡಲೇ ಸಹಪಾಠಿಗಳು ಅವಿರಾಜ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಅವಿರಾಜ್‌ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಸದಾಶಿವನಗರ ಠಾಣೆ ಪೊಲೀಸರು ಪರಿಶೀಲಿಸಿದ್ದಾರೆ. ಅವಿರಾಜ್‌ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಈ ಸಂಬಂಧ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.