ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ದೇಗುಲಕ್ಕೆ ಸೇರಿದ ಜಮೀನನ್ನು ಅರ್ಚಕರೊಬ್ಬರು ತಮ್ಮ ಹೆಸರಿಗೆ ಅಕ್ರಮ ಖಾತೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ತಾಲೂಕಿನ ಅಚ್ಚಪ್ಪನ ಕೊಪ್ಪಲು ಗ್ರಾಮಸ್ಥರು ಪಟ್ಟಣದ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ತಹಸೀಲ್ದಾರ್ ಕಚೇರಿ ಎದುರು ಆಗಮಿಸಿದ ಗ್ರಾಮಸ್ಥರು, ಗ್ರಾಮದ ಪುರಾತನ ಶ್ರೀಆಂಜನೇಯ ಸ್ವಾಮಿ ದೇವಾಯಕ್ಕೆ ಸೇರಿದ ಸರ್ವೆ ನಂ.152ರಲ್ಲಿ 16 ಗುಂಟೆ, ಸರ್ವೆ 02ರಲ್ಲಿ 21ಗುಂಟೆ, ಹಾಗೂ ಸರ್ವೆ ನಂ 02ರಲ್ಲಿ 38ಗುಂಟೆ ಖಾಲಿ ಜಮೀನನ್ನು ಈ ಹಿಂದೆ ಇದ್ದ ಅರ್ಚಕ ವೆಂಕಟಸುಬ್ಬ ಜೋಯಿಸ್ ಎಂಬ ದೇವಾಲಯದ ಅರ್ಚಕರು ತಮ್ಮ ಹೆಸರಿಗೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಮಂಜೂರು ಮಾಡಿಸಿಕೊಂಡು ಅನ್ಯಕ್ರಾಂತಿ ಕೂಡ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.ದೇವರ ಹೆಸರಿನಲ್ಲಿದ್ದ ಈ ಜಮೀನಿನಲ್ಲಿ ಗ್ರಾಮದಲ್ಲಿ ಎಲ್ಲ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದೇವು. ಇದುವರೆಗೆ ಯಾರ ಗಮನಕ್ಕೆ ಬಾರದೆ ಇರುವುದು ಗ್ರಾಮಸ್ಥರನ್ನೇ ವಂಚಿಸಲಾಗಿದೆ ಎಂದು ಆರೋಪಿಸಿದರು. ಸರ್ವೆ ನಂ 152ರಲ್ಲಿರುವ 16ಗುಂಟೆ ಜಮೀನಿನಲ್ಲಿ ಗ್ರಾಮಕ್ಕೆ ಸೇರಿದ ಶ್ರೀ ಆಂಜನೇಯ ದೇವಾಲಯವಿದೆ. ದೇವಾಲಯದ ಸುತ್ತಲೂ ಸರ್ಕಾರದ ವತಿಯಿಂದ ಸಮುದಾಯ ಭವನವಿದೆ. ಜೊತೆಗೆ ಸುತ್ತಲೂ ಗ್ರಾಪಂ ವತಿಯಿಂದ ಕಾಂಪೌಂಡ್ ಸಹ ನಿರ್ಮಿಸಿ, ಜಿಪಂ ವತಿಯಿಂದ ಗ್ರಾಮಕ್ಕೆ ಕುಡಿಯುವ ನೀರಿನ ಟ್ಯಾಂಕ್ ಕೂಡ ನಿರ್ಮಿಸಲಾಗಿದೆ.
ಅಲ್ಲದೇ ಕೃಷಿ ಸಹಾಯಕರ ಕಚೇರಿ, ಗ್ರಾಪಂ ವತಿಯಿಂದ ಕಿರು ನೀರು ಸರಬರಾಜು ಘಟಕ, ದೇವಾಲಯದ ಕೊಳ ಇದೆ. ಇಷ್ಟಿದ್ದರೂ ಈಗಿರುವ ಅರ್ಚಕ ಪ್ರಸನ್ನ 16ಗುಂಟೆ ಜಮೀನನ್ನು ಗ್ರಾಮಕ್ಕೆ ಸೇರಿದ್ದು ಎಂಬುದಾಗಿ ಬರೆದುಕೊಟ್ಟಿದ್ದಾರೆ. ಆದರೂ ಕಚೇರಿಗಳಲ್ಲಿ ಒಳಗೊಳಗೆ ಇದೇ ಜಮೀನನ್ನು ಅನ್ಯಕ್ರಾಂತಿ ಮಾಡಿಸಿ ಗ್ರಾಮಸ್ಥರಿಗೆ ವಂಚಿಸಲಾಗಿದೆ ಆಕ್ರೋಶ ವ್ಯಕ್ತಪಡಿಸಿದರು.ಇದೀಗ ಜಮೀನು ದೇವಾಲಯ ನಮ್ಮದೇ ಎಂಬುದಾಗಿ ತಿಳಿಸುತ್ತಿದ್ದಾರೆ. ಕೂಡಲೇ ಸರ್ಕಾರ ಖಾತೆಯನ್ನು ರದ್ದುಗೊಳಿಸಿ ಗ್ರಾಮಕ್ಕೆ ಸೇರಿರುವ ಜಮೀನನ್ನು ಗ್ರಾಮದ ಜನರ ಉಪಯೋಗಕ್ಕೆ ಬಿಡಿಸಿಕೊಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಪರುಶುರಾಮ್ ಅವರಿಗೆ ದೂರು ಸಲ್ಲಿಸಿ ಮನವಿ ಮಾಡಿದರು.ಈ ವೇಳೆ ಗ್ರಾಮ ಯಜಮಾನರಾದ ಪಟೇಲ್ ಪಿ. ಬೋರೇಗೌಡ, ಕೃಷ್ಣೇಗೌಡ, ನಾರಾಯಣ, ಲೋಕೇಶ್ ರಮೇಶ್, ಬಸವರಾಜು, ನಿಂಗರಾಜು, ತಮ್ಮಣ್ಣ, ಕರೀಗೌಡ, ಕುಮಾರ್, ಗ್ರಾ.ಪಂ ಮಾಜಿ ಅಧ್ಯಕ್ಷ ರವಿಲಕ್ಷ್ಮಣ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಹಾಜರಿದ್ದರು.