ಬೊಳಿಯಾರು ಪ್ರಕರಣದಲ್ಲಿ ನಿಷ್ಪಕ್ಷಪಾತ ಕ್ರಮ: ಗುಂಡೂರಾವ್‌ ಆದೇಶ

| Published : Jun 11 2024, 01:31 AM IST

ಸಾರಾಂಶ

ಉಳ್ಳಾಲದ ಬೊಳಿಯಾರಿನಲ್ಲಿ ಚೂರಿ ಇರಿತ ಹಾಗೂ ಹಲ್ಲೆ ಘಟನೆಗೆ ಸಂಬಂಧಿಸಿ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ಕ್ರಮ ಕೈಗೊಳ್ಳಲಿದೆ. ಕಾನೂನನ್ನು ಯಾರೇ ಕೈಗೆತ್ತಿಕೊಂಡರೂ ಕ್ಷಮಿಸಲಾಗದು, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಉಳ್ಳಾಲದ ಬೊಳಿಯಾರಿನಲ್ಲಿ ಚೂರಿ ಇರಿತ ಹಾಗೂ ಹಲ್ಲೆ ಘಟನೆಗೆ ಸಂಬಂಧಿಸಿ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ಕ್ರಮ ಕೈಗೊಳ್ಳಲಿದೆ. ಕಾನೂನನ್ನು ಯಾರೇ ಕೈಗೆತ್ತಿಕೊಂಡರೂ ಕ್ಷಮಿಸಲಾಗದು, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋಳಿಯಾರು ಘಟನೆಗೆ ಕಾರಣ ಏನೇ ಇರಬಹುದು. ಕಾನೂನು ಕೈಗೆತ್ತಿಕೊಂಡರೆ ಯಾರನ್ನೂ ಕ್ಷಮಿಸಲಾಗದು. ಅಲ್ಲಿ ಏನಾಗಿದೆ ಎಂಬ ಬಗ್ಗೆ ಪೊಲೀಸ್‌ ವರದಿ ಬರಲಿದೆ. ಇಂತಹ ವಿಚಾರಗಳಲ್ಲಿ ಸಂಯಮ ಕಾಪಾಡುವುದು ನಮ್ಮ ಜವಾಬ್ದಾರಿ. ಯಾರೇ ಪ್ರಚೋದನೆ ಮಾಡಿದರೂ ನಮ್ಮ ನಡವಳಿಕೆ, ಸಂಯಮ ಮೀರಬಾರದು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ನೆಲೆಯಾಗಲು ಜನರು ಸಹಕರಿಸಬೇಕು ಎಂದು ಹೇಳಿದರು.ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್‌ ಈಗಾಗಲೇ ರಚನೆಯಾಗಿದೆ. ಕಳೆದ 3 ತಿಂಗಳು ಚುನಾವಣೆಯಲ್ಲಿ ನಿರತವಾಗಿದ್ದು, ಮುಂದೆ ಈ ಬಗ್ಗೆ ಗಮನ ಹರಿಸಲಾಗುವುದು. ಯಾವುದೇ ಪ್ರಚೋದನಕಾರಿ ಶಕ್ತಿಗಳಿದ್ದರೆ ಯಾವುದೇ ಧರ್ಮ, ಜಾತಿ, ಭಾಷೆಯವರಾಗಿದ್ದರೂ ಅಂಥವರ ವಿರುದ್ಧ ಕ್ರಮ ಆಗಲಿದೆ ಎಂದರು.

ದ.ಕ. ಜಿಲ್ಲೆಯಲ್ಲಿ ಲೋಕಸಭೆ ಸೋಲಿನ ಅಂತರ ಈ ಬಾರಿ ಕಡಿಮೆ ಆಗಿದೆ. ಅದು ಉತ್ತಮ ಬೆಳವಣಿಗೆ. ಪದ್ಮರಾಜ್‌ ಆರ್‌. ಅವರು ಉತ್ತಮ ಅಭ್ಯರ್ಥಿಯಾಗಿದ್ದರು, ಉತ್ತಮ ಶ್ರಮ ಪಟ್ಟಿದ್ದಾರೆ. ದ.ಕ. ಜಿಲ್ಲೆಯಲ್ಲಿ ನಾಯಕರು, ಕಾರ್ಯಕರ್ತರು ಒಳ್ಳೆಯ ಪ್ರಯತ್ನ ಮಾಡಿದ್ದಾರೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.................

ಮೋದಿಗೆ ತಗ್ಗಿಬಗ್ಗಿ ನಡೆಯೋ ಸ್ಥಿತಿ: ಗುಂಡೂರಾವ್‌

ಚುನಾವಣೆಗೆ ಮೊದಲು ಎಲ್ಲರನ್ನೂ ಧಿಕ್ಕರಿಸಿ ತಾನೇ ಭಗವಂತ ಅಂದುಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಸಾಮಾನ್ಯ ಮನುಷ್ಯರಾಗಿದ್ದಾರೆ. ಚುನಾವಣೆ ಫಲಿತಾಂಶ ಬಂದ ಬಳಿಕ ತಗ್ಗಿ ಬಗ್ಗಿ ನಡೆಯುವ ಪರಿಸ್ಥಿತಿ ಎದುರಾಗಿದೆ. ಇದು ದೇಶ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉತ್ತಮ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.