ಪಟ್ಟಣ ಪಂಚಾಯಿತಿಗೆ ಸೇರಿದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ನಡೆದಿರುವ ಅಕ್ರಮ ಖಾತೆಗಳನ್ನು ರದ್ದುಪಡಿಸಿ, ಸಾರ್ವಜನಿಕ ಆಸ್ತಿಯನ್ನು ಉಳಿಸಬೇಕೆಂದು ಆಗ್ರಹಿಸಿ ಕಳೆದ 16 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಂಸದ ಸುನಿಲ್ ಬೋಸ್ ಅವರ ಭರವಸೆಯ ಹಿನ್ನೆಲೆಯಲ್ಲಿ ತಾತ್ಕಾಲಿಕ ತೆರೆ ಬಿದ್ದಿದೆ.
ಕನ್ನಡಪ್ರಭ ವಾರ್ತೆ ಯಳಂದೂರು
ಪಟ್ಟಣ ಪಂಚಾಯಿತಿಗೆ ಸೇರಿದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ನಡೆದಿರುವ ಅಕ್ರಮ ಖಾತೆಗಳನ್ನು ರದ್ದುಪಡಿಸಿ, ಸಾರ್ವಜನಿಕ ಆಸ್ತಿಯನ್ನು ಉಳಿಸಬೇಕೆಂದು ಆಗ್ರಹಿಸಿ ಕಳೆದ 16 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಂಸದ ಸುನಿಲ್ ಬೋಸ್ ಅವರ ಭರವಸೆಯ ಹಿನ್ನೆಲೆಯಲ್ಲಿ ತಾತ್ಕಾಲಿಕ ತೆರೆ ಬಿದ್ದಿದೆ.ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನಿಲ್ ಬೋಸ್ ಗುರುವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರ ಅಹವಾಲು ಆಲಿಸಿದರು. ಪ್ರತಿಭಟನಾಕಾರರು ತಮ್ಮ ಬಳಿ ಇದ್ದ ಮೂಲ ದಾಖಲೆಗಳು ಹಾಗೂ ಅಕ್ರಮ ಖಾತೆಗೆ ಸಂಬಂಧಿಸಿದ ವಿವರಗಳನ್ನು ಸಂಸದರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ ಸಂಸದರು, ಸಾರ್ವಜನಿಕ ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈಗಾಗಲೇ ಜಿಲ್ಲಾಡಳಿತ ರಚಿಸಿರುವ ತನಿಖಾ ತಂಡವು ಮೂಲ ದಾಖಲೆಗಳನ್ನು ಪರಿಶೀಲಿಸಿ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಕಾನೂನಿನ ಚೌಕಟ್ಟಿನಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಅಕ್ರಮ ಖಾತೆಗಳ ವಿರುದ್ಧ ನಡೆಯುತ್ತಿರುವ ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ತಿಳಿಸಿದರು.20 ದಿನಗಳಲ್ಲಿ ತನಿಖೆ ಪೂರ್ಣ:
ಅಧಿಕಾರಿಗಳಿಂದ ಸಂಸದರಿಗೆ ಮಾಹಿತಿ ಈ ವೇಳೆ ಅಧಿಕಾರಿಗಳು ಮಾತನಾಡಿ, ಪಟ್ಟಣ ಪಂಚಾಯಿತಿಗೆ ಸೇರಿದ ಜಾಗದ ಮೂಲ ದಾಖಲೆಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ತನಿಖೆಗಾಗಿ ಅಧಿಕಾರಿಗಳ ತಂಡವನ್ನು ನೇಮಕ ಮಾಡಲಾಗಿದೆ. ಗುರುವಾರವೂ ಈ ಸಂಬಂಧ ಸಭೆ ನಡೆಯಲಿದ್ದು, ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ಚರ್ಚಿಸಲಾಗುವುದು. ಮುಂದಿನ 20 ದಿನಗಳೊಳಗೆ ತನಿಖಾ ವರದಿ ಸಲ್ಲಿಸುವುದಾಗಿ ತಿಳಿಸಿದರು.ಒಂದು ವೇಳೆ ತನಿಖೆಯಲ್ಲಿ ಅಕ್ರಮ ಖಾತೆಗಳು ದೃಢಪಟ್ಟರೆ ಅವುಗಳನ್ನು ಕಾನೂನು ಪ್ರಕಾರ ರದ್ದುಪಡಿಸಿ, ಜಾಗವನ್ನು ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಸಂಸದರ ಮಾತಿಗೆ ಮನ್ನಣೆ ನೀಡಿ ಪ್ರತಿಭಟನೆ ಹಿಂಪಡೆದ ಹೋರಾಟಗಾರರು:ನಂತರ ಪ್ರತಿಭಟನಾಕಾರರು ಮಾತನಾಡಿ, ಕಳೆದ 16 ದಿನಗಳಿಂದ ನ್ಯಾಯಕ್ಕಾಗಿ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದೇವೆ. ಇಷ್ಟು ದಿನಗಳ ಕಾಲ ನಮ್ಮ ಅಹವಾಲಿಗೆ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ಆದರೆ ಇಂದು ಸಂಸದ ಸುನಿಲ್ ಬೋಸ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆಗಳನ್ನು ಆಲಿಸಿ, ದಾಖಲೆಗಳನ್ನು ಪರಿಶೀಲಿಸಿ, ಅಧಿಕಾರಿಗಳಿಂದಲೇ 20 ದಿನಗಳೊಳಗೆ ತನಿಖಾ ವರದಿ ನೀಡುವ ಭರವಸೆ ಕೊಡಿಸಿದ್ದಾರೆ.
ನಮ್ಮ ಸಮುದಾಯದ ಯುವ ನಾಯಕ ಸುನಿಲ್ ಬೋಸ್ ಅವರ ಭರವಸೆಗೆ ಗೌರವ ನೀಡಿ ಸದ್ಯಕ್ಕೆ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಡುತ್ತಿದ್ದೇವೆ. ಆದರೆ 20 ದಿನಗಳೊಳಗೆ ನಮಗೆ ನ್ಯಾಯ ದೊರೆಯದಿದ್ದರೆ ಮತ್ತಷ್ಟು ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.ದಲಿತರ ಸಮಸ್ಯೆಗಳಿಗೆ ಸ್ಪಂದಿಸಿದ ಸುನಿಲ್ ಬೋಸ್: ಹೋರಾಟಗಾರರ ಮೆಚ್ಚುಗೆ
ಪ್ರತಿಭಟನಾ ಸ್ಥಳಕ್ಕೆ ಸಂಸದ ಸುನಿಲ್ ಬೋಸ್ ಅವರ ಭೇಟಿ ಹಾಗೂ ಹೋರಾಟಗಾರರ ಅಹವಾಲು ಆಲಿಸಿ ಅಧಿಕಾರಿಗಳಿಗೆ ಗಡುವು ನೀಡಿರುವುದು ಪ್ರತಿಭಟನಾಕಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.ಮಾಜಿ ಸಂಸದ ದಿವಂಗತ ಶ್ರೀನಿವಾಸ ಪ್ರಸಾದ್ ಅವರ ನಂತರ ದಲಿತರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕನಾಗಿ ಸುನಿಲ್ ಬೋಸ್ ಅವರು ಹೊರಹೊಮ್ಮುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ಕೆಲವು ಹೋರಾಟಗಾರರು ವ್ಯಕ್ತಪಡಿಸಿದರು.
ಒಟ್ಟಾರೆ, 16 ದಿನಗಳ ಸುದೀರ್ಘ ಹೋರಾಟಕ್ಕೆ ಸದ್ಯಕ್ಕೆ ವಿರಾಮ ದೊರೆತಿದ್ದು, ಇದೀಗ ಎಲ್ಲರ ಚಿತ್ತ ಮುಂದಿನ 20 ದಿನಗಳ ತನಿಖಾ ವರದಿಯತ್ತ ನೆಟ್ಟಿದೆ. ಅಂಬೇಡ್ಕರ್ ಉದ್ಯಾನಕ್ಕೆ ಮೀಸಲಿಟ್ಟ ಸಾರ್ವಜನಿಕ ಜಾಗ ಅಕ್ರಮ ಖಾತೆಗಳಿಂದ ಮುಕ್ತವಾಗಬೇಕಿದೆ.