ಶಾಲಾ ಹಿಂಭಾಗದಲ್ಲೇ ಅಕ್ರಮ ಚಟುವಟಿಕೆ, ಡಿಸಿಗೆ ದೂರು

| Published : Jun 13 2024, 12:54 AM IST

ಶಾಲಾ ಹಿಂಭಾಗದಲ್ಲೇ ಅಕ್ರಮ ಚಟುವಟಿಕೆ, ಡಿಸಿಗೆ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಹಳೇ ಹುಬ್ಬಳ್ಳಿಯ 61ನೇ ವಾರ್ಡಿನ ಸದಾಶಿವ ನಗರದಲ್ಲಿರುವ ಸರ್ಕಾರಿ ಉರ್ದು ಶಾಲೆಯ ಹಿಂಭಾಗದಲ್ಲಿ ಹಲವು ತಿಂಗಳಿಂದ ಅಕ್ರಮ ಚಟುವಟಿಕೆ ನಡೆಯುತ್ತಿದೆ.

ಹುಬ್ಬಳ್ಳಿ:

ಶಾಲಾ ಹಿಂಭಾಗದಲ್ಲಿಯೇ ಗಾಂಜಾ ಮಾರಾಟ ಮತ್ತು ಸೇವನೆ, ಅಕ್ರಮ ಚಟುವಟಿಕೆ ನಡೆಯುತ್ತಿದೆ. ಪಾಲಿಕೆ ಹಾಗೂ ಪೊಲೀಸ್‌ ಆಯುಕ್ತರಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಕ್ರಮಕೈಗೊಳ್ಳುತ್ತಿಲ್ಲ. ನೀವಾದರೂ ನಮಗೆ ನ್ಯಾಯದೊರಕಿಸಿ ಕೊಡಿ.!

ಇದು ಇಲ್ಲಿನ ತಾಲೂಕು ಆಡಳಿತ ಭವನದಲ್ಲಿ ಬುಧವಾರ ಜಿಲ್ಲಾಧಿಕಾರಿ ದಿವ್ಯಪ್ರಭು ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ಹುಸೇನಬಾಷಾ ತಳೇವಾಡ ಮನವಿ ಮಾಡಿಕೊಂಡ ಪರಿಯಿದು.

ಇಲ್ಲಿನ ಹಳೇ ಹುಬ್ಬಳ್ಳಿಯ 61ನೇ ವಾರ್ಡಿನ ಸದಾಶಿವ ನಗರದಲ್ಲಿರುವ ಸರ್ಕಾರಿ ಉರ್ದು ಶಾಲೆಯ ಹಿಂಭಾಗದಲ್ಲಿ ಹಲವು ತಿಂಗಳಿಂದ ಅಕ್ರಮ ಚಟುವಟಿಕೆ ನಡೆಯುತ್ತಿದೆ. ರಾತ್ರಿ ಕೆಲವು ಪುಂಡರು ಈ ಶಾಲೆಯಲ್ಲಿಯೇ ಗಾಂಜಾ ಸೇವನೆ, ಅಶ್ಲೀಲ ವಿಡಿಯೋ ವೀಕ್ಷಣೆ ಸೇರಿದಂತೆ ಹಲವು ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಪ್ರಶ್ನಿಸಿದರೆ ಅಂಥವರ ಮೇಲೆ ಬೆದರಿಕೆ ಹಾಕುವ ಕಾರ್ಯವಾಗುತ್ತಿದೆ. ಈಗಾಗಲೇ ಪಾಲಿಕೆ ಹಾಗೂ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮವಾಗಿಲ್ಲ. ನೀವಾದರೂ ಸ್ಪಂದಿಸಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಪೊಲೀಸ್‌ ಆಯುಕ್ತರಿಗೆ ಮಾತನಾಡಿ ಸಮಸ್ಯೆ ಪರಿಹರಿಸುವ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.

ಅಧಿಕಾರಿಯ ವರ್ಗಾವಣೆಗೆ ಆದೇಶವಾದರೂ, ರಿಲೀವ್ ಆಗಿಲ್ಲ. ಎಸ್‌ಸಿ, ಎಸ್‌ಟಿ ಯುವತಿಯರು ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ದೌರ್ಜನ್ಯ ನಡೆದಾಗ ಯಾವೊಬ್ಬ ಹಿರಿಯ ಅಧಿಕಾರಿಯೂ ಅವರ ಮನೆಗೆ ಭೇಟಿ ನೀಡುವುದಿಲ್ಲ. ಕೇವಲ ಮೇಲ್ಜಾತಿಯ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಇ-ಸ್ವತ್ತು ವಿಳಂಬ, 2018ರಲ್ಲೇ ಜಮೀನು ಸರ್ವೇ ಮಾಡುವಂತೆ ಅರ್ಜಿ ಸಲ್ಲಿಸಿದ್ದರೂ ಮಾಡಿಲ್ಲ, ಜನತಾ ಬಜಾರ ಸೂಪರ್ ಮಾರ್ಕೆಟ್ ಅಂಗಡಿಗಳು ಹಸ್ತಾಂತರವಾಗದೆ ಇರುವುದು, ಒಂದೇ ಆಧಾರ್‌ ನಂಬರ್‌ ಇಬ್ಬರ ಹೆಸರಿನಲ್ಲಿ ಇರುವುದು, ಸರ್ಕಾರಿ ಜಮೀನು ಒತ್ತುವರಿ ಕುರಿತು, ಕುಡಿಯುವ ನೀರಿನ ಸಮಸ್ಯೆ ಹಾಗೂ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಒಟ್ಟು 54 ಅರ್ಜಿಗಳು ಸಲ್ಲಿಕೆಯಾದವು. ಇವುಗಳಲ್ಲಿ 37 ಅರ್ಜಿಗಳು ಹುಬ್ಬಳ್ಳಿ ನಗರಕ್ಕೆ ಸೀಮಿತವಾಗಿದ್ದರೆ, 17 ಅರ್ಜಿಗಳು ಗ್ರಾಮೀಣ ಪ್ರದೇಶಗಳಿಗೆ ಸಂಬಂಧಪಟ್ಟಿದ್ದವು.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ದಿವ್ಯಪ್ರಭು, ಪಾಲಿಕೆಗೆ ಸಂಬಂಧಿಸಿದಂತೆ 20 ಅರ್ಜಿ ಸ್ವೀಕರಿಸಲಾಗಿದೆ. ರಸ್ತೆ, ಕೊಳಚೆ, ಮನೆ ನಿರ್ಮಾಣ, ಮೂಲ ಸೌಕರ್ಯಗಳ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಇತ್ಯರ್ಥ ಪಡಿಸುವಂತೆ ಸೂಚಿಸಲಾಗುವುದು. ಅಲ್ಲದೆ, ಪೋರ್ಟಲ್‌ಗಳಿಗೆ ಅರ್ಜಿಗಳನ್ನು ಅಪ್‌ಲೋಡ್ ಮಾಡುವ ಮೂಲಕ ಪರಿಹಾರಕ್ಕೆ ಟೈಮ್‌ಲೈನ್ ಫಿಕ್ಸ್ ಮಾಡುವುದಾಗಿ ತಿಳಿಸಿದರು.

ಗ್ರಾಮೀಣ ಭಾಗದಿಂದ ಹೆಚ್ಚಾಗಿ ಪಿಂಚಣಿ, ಆಧಾರ್ ಕಾರ್ಡ್, ಜಮೀನು ವ್ಯಾಜ್ಯ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಅವುಗಳ ಶೀಘ್ರ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಸ್ಥಳದಲ್ಲೇ ಪರಿಹರಿಸಬಹುದಾದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಇನ್ನುಳಿದಂತೆ ಸ್ಥಳ ಪರಿಶೀಲನೆ ಹಾಗೂ ಸರ್ವೇ ಮಾಡಬೇಕಾದ ಸಮಸ್ಯೆಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡು ಸ್ಪಂದಿಸಲಾಗುವುದು ಎಂದರು.

ಗ್ರಾಮೀಣ ಮತ್ತು ಶಹರ ತಹಸೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಾರಕ್ಕೊಮ್ಮೆ ಅಹವಾಲು ಸ್ವೀಕಾರ:

ವಾರಕ್ಕೆ ಒಮ್ಮೆಯಾದರೂ ಹುಬ್ಬಳ್ಳಿಗೆ ಆಗಮಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಕ್ರಮಕೈಗೊಳ್ಳಲಾಗುವುದು. ಜನರಿಗೆ ಆಗುತ್ತಿರುವ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ. ನಿರ್ದಿಷ್ಟ ಅವಧಿಯಲ್ಲಿ ಜನರ ಸಮಸ್ಯೆಗಳು ಬಗೆ ಹರಿಯಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ತಿಳಿಸಿದರು.