ಒಳ ಚರಂಡಿ ಮಂಡಳಿಯು 2014-15ನೇ ಪ್ರತ್ಯೇಕ ಜಾಕ್‌ವಾಲ್‌ ಹಾಗೂ ನಿರಂತರ ವಿದ್ಯುತ್‌ ಸಂಪರ್ಕದ ಪ್ರತ್ಯೇಕ ವಿದ್ಯುತ್‌ ಲೈನ್‌ ಅಳವಡಿಸಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಪಟ್ಟಣಕ್ಕೆ ಪ್ರತ್ಯೇಕವಾಗಿ ಕುಡಿಯುವ ನೀರಿನ ಯೋಜನೆಗೆ ನಿರಂತರ ವಿದ್ಯುತ್‌ ಸಂಪರ್ಕ ಜಾಲಗಳಿಗೆ ಜೆಸ್ಕಾಂ ಇಲಾಖೆಯೇ ಅನಧಿಕೃತ, ಅಕ್ರಮ ಸಂಪರ್ಕಗಳನ್ನು ಕಲ್ಪಿಸಿದೆ.

ಹೌದು, ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ 40 ಸಾವಿರ ಜನಸಂಖ್ಯೆಗೆ ಸಕಾಲದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯು 2014-15ನೇ ಪ್ರತ್ಯೇಕ ಜಾಕ್‌ವಾಲ್‌ ಹಾಗೂ ನಿರಂತರ ವಿದ್ಯುತ್‌ ಸಂಪರ್ಕದ ಪ್ರತ್ಯೇಕ ವಿದ್ಯುತ್‌ ಲೈನ್‌ ಅಳವಡಿಸಿದೆ. ಈ ನಿರಂತರ ವಿದ್ಯುತ್‌ ಲೈನ್‌ ಹೂವಿನಹಡಗಲಿಯಿಂದ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ನ ಬಳಿ ಇರುವ ಜಾಕ್ವೆಲ್‌ವರೆಗೂ ಇದೆ. ಇದರ ಮಧ್ಯದಲ್ಲಿ ಬರುವ ನವಲಿ, ಹಳೆ ನವಲಿ, ರಾಜವಾಳ ಜಾಕ್ವೆಲ್‌, ರಾಜವಾಳದ ರೆಡ್ಡಿ ಮನೆ ಮತ್ತು ತೋಟ ಹಾಗೂ ಮೋಟರ್‌ ಪಂಪ್‌ಸೆಟ್‌ಗೆ, ಹೊನ್ನೂರು ಕ್ರಾಸ್‌ ಬಳಿ ಇರುವ ರೈತರ ಗದ್ದೆಗಳ ಪಂಪ್‌ಸೆಟ್‌ಗಳಿಗೆ, ಫಿಲ್ಟರ್‌ ಬೆಡ್‌ ಹತ್ತಿರದಿಂದ ಅಲ್ಯುಮಿನಿಯಂ 10- ಎಂಎಂ ವೈರ್‌ನಿಂದ ಹೊನ್ನೂರು ಮಾರ್ಗವಾಗಿ ರೆಡ್ಡಿ ತೋಟ ಮತ್ತು ಗದ್ದೆಗಳ ಪಂಪ್‌ಸೆಟ್‌ಗಳು ಸೇರಿದಂತೆ ನೂರಾರು ರೈತರ ಪಂಪ್‌ಸೆಟ್‌ಗಳಿಗೆ ಕೆಲ ಪ್ರಭಾವಿಗಳ ತೋಟ ಮತ್ತು ಮನೆಗಳಿಗೆ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ನೀಡಿದ್ದಾರೆ.

ಕುಡಿವ ನೀರಿನ ಯೋಜನೆಯ ವಿದ್ಯುತ್‌ ಲೈನ್‌ಗೆ ಹತ್ತಾರು ಕಡೆಗಳಲ್ಲಿ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ನೀಡಿರುವ ಪರಿಣಾಮವಾಗಿ ಪಟ್ಟಣದ ಕುಡಿವ ನೀರಿನ ಯೋಜನೆಯ ಮೋಟರ್‌ಗಳಿಗೆ ಗುಣಮಟ್ಟದ ವಿದ್ಯುತ್‌ನಲ್ಲಿ ವ್ಯತ್ಯಯವಾಗುತ್ತಿದೆ. ಅನೇಕ ಬಾರಿ ಕುಡಿವ ನೀರಿನ ಮೋಟರ್‌ಗಳು ಸುಟ್ಟು ಹೋಗಿವೆ. ಇದರಿಂದ ಪಟ್ಟಣಕ್ಕೆ ಸರಿಯಾಗಿ ಕುಡಿವ ನೀರು ಪೂರೈಕೆ ಮಾಡುವಲ್ಲಿ ಪುರಸಭೆ ಸಿಬ್ಬಂದಿ ಹಗಲು ರಾತ್ರಿ ಹರಸಾಹಸ ಮಾಡುತ್ತಿದ್ದಾರೆ.

ನಿರಂತರ ವಿದ್ಯುತ್‌ ಸಂಪರ್ಕ ಲೈನ್‌ಗಳಿಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿರುವ ಕಾರಣ ಪುರಸಭೆಗೆ ವಿದ್ಯುತ್‌ ಬಿಲ್‌ ಹೆಚ್ಚಳವಾಗುವ ಸಂಭವವಿದೆ. ಕೂಡಲೇ ಅಕ್ರಮ ಸಂಪರ್ಕಗಳನ್ನು ತೆರವು ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

ನಿರಂತರ ವಿದ್ಯುತ್‌ ಸಂಪರ್ಕ ಲೈನ್‌ಗೆ ಕೆಲವು ಕಡೆಗಳಲ್ಲಿ ಸಂಪರ್ಕ ಕಲ್ಪಿಸಿದ್ದೇವೆ. ಕುಡಿವ ನೀರಿನ ಯೋಜನೆಗೆ ಅಕ್ರಮ ಸಂಪರ್ಕಗಳನ್ನು ತೆರವು ಮಾಡಲು ವಿಚಕ್ಷಣ ದಳದ ಗಮನಕ್ಕೆ ತರುತ್ತೇವೆ ಎನ್ನುತ್ತಾರೆ ಜೆಸ್ಕಾಂ ಇಲಾಖೆ ಎಇಇ ಕೇದಾರನಾಥ.

ಪಟ್ಟಣದ ಕುಡಿವ ನೀರಿನ ಯೋಜನೆಯ ನಿರಂತರ ವಿದ್ಯುತ್‌ ಸಂಪರ್ಕದ ಲೈನ್‌ಗೆ ಕೆಲ ಅನಧಿಕೃತ ಸಂಪರ್ಕಗಳನ್ನು ಕಲ್ಪಿಸಿದ್ದಾರೆ. ಇದರಿಂದ ಕುಡಿವ ನೀರು ಪೂರೈಕೆಗೆ ತೊಂದರೆ ಮತ್ತು ಅನೇಕ ಬಾರಿ ಮೋಟರ್‌ಗಳು ಸುಟ್ಟಿವೆ. ಕೂಡಲೇ ಇದಕ್ಕೆ ಕ್ರಮ ವಹಿಸಬೇಕೆಂದು ಜೆಸ್ಕಾಂ ಇಲಾಖೆಗೆ ದಾಖಲೆಗಳೊಂದಿಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಹೂವಿನಹಡಗಲಿ ಪುರಸಭೆ ಮುಖ್ಯಾಧಿಕಾರಿ ಇಮಾಮಸಾಹೇಬ್‌.