ಸಾರಾಂಶ
ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಹೊರವಲಯದ ಚಂದ್ರವನ ಆಶ್ರಮದ ಬಳಿ ಕಾವೇರಿ ನದಿ ತೀರ ಪ್ರದೇಶದಲ್ಲಿ ಕಾನೂನು ಬಾಹಿರ, ಅಕ್ರಮವಾಗಿ ಪರಿಸರಕ್ಕೆ ಧಕ್ಕೆ ಉಂಟಾಗುವ ರೀತಿ ರಿವರ್ ರಿಂಚ್ ರೆಸಾರ್ಟ್ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ನಾಗರೀಕ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣ ಪೊಲೀಸರಿಗೆ ದೂರು ನೀಡಿದರು.ವೇದಿಕೆ ಅಧ್ಯಕ್ಷ ಎಸ್.ಕೆ ಚಂದನ್ ನೇತೃತ್ವದಲ್ಲಿ ವಿವಿಧ ಸಂಘಟನೆಯ ಮುಖಂಡರು ಠಾಣೆ ಎದುರು ಆಗಮಿಸಿ ಸರ್ವೇ ನಂ.174/1ರಲ್ಲಿ ಅಕ್ರಮವಾಗಿ ಕಟ್ಟಡಕ್ಕೆ ಯಾವುದೇ ಪರವಾನಿಗೆ ಪಡೆಯದೆ ಕಾವೇರಿ ನದಿ ತೀರವನ್ನು ಒತ್ತುವರಿ ಮಾಡಿಕೊಂಡು ರೆಸಾರ್ಟ್ ನಿರ್ಮಿಸುತ್ತಿದ್ದಾರೆ ಎಂದು ದೂರಿದರು.
ಪರಿಸರ ಮಾಲಿನ್ಯಕ್ಕೆ ಧಕ್ಕೆ ಉಂಟಾಗಿ, ರಾತ್ರಿ ವೇಳೆಯಲ್ಲಿ ನದಿ ತೀರದಲ್ಲಿ ಡಿ.ಜೆ. ಪಾರ್ಟಿಗಳ ನಡೆಸಿ ತ್ಯಾಜ್ಯಗಳ ನದಿಗೆ ಬಿಟ್ಟು ಪರಿಸರ ಹಾಳು ಮಾಡುತ್ತಿದ್ದಾರೆ. ಜೊತೆಗೆ ಪಕ್ಕದಲ್ಲೇ ಇರುವ ಸೂಕ್ಷ್ಮ ಪ್ರದೇಶ ಪಕ್ಷಿಧಾಮಕ್ಕೂ ಇದರಿಂದ ಹಾನಿಯಾಗುತ್ತಿದೆ. ಇದರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಸಮೀದಪದಲ್ಲೇ ಪಕ್ಷಿಧಾಮ ಇದ್ದು, ಸುತ್ತಮುತ್ತಲಿನ ಪ್ರದೇಶವನ್ನ ಸೂಕ್ಷ್ಮ ವಲಯ ಎಂದು ಸರ್ಕಾರ ಘೋಷಣೆ ಮಾಡಿದ್ದರೂ ಡಿ.ಜೆ.ಸೌಂಡಿನಿಂದ ಪಕ್ಷಿಧಾಮದಲ್ಲಿರುವ ಪಕ್ಷಿಗಳು ವಾಸಿಸಲು ತೊಂದರೆ ಉಂಟಾಗುತ್ತಿದೆ. ಡಿ.31 ಹಾಗೂ ಜ.1ರಂದು ಹೆಚ್ಚಿನ ಪಾರ್ಟಿಗಳು ನಡೆಸುವ ಮುನ್ಸೂಚನೆಗಳಿದ್ದು, ಕೂಡಲೇ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ ಪ್ರಕಾಶ್ ಅವರಿಗೆ ಲಿಖಿತ ದೂರು ನೀಡಿದರು.
ಸರ್ವೇ ನಂ 174/1 ಹೊಂದಿಕೊಂಡಂತೆ ಮತ್ತೊಂದು ಸರ್ವೇ 174/2, 174/3ರಲ್ಲೂ ಕೂಡ ನಿಯಮಾವಳಿಗಳ ಗಾಳಿಗೆ ತೂರಿ ರೀಟ್ರೀಟ್ ರೆಸಾರ್ಟ್ ಇರುವುದನ್ನು ಆತ್ಮವೇದ ಎಂದು ಹೆಸರು ಬದಲಾಯಿಸಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಕೂಡಲೇ ಸ್ಥಳ ಪರಿಶೀಲಿಸಿ ಕ್ರಮ ತೆಗೆದುಕೊಂಡು, ರೆಸಾರ್ಟ್ ಮುಚ್ಚಿಸಬೇಕು ಎಂದು ಒತ್ತಾಯಿಸಿದರು.ಒಂದು ವೇಳೆ ಕ್ರಮ ಕೈಗೊಳ್ಳುವುದು ವಿಳಂಭವಾದಲ್ಲಿ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಮುಸ್ಕರ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ಕೆಂಪೇಗೌಡ ಯುವಶಕ್ತಿ ವೇದಿಕೆ ಅಧ್ಯಕ್ಷ ಕಾಳೇನಹಳ್ಳಿ ಮಹೇಶ್, ಮುಖಂಡ ಟಿ.ಲಕ್ಷ್ಮಿನಾರಾಯಣ, ರಘು ಪಿ. ಗೋಪಾಲ್ ದರಸಗುಪ್ಪೆ ಸೇರಿದಂತೆ ಇತರರು ಇದ್ದರು.